ವೀರಾಜಪೇಟೆ, ಜ. 9: ಕೊಡಗಿನ ಪುಣ್ಯ ಕ್ಷೇತ್ರ ಭಾಗಮಂಡಲದ ಕಾವೇರಿ ಹಾಗೂ ತಲಕಾವೇರಿಯಲ್ಲಿ ಹೊರಗಿನಿಂದ ಬಂದ ಪ್ರವಾಸಿಗರು ಕಾವೇರಿ ನದಿ ತೀರದಲ್ಲಿ ಅಡುಗೆ, ಮದ್ಯಪಾನ ಮಾಡಿ ಪರಿಸರವನ್ನು ಮಾಲಿನ್ಯಗೊಳಿಸುತ್ತಿದ್ದಾರೆ. ಇದನ್ನು ಜಿಲ್ಲಾಡಳಿತ ತಡೆಯಬೇಕು ಎಂದು ಜಯ ಕರ್ನಾಟಕ ಸಂಘಟನೆಯ ಮಡಿಕೇರಿ ತಾಲೂಕು ಸಮಿತಿ ಅಧ್ಯಕ್ಷ ಜಿನ್ನು ನಾಣಯ್ಯ ದೂರಿದ್ದಾರೆ.

ಪುಣ್ಯ ಕ್ಷೇತ್ರ ಹಾಗೂ ಭಕ್ತಿ ಪ್ರಧಾನವಾದ ಕಾವೇರಿ ಪ್ರದೇಶದಲ್ಲಿ ಭಕ್ತಾದಿಗಳೇ ಅಶುಚಿತ್ವಕ್ಕೆ ಅವಕಾಶ ನೀಡುವದು ಸರಿಯಲ್ಲ. ಇಂತಹ ಪ್ರದೇಶದಲ್ಲಿ ಭಕ್ತಾದಿಗಳಾಗಲಿ, ಪ್ರವಾಸಿಗರಾಗಲಿ ಸ್ವಯಂಪ್ರೇರಿತವಾಗಿ ಶುಚಿತ್ವ ಕಾಪಾಡಲು ಸಹಕರಿಸಬೇಕು. ಪುಣ್ಯ ಕ್ಷೇತ್ರದಲ್ಲಿ ಅಶುಚಿತ್ವ ಮಾಡುವವರನ್ನು ಪತ್ತೆ ಹಚ್ಚಲು ಭಾಗಮಂಡಲದಲ್ಲಿ ಪೊಲೀಸ್ ಸಿಬ್ಬಂದಿಗಳ ಸಂಖ್ಯೆ ಕಡಿಮೆ ಇದೆ ಎನ್ನುವ ದೂರಿದೆ. ಇದಕ್ಕೆ ಇಲಾಖೆಯ ಉನ್ನತಾಧಿಕಾರಿಗಳು ಸ್ಪಂದಿಸಿ ಪೊಲೀಸ್ ಸಿಬ್ಬಂದಿಗಳ ಸಂಖ್ಯೆಯನ್ನು ಏರಿಸಿ ಕ್ಷೇತ್ರದಲ್ಲಿ ಶುಚಿತ್ವಕ್ಕೆ ಆದ್ಯತೆ ನೀಡುವಂತಾಗಬೇಕು ಎಂದು ಜಿನ್ನು ನಾಣಯ್ಯ ಆಗ್ರಹಿಸಿದ್ದಾರೆ.