ಶ್ರೀಮಂಗಲ, ಜ. 8 : ಪೊನ್ನಂಪೇಟೆ ತಾಲೂಕು ಪುನರಚನೆಗೆ ಅಗ್ರಹಿಸಿ ನಡೆಸುತ್ತಿರುವ 69ನೇ ದಿನದ ಪ್ರತಿಭಟನೆಯಲ್ಲಿ 21 ಗ್ರಾ.ಪಂ ವ್ಯಾಪ್ತಿಯಲ್ಲಿ ಸ್ವಯಂ ಪ್ರೇರಿತವಾಗಿ ಅಂಗಡಿ ಮುಂಗಟ್ಟುಗಳನ್ನು ಬೆಳಿಗ್ಗೆ 6 ಗಂಟೆಯಿಂದ 12 ಗಂಟೆಯ ವರೆಗೆ ಮುಚ್ಚುವದರ ಮೂಲಕ ಬೆಂಬಲವನ್ನು ವ್ಯಕ್ತ ಪಡಿಸಿ, ಪೊನ್ನಂಪೇಟೆ ಪಟ್ಟಣದಲ್ಲಿ ಜಮಾಯಿಸಿದ ಸಹಸ್ರಾರು ಸಂಖ್ಯೆಯ ಜನರು ಮೆರವಣಿಗೆ ನಡೆಸಿ ಪೊನ್ನಂಪೇಟೆ ತಾಲೂಕು ರಚನೆಗೆ ಒತ್ತಾಯಿಸಿದರು.
ಪೊನ್ನಂಪೇಟೆ ಬಸವೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಪ್ರತಿಭಟನಾ ಮೆರವಣಿಗೆಗೆ ಚಾಲನೆ ನೀಡಲಾಯಿತು. ಮೆರವಣಿಗೆಯು ಪೊನ್ನಂಪೇಟೆಯ ಗಾಂಧಿ ಪ್ರತಿಮೆಯವರೆಗೆ ಸಾಗಿ, ಅಲ್ಲಿ ಬಹಿರಂಗ ಸಾರ್ವಜನಿಕ ಸಭೆ ನಡೆಯಿತು. ಈ ಸಂದರ್ಭ ಸುಮಾರು ಒಂದು ಗಂಟೆಗಳ ಕಾಲ ರಸ್ತೆ ತಡೆ ನಡೆಯಿತು.
(ಮೊದಲ ಪುಟದಿಂದ) ಪ್ರತಿಭಟನೆಯಲ್ಲಿ ಬೆಳೆಗಾರರು, ವರ್ತಕರು, ವಿವಿಧ ಸಂಘ ಸಂಸ್ಥೆಗಳು, ರಾಜಕೀಯ ಪಕ್ಷದ ಮುಖಂಡರು, ಜನ ಪ್ರತಿನಿಧಿಗಳು, ವಿದ್ಯಾರ್ಥಿಗಳು, ಕಾರ್ಮಿಕರು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಪಾಲ್ಗೊಂಡು ಬೆಂಬಲ ವ್ಯಕ್ತ ಪಡಿಸಿದರು.
ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಪೊನ್ನಂಪೇಟೆ ತಾಲೂಕು ಪುನರಚನಾ ಸಮಿತಿಯ ಹೋರಾಟ ಕಾರ್ಯಾಧ್ಯಕ್ಷ ಚೆಪ್ಪುಡಿರ ಅರುಣ್ ಮಾಚಯ್ಯ ಕಳೆದ 68 ದಿನಗಳಿಂದ ರಾಜಕೀಯ ರಹಿತವಾಗಿ ಹೋರಾಟವನ್ನು ಮಾಡಲಾಗಿದೆ, ಈ ಬಗ್ಗೆ ಸರಕಾರಕ್ಕೆ ಮಾಹಿತಿ ಲಭ್ಯವಿದ್ದು ತಾ.9 ರಂದು (ಇಂದು) ಮಡಿಕೇರಿಗೆ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಅಗಮಿಸುತ್ತಿದ್ದಾರೆ, ಈ ಸಂದರ್ಭದಲ್ಲಿ ಪೊನ್ನಂಪೇಟೆ ತಾಲೂಕು ಘೋಷಣೆ ಮಾಡುವ ಆಶಾಭಾವನೆಯಿದೆ ಎಂದರು.
ತಾಲೂಕು ಹೋರಾಟ ಸಮಿತಿಯ ಗೌರವಾಧ್ಯಕ್ಷ, ಶಾಸಕ ಕೆ.ಜಿ ಬೋಪಯ್ಯ ಮಾತನಾಡಿ, ಪೊನ್ನಂಪೇಟೆ ತಾಲೂಕು ರಚನೆಗೆ ಎಲ್ಲಾ ಆರ್ಹತೆ ಇದೆ. ಈ ಬಗ್ಗೆ ಈ ಭಾಗದ ಜನಪ್ರತಿನಿಧಿಯಾಗಿ ಸರಕಾರದ ಗಮನ ಸೆಳೆದ್ದಿದ್ದೇನೆ. ತಾಲೂಕು ರಚನೆಯ ಬಗ್ಗೆ ಯಾರು ಅಪಸ್ವರ ಎತ್ತಿಲ್ಲ, ಹೀಗಿರುವಾಗ ಮುಖ್ಯಮಂತ್ರಿಗಳು ಅವರು ತಾಲೂಕು ರಚನೆ ಮಾಡಿ ಈ ಹೋರಾಟಕ್ಕೆ ತಾರ್ಕಿಕ ಅಂತ್ಯ ಕಾಣಿಸಲಿ ಎಂದು ಒತ್ತಾಯಿಸಿದರು. ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷೆ ಮಾಂಗೇರ ಪದ್ಮೀನಿ ಪೊನ್ನಪ್ಪ ಮಾತನಾಡಿ, ತಾಲೂಕು ರಚನೆಯ ಬಗ್ಗೆ ಮುಂದಿನ ಬಜೆಟ್‍ನಲ್ಲಿ ಅಗತ್ಯ ಕ್ರಮ ತೆಗೆದುಕೊಳ್ಳುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳ ಗಮನ ಸೆಳೆಯುತ್ತೆವೆ ಎಂದು ಭರವಸೆ ನೀಡಿದರು.
ಜಿಲ್ಲಾ ವಕ್ಫ್ ಮಂಡಳಿಯ ಉಪಾಧ್ಯಕ್ಷ ಎರ್ಮುಹಾಜಿ ಮಾತನಾಡಿ ಪೊನ್ನಂಪೇಟೆ ತಾಲೂಕು ಹೋರಾಟ ರಾಜಕೀಯ ರಹಿತವಾಗಿ, ಎಲ್ಲಾ ಜಾತಿ ಜನಾಂಗದ ಜನರ ಬೆಂಬಲದಲ್ಲಿ ನಡೆಯುತ್ತಿದೆ. ನ್ಯಾಯಯುತವಾದ ಹೋರಾಟವನ್ನು ಸರಕಾರ ಪರಿಗಣಿಸಬೇಕು ಎಂದು ಒತ್ತಾಯಿಸಿದರು.
ಹೊರಾಟ ಸಮಿತಿಯ ಸಂಚಾಲಕ ಮಾಚಿಮಾಡ ರವೀಂದ್ರ ಮಾತನಾಡಿ, ಕಳೆದ 68 ದಿನಗಳಿಂದ ಹಿರಿಯ ನಾಗರಿಕರು ಹೋರಾಟದ ಮುಂಚುಣಿಯಲ್ಲಿ ನಿಂತು ತಾಲೂಕು ರಚನೆಗೆ ಪ್ರಯತ್ನಿಸುತ್ತಿದ್ದಾರೆ. ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ತಾಲೂಕು ರಚನೆಗೆ ಮುಂದಾಗಬೇಕು ಎಂದು ಹೇಳಿದರು.
ಯುಕೊ ಸಂಘಟನೆಯ ಸಂಚಾಲಕ ಮಂಜು ಚಿಣ್ಣಪ್ಪ ಮಾತನಾಡಿ ಕ್‍ಗ್ಗಟ್‍ನಾಡ್ ಎಂಬವದು ಈ ಭಾಗದ ಜನರ ಸ್ವಾಭಿಮಾನವಾಗಿದೆ. ನಮ್ಮ ರಾಜಕೀಯ ಇಚ್ಚಾಸಕ್ತಿ ಕೊರತೆಯಿಂದ ಎಲ್ಲವನ್ನು ಕಳೆದು ಕೊಳ್ಳುತ್ತಿದ್ದೇವೆ. ತಾಲೂಕು ಸೇರಿದಂತೆ ಮುಂದೆ ನಡೆಯುವ ಎಲ್ಲಾ ಹೊರಾಟಕ್ಕೆ ಪ್ರತಿಯೊಬ್ಬರು ಮಾನಸಿಕವಾಗಿ ಸಿದ್ದರಾಗಿ ಕೊಡಗನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಪಣತೊಡಬೇಕು ಎಂದು ಕರೆ ನೀಡಿದರು.
ಈ ಸಂದರ್ಭ ಪೊನ್ನಂಪೇಟೆ ತಾಲೂಕಿನ ಇತಿಹಾಸದ ಬಗ್ಗೆ ರಂಗಕರ್ಮಿ ಅಡ್ಡಂಡ ಕಾರ್ಯಪ್ಪ ಮಾಹಿತಿ ನೀಡಿದರು. ಮಾಜಿ ತಾ.ಪಂ ಉಪಾಧ್ಯಕ್ಷ ಕೋಳೆರ ದಯಾ ಚೆಂಗಪ್ಪ ಪ್ರಸ್ತುತ ಪೊನ್ನಂಪೇಟೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿಧ ತಾಲೂಕು ಕಚೇರಿಗಳ ಬಗ್ಗೆ ಮಾಹಿತಿ ನೀಡಿದರು. ಪೊನ್ನಂಪೇಟೆ ಹಿರಿಯ ನಾಗರಿಕಾ ವೇದಿಕೆಯ ಅಧ್ಯಕ್ಷ ಪೊಕ್ಕಳಿಚಂಡ ಪೂಣಚ್ಚ ಮಾತನಾಡಿ, ಇದುವರೆಗೆ ಹೋರಾಟಕ್ಕೆ ಬೆಂಬಲ ನೀಡಿದ ಎಲ್ಲಾ ಸಂಘ ಸಂಸ್ಥೆ, ಮುಖಂಡರ ಸಹಕಾರವನ್ನು ಸ್ಮರಿಸಿದರು. ಜಿಲ್ಲಾ ಬಿ.ಜೆ.ಪಿ ಮಹಿಳಾ ಮೋರ್ಚಾದ ಅಧ್ಯಕ್ಷೆ ಮಾಪಂಗಡ ಯಮುನಾ ಚೆಂಗಪ್ಪ. ದ.ಸಂ.ಸ. ಜಿಲ್ಲಾ ಸಂಚಾಲಕ ಪರಶುರಾಮ್, ತಾಲೂಕು ಅಂಗನವಾಡಿ ಕಾರ್ಯಕರ್ತೆಯರ ಸಂಘದ ಪ್ರಮುಖರಾದ ದೇವಮ್ಮ, ಹೊರಾಟಕ್ಕೆ ಬೆಂಬಲವನ್ನು ವ್ಯಕ್ತಪಡಿಸಿ ಮಾತನಾಡಿದರು.
ಉಳುವಂಗಡ ಲೋಹಿತ್ ಭೀಮಯ್ಯ ಪ್ರಾರ್ಥಿಸಿ, ಎಂ.ಎಂ ರವೀಂದ್ರ ನಿರೂಪಿಸಿ, ಕಾಳಿಮಾಡ ಮೋಟಯ್ಯ ಸ್ವಾಗತಿಸಿ, ಹಾಗೂ ಚೆಪ್ಪುಡೀರ ಸೋಮಯ್ಯ ವಂದಿಸಿದರು.
ಬಂದ್: ಪೊನ್ನಂಪೇಟೆ ತಾಲೂಕು ರಚನೆಗೆ ಬೆಂಬಲಿಸಿ ನಾಲ್ಕು ಹೋಬಳಿಯ 21 ಗ್ರಾ.ಪಂಗಳಾದ ಹಾತೂರು, ಗೋಣಿಕೊಪ್ಪ, ಪೊನ್ನಂಪೇಟೆ, ಹುದಿಕೇರಿ, ಬಿ.ಶೆಟ್ಟಿಗೇರಿ, ಟಿ.ಶೆಟ್ಟಿಗೇರಿ, ಬಿರುನಾಣಿ, ಶ್ರೀಮಂಗಲ, ಕುಟ್ಟ, ಕೆ.ಬಾಡಗ, ನಾಲ್ಕೇರಿ, ಕಾನೂರು, ಬಲ್ಯಮುಂಡೂರು, ನಿಟ್ಟೂರು, ಬಾಳೆÀಲೆ, ಪೊನ್ನಪ್ಪಸಂತೆ, ಮಾಯಮುಡಿ, ತಿತಿಮತಿ, ದೇವರಪುರ, ಅರ್ವÀತೋಕ್ಲು, ಕಿರುಗೂರು ವ್ಯಾಪ್ತಿಯಲ್ಲಿ ಅಂಗಡಿ ಮುಂಗಟ್ಟುಗಳು ಸ್ವಯಂ ಪ್ರೇರಿತವಾಗಿ ಮುಚ್ಚಲ್ಪಟ್ಟಿದ್ದವು. ಎಂದಿನಂತೆ ವಾಹನ ಮತ್ತು ಬಸ್ಸು ಸಂಚಾರವಿತ್ತು. ಈ ವ್ಯಾಪ್ತಿಯ ಬಾಳೆÀಲೆ, ಹುದಿಕೇರಿ, ಟಿ.ಶೆಟ್ಟಿಗೇರಿ, ಶ್ರೀಮಂಗಲ, ಬಿರುನಾಣಿಯಲ್ಲಿ ಸಂತೆ ದಿನವಾದ ಸೋಮವಾರ ಬಂದ್ ಗೆ ಬೆಂಬಲ ವ್ಯಕ್ತವಾಯಿತು. ಮಧ್ಯಾಹ್ನದ ನಂತರ ಹಲವೆಡೆ ಸಂತೆ ಅರಂಭವಾಯಿತು ಹಾಗೂ ಅಂಗಡಿ ಮುಂಗಟ್ಟುಗಳು ಎಂದಿನಂತೆ ತೆರೆಯಲ್ಪಟ್ಟವು.