ಮಡಿಕೇರಿ, ಜ. 9: ಕನಿಷ್ಟ ವೇತನ ಮತ್ತು ಪಿಂಚಣಿ ನಿಗದಿಗಾಗಿ ಆಗ್ರಹಿಸಿ ತಾ. 17 ರಂದು ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲು ಕೊಡಗು ಜಿಲ್ಲಾ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಸಂಘಗಳ ಜಂಟಿ ಕ್ರಿಯಾ ಸಮಿತಿ ನಿರ್ಧರಿಸಿದೆ.

ಪತ್ರಿಕಾ ಹೇಳಿಕೆ ನೀಡಿರುವ ಸಮಿತಿಯ ಜಿಲ್ಲಾಧ್ಯಕ್ಷೆ ಎ.ಜಿ. ತಾರಾಮಣಿ, ಕನಿಷ್ಟ ವೇತನ ತಿಂಗಳಿಗೆ ರೂ. 18 ಸಾವಿರ ಹಾಗೂ ಪಿಂಚಣಿ ರೂ. 3 ಸಾವಿರ ನಿಗದಿಗೊಳಿಸಬೇಕು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ತಾ. 17 ರಂದು ಬೆಳಿಗ್ಗೆ 10 ಗಂಟೆಗೆ ನಗರದ ಫೀ.ಮಾ. ಕಾರ್ಯಪ್ಪ ವೃತ್ತದಿಂದ ಮುಖ್ಯ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಗುವದೆಂದು ತಿಳಿಸಿದ್ದಾರೆ.

ಇತ್ತೀಚೆಗೆ ನಡೆದ ಜಿಲ್ಲಾ ಸಮಿತಿ ಸಭೆಯಲ್ಲಿ ಸರ್ಕಾರ ಜಾರಿಗೊಳಿಸಿರುವ ಮಾತೃಪೂರ್ಣ ಯೋಜನೆಗಳ ಕುರಿತು ಚರ್ಚಿಸಲಾಯಿತು. ಕಾರ್ಯಕರ್ತರು ಈ ಯೋಜನೆಯ ಅನುಷ್ಠಾನಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಫಲಾನುಭವಿಗಳು ಮಧ್ಯಾಹ್ನದ ಊಟವನ್ನು ಸ್ವೀಕರಿಸಲು ಬರುತ್ತಿಲ್ಲ ಎನ್ನುವ ಅಸಹಾಯಕತೆ ಸಭೆಯಲ್ಲಿ ವ್ಯಕ್ತವಾಯಿತು ಎಂದು ತಾರಾಮಣಿ ಹೇಳಿದ್ದಾರೆ.

ಸಮಿತಿಯ ರಾಜ್ಯ ಸಂಘಟನಾ ಸದಸ್ಯೆ ಕೆ.ಕೆ. ಶಾರಾದ, ತಾಲೂಕು ಅಧ್ಯಕ್ಷೆ ವಿ.ಕೆ. ನಾಗರತ್ನ, ಖಜಾಂಚಿ ಎನ್.ಎ. ಗೀತಾ, ಕಾರ್ಯದರ್ಶಿ ಬಿ.ಎಂ. ಪುಷ್ಪಾವತಿ, ಕ್ಷೇಮಾಭಿವೃದ್ಧಿ ಕಾರ್ಯದರ್ಶಿ ಹೆಚ್.ಎ. ದೇವಮ್ಮಾಜಿ ಹಾಗೂ ವೀರಾಜಪೇಟೆ ಮತ್ತು ಸೋಮವಾರಪೇಟೆ ತಾಲೂಕು ಪದಾಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದು, ಪ್ರತಿಭಟನೆಗೆ ಬೆಂಬಲ ಸೂಚಿಸಿದರು ಎಂದು ಅವರು ತಿಳಿಸಿದ್ದಾರೆ.