ಮಡಿಕೇರಿ, ಜ. 8: ಮುಂಬರಲಿರುವ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಸಚಿವ ಬಿ.ಎ. ಜೀವಿಜಯ ಅವರನ್ನು ಪರಾಜಯ ಗೊಳಿಸುವ ಚಿಂತನೆಯೊಂದಿಗೆ, ಇನ್ನೋರ್ವ ಮಾಜಿ ಸಚಿವ ಯಂ.ಸಿ. ನಾಣಯ್ಯ ಅವರ ಬಗ್ಗೆ ಮಮಕಾರ ತಳೆಯುವ ಮೂಲಕ ಇಂದು ಜೆಡಿಎಸ್ ಅತೃಪ್ತ ಗುಂಪೊಂದು ಸಭೆ ನಡೆಸಿ ಗಂಭೀರ ಚರ್ಚಿಸಿತು. ಯಂ.ಸಿ. ನಾಣಯ್ಯ ಅವರ ಕುರಿತು ಪಕ್ಷದ ಮತ್ತೋರ್ವ ಮುಖಂಡ ಬಿ.ಎ. ಜೀವಿಜಯ ಕೇವಲವಾಗಿ ನಡೆದುಕೊಳ್ಳುತ್ತಿದ್ದಾರೆ ಎಂಬ ಆಕ್ರೋಶ ಸಭೆಯಲ್ಲಿ ವ್ಯಕ್ತಗೊಂಡಿತು.

ಜನತಾದಳ ಹಿರಿಯರಾದ ಬಿ.ಸಿ. ಕಾವೇರಪ್ಪ, ಮಾತಂಡ ರಮೇಶ, ಎಂ.ಪಿ. ಮುತ್ತಪ್ಪ, ಬಿ.ಎ. ಗಣಪತಿ ಸೇರಿದಂತೆ 40ಕ್ಕೂ ಹೆಚ್ಚು ಪ್ರಮುಖರು ಕಾಣಿಸಿಕೊಂಡರು. ಈ ಹಿಂದೆ ಜಿಲ್ಲಾ ಜನತಾದಳ ಪ್ರಧಾನ ಕಾರ್ಯದರ್ಶಿ ಯಾಗಿದ್ದ ಎಸ್.ಐ. ಮುನೀರ್ ಅಹಮ್ಮದ್ ಇಲ್ಲಿನ ಖಾಸಗಿ ಹೊಟೇಲ್‍ವೊಂದರಲ್ಲಿ ನಡೆದ ಸಭೆಯಲ್ಲಿ ಮೊದಲಿಗೆ ವಿಷಯ ಪ್ರಸ್ತಾಪಿಸಿದರು.

(ಮೊದಲ ಪುಟದಿಂದ) ಜಿಲ್ಲೆಯಲ್ಲಿ ಪಕ್ಷವನ್ನು ಬಲಿಷ್ಠಗೊಳಿಸುವ ದಿಸೆಯಲ್ಲಿ ಮುಖಂಡರಾದ ಬಿ.ಎ. ಜೀವಿಜಯ ಹಾಗೂ ಯಂ.ಸಿ. ನಾಣಯ್ಯ ನಡುವೆ ಸಂಬಂಧ ಕಲ್ಪಿಸಲು ಅನೇಕ ಬಾರಿ ನಡೆಸಲಾದ ಪ್ರಯತ್ನಗಳು ವ್ಯರ್ಥಗೊಂಡು, ಪಕ್ಷದ ಸಭೆಯಲ್ಲಿ ಹಾಕಲಾಗಿದ್ದ ಬ್ಯಾನರ್‍ನಲ್ಲಿ ನಾಣಯ್ಯ ಅವರ ಭಾವಚಿತ್ರಕ್ಕೂ ಜೀವಿಜಯ ಆಕ್ಷೇಪಿಸಿದ್ದಾಗಿ ಬಹಿರಂಗಗೊಳಿಸಿ ದರು. ಹೀಗಾಗಿ ನಾಣಯ್ಯ ಅವರಿಗೆ ಸ್ಥಾನಮಾನವಿಲ್ಲದ ವ್ಯವಸ್ಥೆಯಲ್ಲಿ ಕಾರ್ಯಕರ್ತರು ಮತ್ತು ಬೆಂಬಲಿಗರು ಮುಂದುವರಿಯುವದಲ್ಲಿ ಯಾವದೇ ಅರ್ಥವಿಲ್ಲವೆಂದು ನೆನಪಿಸಿದರು.

ಈ ವೇಳೆ ಚೇಂದ್ರಿಮಾಡ ಗಣೇಶ ನಂಜಪ್ಪ ಮಾತನಾಡಿ, ಪಕ್ಷದ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಗೂ ನಾಣಯ್ಯ ಅವರಿಗೂ ಹಿಂದೆ ಸದನದಲ್ಲಿ ಅರ್ಕಾವತಿ ಬಡಾವಣೆ ವಿಚಾರದಲ್ಲಿ ಮನಸ್ತಾಪ ಹುಟ್ಟಿಕೊಂಡ ಬಳಿಕ ಅವರು ಮತ್ತು ಬೆಂಬಲಿಗರು ತಟಸ್ಥರಾಗಿ ಉಳಿದಿದ್ದ ಸನ್ನಿವೇಶವನ್ನು ಉಲ್ಲೇಖಿಸಿದರು. ಪ್ರಸಕ್ತ ಮಾಜಿ ಸಚಿವ ಬಿ.ಎ. ಜೀವಿಜಯ, ನಾಣಯ್ಯ ಅವರೊಂದಿಗೆ ವೇದಿಕೆ ಹಂಚಿಕೊಳ್ಳಲು ನಿರಾಕರಿಸಿದ್ದು, ಕುಮಾರಸ್ವಾಮಿ ಕೂಡ ಜೀವಿಜಯರತ್ತ ಸದಾ ಒಲವು ಹೊಂದಿರುವದಾಗಿ ವಿವರಿಸಿದರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಡಿಕೇರಿ ಕ್ಷೇತ್ರದಿಂದ ಬಿ.ಎ. ಜೀವಿಜಯ ಹಾಗೂ ವೀರಾಜಪೇಟೆ ಕ್ಷೇತ್ರದಲ್ಲಿ ಕೂಡ ಗೌಡ ಜನಾಂಗದಿಂದ ಅನ್ಯ ಪಕ್ಷದ ಅಭ್ಯರ್ಥಿ ಗೆಲುವಿಗೆ ಕುಮಾರಸ್ವಾಮಿ ಸೂಚಿಸಿದ್ದಾಗಿ ಟೀಕಿಸಿದರು. ಹೀಗಾಗಿ ನಾಣಯ್ಯ ಬೆಂಬಲಿಗರು ಇನ್ನು ದಳದಲ್ಲಿ ಮುಂದುವರಿಯುವ ಅಗತ್ಯ ಇಲ್ಲವೆಂದು ಪ್ರತಿಪಾದಿಸಿದರು.

ಎಂ.ಪಿ. ಮುತ್ತಪ್ಪ, ಬಿ.ಎ. ಗಣಪತಿ, ಪೆರಾಜೆ ಹರೀಶ, ಬಿ.ಸಿ. ಕಾವೇರಪ್ಪ, ಕೋಲತಂಡ ಬೋಪಯ್ಯ, ರಾಜು, ಬಿ.ವೈ. ರಾಜೇಶ್, ಯಾಕೂಬ್ ಮೊದಲಾದವರು ಅಭಿಪ್ರಾಯ ವ್ಯಕ್ತಪಡಿಸಿ, ತಮ್ಮ ನಾಯಕರಾದ ಯಂ.ಸಿ. ನಾಣಯ್ಯ ಅವರು ತೆಗೆದುಕೊಳ್ಳುವ ಯಾವದೇ ತೀರ್ಮಾನವನ್ನು ಬೆಂಬಲಿಸುವದಾಗಿ ತಿಳಿಸಿದರು. ಅಲ್ಲದೆ ಅವರಿಗೆ ಗೌರವಯುತ ಸ್ಥಾನಮಾನ ಕಲ್ಪಿಸಲು ಪಕ್ಷದ ಮುಖಂಡರು ಇನ್ನಾದರೂ ಒಲವು ತೋರಬೇಕೆಂದು ಆಗ್ರಹಿಸಿದರು.

ವೀರಾಜಪೇಟೆ ಪಟ್ಟಣ ಪಂಚಾಯಿತಿ ಸದಸ್ಯ ವಿಶ್ವನಾಥ್ ಕೂಡ ಹಿರಿಯರ ಮಾತಿಗೆ ಧ್ವನಿಗೂಡಿಸಿ ಮಾತನಾಡುತ್ತಾ, ನೇರವಾಗಿ ಯಾವದೇ ಪಕ್ಷ ಸೇರದೆ ನಾಣಯ್ಯ ಅವರೊಡನೆ ಮತ್ತೊಮ್ಮೆ ಸಮಾಲೋಚಿಸಿ ಎಲ್ಲ ಬೆಂಬಲಿಗರ ಅಭಿಪ್ರಾಯ ಪಡೆದು ಮುಂದಿನ ನಿರ್ಧಾರ ಕೈಗೊಳ್ಳೋಣವೆಂದರು.

ಕೊಡಗು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಮಾಜಿ ಅಧ್ಯಕ್ಷ ಹಾಗೂ ಪಕ್ಷದ ಮುಖಂಡ ಮಾತಂಡ ರಮೇಶ ಮಾತನಾಡಿ, ಎಲ್ಲರು ಕೂಡ ನಾಣಯ್ಯ ಅವರ ಜಾತ್ಯತೀತ ನಿಲುವು ಮತ್ತು ರಾಜಕೀಯ ಬದ್ಧತೆಗೆ ಮೆಚ್ಚಿ ಕಳೆದ ಮೂರ್ನಾಲ್ಕು ದಶಕಗಳಿಂದ ಒಟ್ಟಿಗೆ ಇರುವ ಕಾರಣ, ತಕ್ಷಣ ಯಾವದೇ ತೀರ್ಮಾನ ತೆಗೆದುಕೊಳ್ಳದೆ ಮತ್ತೊಮ್ಮೆ ಎಲ್ಲರು ಸಭೆ ಸೇರಿ ಸೂಕ್ತ ನಿರ್ಧಾರಕ್ಕೆ ಬರೋಣ ಎಂದು ಕರೆ ನೀಡಿದರು. ಅಲ್ಲದೆ ಬಿ.ಎ. ಜೀವಿಜಯ ಅವರು ಇತ್ತೀಚಿನ ಸಭೆಯೊಂದರಲ್ಲಿ ನಾಣಯ್ಯ ಬೆಂಬಲಿಗರಿಗೆ ಹೊರ ಹೋಗಲು ಹೇಳಿರುವ ಕಾರಣ, ಮುಂದಿನ ಚುನಾವಣೆಯಲ್ಲಿ ತಕ್ಕಪಾಠ ಕಲಿಸೋಣವೆಂದು ಘೋಷಿಸಿದರು.

ಎಲ್ಲರ ಅಭಿಪ್ರಾಯ ಬಳಿಕ ಎಸ್.ಐ. ಮುನೀರ್ ಅಹ್ಮದ್ ಮಾತನಾಡಿ, ಮುಂದಿನ 10 ದಿನದೊಳಗೆ ಯಂ.ಸಿ. ನಾಣಯ್ಯ ಅವರ ಸಮ್ಮುಖ ಎಲ್ಲ ಅತೃಪ್ತ ಕಾರ್ಯಕರ್ತರನ್ನು ಸೇರಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳೋಣ ಎಂದರಲ್ಲದೆ, ನಾಯಕರಾದ ನಾಣಯ್ಯ ತೆಗೆದುಕೊಳ್ಳುವ ಯಾವದೇ ತೀರ್ಮಾನವನ್ನು ಎಲ್ಲರು ಬೆಂಬಲಿಸುವ ಇಂಗಿತ ವ್ಯಕ್ತಪಡಿಸಿದರು.

ಇಂದಿನ ತುರ್ತು ಸಭೆಯಲ್ಲಿ ನಗರಸಭೆಯ ಮಾಜಿ ಅಧ್ಯಕ್ಷ ಕೆ.ಜಿ. ಹರೀಶ್, ಮಾಜಿ ಸದಸ್ಯ ಅಶ್ರಫ್, ಪುಚ್ಚಿಮಂಡ ಸಾಬಾ ಬೆಳ್ಯಪ್ಪ, ಹುರೇರ ಧನಂಜಯ ಶೆಟ್ಟಿ, ಕೋಟಿ ಮೋಟಯ್ಯ, ಚೆಕ್ಕೇರ ಹಸೈನಾರ್, ಸೇರಿದಂತೆ ಅನೇಕ ಪ್ರಮುಖರು ಪಾಲ್ಗೊಂಡಿದ್ದರು.