ಮಡಿಕೇರಿ, ಜ. 8: ಕಳೆದ ಕೆಲವು ದಿನಗಳ ಹಿಂದೆ ಹೆರಿಗೆ ನೋವು ಕಾಣಿಸಿಕೊಂಡಿದೆ ಎಂದು ದಿಢೀರಾಗಿ ಇಲ್ಲಿನ ಜಿಲ್ಲಾ ಸರಕಾರಿ ಹೆರಿಗೆ ಆಸ್ಪತ್ರೆಗೆ ದಾಖಲಾಗಿದ್ದ ಹೆಣ್ಣೊಬ್ಬಳು, ಮಧ್ಯರಾತ್ರಿ ಸುಮಾರಿಗೆ ಅಲ್ಲಿ ಮಗುವೊಂದಕ್ಕೆ ಜನ್ಮ ನೀಡಿ ಬಳಿಕ ಪರಾರಿಯಾಗಿದ್ದಾಳೆ.
ತಾ. 13.12.2017ರ ಸಂಜೆ 6.30ರ ಸುಮಾರಿಗೆ ಇಲ್ಲಿನ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಬಂದಿರುವ ಮಹಿಳೆ ತನ್ನ ಹೆಸರು ಪ್ರೇಮಾ, ಗಂಡ ರವಿ, ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣ ಬಳಿ, ಮಡಿಕೇರಿ ಎಂಬದಾಗಿ ವಿಳಾಸ ನೀಡಿ ಹೆರಿಗೆ ವೇದನೆ ನಡುವೆ ಆಸ್ಪತ್ರೆಯಲ್ಲಿ ದಾಖಲಾಗಿದ್ದಾಳೆ. ಈಕೆಯ ಜತೆಯಲ್ಲಿ ಮತ್ತೊಬ್ಬಳು ಕೂಡ ಇದ್ದಿದ್ದಾಳೆ.ಬರುವಾಗಲೇ ಹೆರಿಗೆ ನೋವು ಎಂದು ಸಂಕಟ ಪಡುತ್ತಿದ್ದ ಆಕೆಯನ್ನು ಆಸ್ಪತ್ರೆಗೆ ದಾಖಲಸಿಕೊಂಡಿರುವ ವೈದ್ಯ, ಸಿಬ್ಬಂದಿ ಮಾನವೀಯ ಅನುಕಂಪ ದೊಂದಿಗೆ ತಡರಾತ್ರಿ ಹೆರಿಗೆ ಮಾಡಿದಾಗ, ಗಂಡು ಮಗುವಿಗೆ ಜನ್ಮವಿತ್ತಿದ್ದಾಳೆ. ಬೆಳಗಿನ ಜಾವ 6.15ರ ಸುಮಾರಿಗೆ ಮಗುವನ್ನು ಅಲ್ಲೇ ಬಿಟ್ಟು ಆಸ್ಪತ್ರೆಗೆ ಬಂದಿದ್ದ ಜತೆಗಾತಿಯೊಡನೆ ಇಬ್ಬರೂ ಪರಾರಿಯಾಗಿದ್ದಾರೆ.
ದಿಢೀರ್ ಆಘಾತಕಾರಿ ಬೆಳವಣಿಗೆಯಿಂದ ಗಾಬರಿ ಗೊಂಡಿರುವ, ಜಿಲ್ಲಾ ಹೆರಿಗೆ ಆಸ್ಪತ್ರೆಯ ವೈದ್ಯ ಸಿಬ್ಬಂದಿ ಕೂಡಲೇ ಕೊಡಗು ಮಕ್ಕಳ ರಕ್ಷಣಾ ಘಟಕ ಇಲಾಖೆ ಹಾಗೂ ಮಹಿಳಾ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಆ ಮೂಲಕ ಪರಾರಿಯಾಗಿರುವ ಮಹಿಳೆಯರಿಬ್ಬರ ಹುಡುಕಾಟ ನಡೆಸಿದರೂ ಯಾವದೇ ಸುಳಿವು ಲಭಿಸಿಲ್ಲ.
ಇತ್ತ ಕೇವಲ ಆರೆಂಟು ಗಂಟೆ ಹಿಂದೆ ಜನಿಸಿರುವ ಶಿಶುವಿನ ರಕ್ಷಣೆಗೆ ಮೊದಲ ಪ್ರಯತ್ನವೆಂಬಂತೆ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಮಾಹಿತಿ ಕಲೆ ಹಾಕಿ, ಪುತ್ತೂರಿನಲ್ಲಿರುವ ರಾಮಕೃಷ್ಣ ಸೇವಾ ಸಂಸ್ಥೆಗೆ ಶಿಶು ಪಾಲನೆಗೆ ಕಾನೂನಿನಡಿ ಒಪ್ಪಿಸಿದ್ದಾರೆ.
ಪೊಲೀಸ್ ಇಲಾಖೆ ಆಸ್ಪತ್ರೆಯ ಒಳ - ಹೊರಗೆ ಅಳವಡಿಸಿರುವ ಸಿ.ಸಿ. ಕ್ಯಾಮರಾಗಳ್ನು ಪರಿಶೀಲಿಸಿದಾಗ, ಹಿಂದಿನ ದಿನ 6 ಗಂಟೆಯ ಆಸುಪಾಸಿನಲ್ಲಿ ಆಟೋ ರಿಕ್ಷಾವೊಂದರಲ್ಲಿ ಇಬ್ಬರು ಮಹಿಳೆಯರು ಬಂದಿಳಿದಿದ್ದು ಗೋಚರಿಸಿದೆ. ಅಲ್ಲದೆ ಮರು ದಿನ ಬೆಳ್ಳಂಬೆಳಿಗ್ಗೆ ಮಗುವನ್ನು ಬಿಟ್ಟು ಆಸ್ಪತ್ರೆಯಿಂದ, ಹಿಂದಿನ ದಿನ ಸಂಜೆಗತ್ತಲೆ ನಡುವೆ ಬಂದಿದ್ದ ಉಡುಗೆಯಲ್ಲೇ ಹೊರ ಹೋಗಿರುವ ಸುಳಿವು ಲಭಿಸಿದೆ.
ಆ ಸುಳಿವಿನ ಮೇರೆಗೆ ತನಿಖೆ ನಡೆಸಿರುವ ಮಹಿಳಾ ಪೊಲೀಸ್ ಠಾಣಾ ಸಿಬ್ಬಂದಿಗೆ, ಹೆರಿಗೆ ಸಂದರ್ಭ ಆಸ್ಪತ್ರೆಯಲ್ಲಿ ನೀಡಿರುವ ವಿಳಾಸ ಸುಳ್ಳೆಂದು ದೃಢಪಟ್ಟಿದೆ. ಆಸ್ಪತ್ರೆಗೆ ಕರೆ ತಂದಿದ್ದ ಆಟೋ ರಿಕ್ಷಾ ಸಂಖ್ಯೆಯ ಜಾಡು ಹಿಡಿದು ಚಾಲಕನ್ನು ವಿಚಾರಿಸಲಾಗಿ, ಡಿ. 13ರ ಸಂಜೆ ನಗರದ ವಿಜಯ ವಿನಾಯಕ ದೇಗುಲ ಬಳಿ ರಸ್ತೆ ತಿರುವಿನಲ್ಲಿ ಆ ಮಹಿಳೆಯರು ನಿಂತಿದ್ದು, ಹೆರಿಗೆ ನೋವಿನಲ್ಲಿ ಒದ್ದಾಡುವದನ್ನು ಕಂಡು ಮಾನವೀಯ ದೃಷ್ಟಿಯಿಂದ ಆಸ್ಪತ್ರೆಗೆ ಕರೆದೊಯ್ದಿದ್ದಾಗಿ ಖಚಿತ ವಾಗಿದೆ.
ಪ್ರಕರಣ ದಾಖಲು : ಮೇಲಿನ ಪ್ರಕರಣ ಸಂಬಂಧ ನವಜಾತ ಶಿಶುವನ್ನು ಬಿಟ್ಟು ಪರಾರಿಯಾಗಿರುವ ತಾಯಿ ವಿರುದ್ಧ ಭಾರತೀಯ ಪೊಲೀಸ್ ಅಪರಾಧ ತಡೆ ನಿಯಂತ್ರಣ ಕಾಯ್ದೆ 317ರ ಅನ್ವಯ ಮೊಕದ್ದಮೆ ದಾಖಲಿಸಿಕೊಳ್ಳಲಾಗಿದೆ. ಆ ಪ್ರಕಾರ ಮಗುವಿನ ಜನನವಾದ ಮರುಕ್ಷಣದಿಂದ ಮುಂದಿನ 18 ವರ್ಷ ತುಂಬುವ ತನಕ ಯಾರೇ ತಂದೆ - ತಾಯಿ ಮಕ್ಕಳನ್ನು ನಿರ್ಲಕ್ಷಿಸಿದರೂ ಅಂತಹವರನ್ನು ಶಿಕ್ಷಿಸಲಾಗುತ್ತದೆ.
ಇದೀಗ ಪುತ್ತೂರು ರಾಮಕೃಷ್ಣ ಸೇವಾ ಸಂಸ್ಥೆಯಲ್ಲಿ ಇರಿಸಲಾಗಿರುವ ಮಗುವನ್ನು ಸಂಬಂಧಪಟ್ಟ ಪೋಷಕರು ಹಿಂತಿರುಗಿ ಪಡೆದು ಕೊಳ್ಳುವಂತೆ ಸೂಚನೆಯೊಂದಿಗೆ ಮಕ್ಕಳ ರಕ್ಷಣಾ ಇಲಾಖೆ ಪ್ರಕಟಣೆ ಹೊರಡಿಸಿದೆ. ತಪ್ಪಿದಲ್ಲಿ ಕಾನೂನಿನ ನೆಲೆಯಲ್ಲಿ ಮಕ್ಕಳಿಲ್ಲದ ಪೋಷಕರು ದತ್ತು ಪಡೆಯಲು ಅವಕಾಶವಿದೆ; ಹೀಗಾಗಿ ಸಾರ್ವಜನಿಕ ಪ್ರಕಟಣೆ ಹೊರಡಿಸಲಾಗಿದೆ ಎಂದು ಮಕ್ಕಳ ರಕ್ಷಣಾ ಘಟಕ ಅಧಿಕಾರಿ ಮಂಜುನಾಥ ‘ಶಕ್ತಿ’ಯೊಂದಿಗೆ ಖಚಿತಪಡಿಸಿದ್ದಾರೆ.