ಮಡಿಕೇರಿ, ಜ. 8: ಕಾಫಿ ಕೊಯ್ಲು ಸಂದರ್ಭ ಬೆರ್ರಿಬೋರರ್ ನಿಯಂತ್ರಣಕ್ಕೆ ಹಲವು ಕ್ರಮಗಳನ್ನು ಅನುಸರಿಸುವಂತೆ ಕಾಫಿ ಮಂಡಳಿಯು ಬೆಳೆಗಾರರಿಗೆ ಸೂಚಿಸಿದೆ.

ಒಂದು ಗಿಡದಿಂದ ಪೂರ್ಣ ಪ್ರಮಾಣದಲ್ಲಿ ಕಾಫಿಯನ್ನು ಕೊಯ್ಲು ಮಾಡಬೇಕು. ಕಾಫಿ ಕೊಯ್ಲಿಗೆ ಮ್ಯಾಟ್‍ಗಳನ್ನು, ಕಾಫಿ ಒಣಗಿಸುವ ಜಾಗದಲ್ಲಿ 10 ಮೀಟರ್ ದೂರಕ್ಕೆ ಬ್ರೋಕಾ ಟ್ರಾಪ್ಸ್ ಅಳವಡಿಸಬೇಕು. ಇದು ಹಣ್ಣು ಕಾಫಿಯಿಂದ ಹುಳಗಳನ್ನು ಆಕರ್ಷಿಸುತ್ತದೆ. ಕಾಫಿಯನ್ನು ಒಣಗಿಸುವಾಗ ಪಾರ್ಚ್‍ಮೆಂಟ್‍ಗೆ ಶೇಕಡ 10.5 ಹಾಗೂ ಚೆರಿಗೆ ಶೇಕಡ 11ಕ್ಕಿಂತ ತೇವಾಂಶ ಜಾಸ್ತಿ ಆಗದಂತೆ ನೋಡಿಕೊಳ್ಳಬೇಕು.

ಕಾಫಿ ಕೊಯ್ದ ಬಳಿಕ ನೆಲದಲ್ಲಿ ಉದುರಿರುವ ಸಂಪೂರ್ಣ ಕಾಫಿಯನ್ನು ಹೆಕ್ಕಬೇಕು. ಆ ಸಂದರ್ಭ ಕಾಫಿ ಹಣ್ಣಿಗೆ ಬೆರ್ರಿ ಬೋರರ್ ಬಂದಿದ್ದಲ್ಲಿ ಅಂತಹ ಹಣ್ಣು ಕಾಫಿಯನ್ನು ಬಿಸಿ ನೀರಿನಲ್ಲಿ ಮೂರು ನಿಮಿಷ ಮುಳುಗಿಸಿ ಹುಳಗಳು ಸಾಯುವಂತೆ ನೋಡಿಕೊಳ್ಳಬೇಕು. ಬೆರ್ರಿ ಬೋರರ್ ಇರುವ ಪ್ರದೇಶದಲ್ಲಿ ಪ್ರತಿ ಎಕರೆಗೆ 10ರಂತೆ ಬ್ರೋಕಾ ಟ್ರಾಪ್ಸ್ ಅಳವಡಿಸಿದಲ್ಲಿ ತೋಟದೊಳಗೆ ಬಿಟ್ಟಿರುವ ಕಾಫಿ ಹಣ್ಣಿನಲ್ಲಿರುವ ಹುಳಗಳನ್ನು ಆಕರ್ಷಿಸುತ್ತದೆ. ಕಾಯಿಲೆಗೆ ತುತ್ತಾದ ಕಾಫಿಯನ್ನು ಇತರೆಡೆಗೆ ಸಾಗಿಸಬಾರದು.

ಬ್ರೊಕಾ ಟ್ರಾಪ್‍ಗಳು ಬೇಕಿದ್ದಲ್ಲಿ ಸಮೀಪದ ಕಾಫಿ ಮಂಡಳಿಯ ವಿಸ್ತರಣಾ ಕಚೇರಿ ಅಥವಾ ಅಧ್ಯಾಯನ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಮಂಡಳಿ ಅಧಿಕಾರಿಗಳು ಬೆಳೆಗಾರರಿಗೆ ಸಲಹೆ ನೀಡಿದ್ದಾರೆ.