ಭಾಗಮಂಡಲ, ಜ. 9: ವಿದ್ಯಾರ್ಥಿಗಳು ವಿಜ್ಞಾನದ ವಿಷಯದತ್ತ ಹೆಚ್ಚಿನ ಆಸಕ್ತಿ ಬೆಳೆಸಿಕೊಳ್ಳಬೇಕು. ಪ್ರಕೃತಿಯು ನಮ್ಮ ಅವಶ್ಯಕತೆಗಳನ್ನು ಪೂರೈಸುತ್ತದೆ. ಆದರೆ ಬೇಡಿಕೆಗಳನ್ನಲ್ಲ. ಪ್ರಾಕೃತಿಕ ಸಂಪನ್ಮೂಲಗಳನ್ನು ಹಿತಮಿತವಾಗಿ ಬಳಸಿ ಉತ್ತಮ ಜೀವನ ಸಾಗಿಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಗಾಯಿತ್ರಿ ಹೇಳಿದರು.

ಭಾಗಮಂಡಲದ ಕಾವೇರಿ ಪ.ಪೂ. ಕಾಲೇಜಿನಲ್ಲಿ ಬೆಂಗಳೂರಿನ ಸಿಸ್ಕೋ ಸಂಭ್ರಮ ಹಾಗೂ ವೈ.ಎಫ್.ಎಸ್. ಸಹಯೋಗದೊಂದಿಗೆ ಶಾಲಾ ಸಭಾಂಗಣದಲ್ಲಿ ಆಹ್ವಾನಿತ ಹಿರಿಯ ಪ್ರಾಥಮಿಕ ಶಾಲೆಗಳ ವಿಜ್ಞಾನ ಗಣಿತ ವಸ್ತು ಪ್ರದರ್ಶನ ಕಾರ್ಯಕ್ರಮವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿದ್ಯಾಸಂಸ್ಥೆಯ ಅಧ್ಯಕ್ಷ ಹೊಸೂರು ಸತೀಶ್ ಕುಮಾರ್ ಜೋಯಪ್ಪ ಮಾತನಾಡಿ, ವಿಜ್ಞಾನವು ಜನರ ಬದುಕಿನಲ್ಲಿ ಹಾಸುಹೊಕ್ಕಾಗಿದೆ. ಶಿಕ್ಷಕರು ಮಕ್ಕಳಲ್ಲಿ ವಿಜ್ಞಾನ ವಿಷಯದಲ್ಲಿ ಆಸಕ್ತಿ ಬೆಳೆಸುವದರೊಂದಿಗೆ ಅವರಲ್ಲಿ ವೈಜ್ಞಾನಿಕ ಮನೋಭಾವನೆ ಹಾಗೂ ಸಂಶೋಧನಾ ಪ್ರವೃತ್ತಿ ಬೆಳೆಸಬೇಕು ಎಂದರು. ಈ ಸಂದರ್ಭ ಗೋಣಿಕೊಪ್ಪ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕ ಕೃಷ್ಣ ಚೈತನ್ಯ ಅವರಿಂದ ವೈವಿಧ್ಯಮಯ ಪಕ್ಷಿಗಳು ಹಾಗೂ ಗ್ರಹಗಳು ಹಾಗೂ ಪರಿಸರದ ಬಗ್ಗೆ ಸ್ಲೈಡ್ ಶೋ ಏರ್ಪಡಿಸಲಾಗಿತ್ತು. ಹೋಬಳಿ ವ್ಯಾಪ್ತಿಯ ಚೆಟ್ಟಿಮಾನಿ, ಅಯ್ಯಂಗೇರಿ, ಭಾಗಮಂಡಲ ಹಾಗೂ ಕೋರಂಗಾಲ ಶಾಲೆಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಪಾಲ್ಗೊಂಡಿದ್ದರು. ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡಿದ್ದು 75ಕ್ಕೂ ಅಧಿಕ ವಿಜ್ಞಾನ ಗಣಿತ ಮಾದರಿಗಳು ಪ್ರದರ್ಶಿಸಲ್ಪಟ್ಟವು. ಉತ್ತಮ ವಿಜ್ಞಾನ ಮಾದರಿಗಳಿಗೆ ಪುರಸ್ಕಾರ ನೀಡಲಾಯಿತು. ಚೆಟ್ಟಿಮಾನಿ ಗ್ರಾಮಪಂಚಾಯಿತಿ ಅಧ್ಯಕ್ಷ ಪಾಣತ್ತಲೆ ಜಯಪ್ರಕಾಶ್, ಶಿಕ್ಷಣ ಇಲಾಖೆಯ ಚಂದ್ರಹಾಸ್, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಶ್ರೀಧರ್ ಮತ್ತಿತರರು ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕಿ ವಿ.ವಿ. ಪೂರ್ಣಿಮ ಸ್ವಾಗತಿಸಿ, ಶಿಕ್ಷಕ ಎಂ.ಬಿ. ಲೋಕನಾಥ್ ನಿರೂಪಿಸಿ, ಎಂ.ಕೆ. ಅವಿನಾಶ್ ವಂದಿಸಿದರು. ಸಿಸ್ಕೋ ಸಂಭ್ರಮ ವತಿಯಿಂದ ವಸ್ತು ಪ್ರದರ್ಶನ, ವಿಜ್ಞಾನ ಗಣಿತ ವಸ್ತು ಪ್ರದರ್ಶನ ಗಮನಸೆಳೆದ ವಿಜ್ಞಾನ ಮಾದರಿಗಳು. ವಿದ್ಯಾರ್ಥಿಗಳು ರಚಿಸಿದ ಸಾವಯವ ಆಹಾರ ಪಿರಮಿಡ್ ಗಮನ ಸೆಳೆಯಿತು.