ಹೆಬ್ಬಾಲೆ, ಜ.8: ಅತ್ತೂರು, ಆನೆಕಾಡು ಮೀಸಲು ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಬೇಸಿಗೆ ಅವದಿಯಲ್ಲಿ ಕಾಣಿಸಿಕೊಳ್ಳುವ ಕಾಡ್ಗಿಚ್ಚು ತಡೆಗಟ್ಟುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ವತಿಯಿಂದ ಅರಣ್ಯದಂಚಿನಲ್ಲಿ ಫೈರ್ ಲೈನ್ ನಿರ್ಮಾಣ ಕಾರ್ಯ ಕೈಗೊಳ್ಳಲಾಗಿದೆ.

ಸಮೀಪದ ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸವನಹಳ್ಳಿ, ಆನೆಕಾಡು, ಅತ್ತೂರು ಅರಣ್ಯ ವ್ಯಾಪ್ತಿಯಲ್ಲಿ ಹಾದು ಹೋಗಿರುವ ರಾಜ್ಯ ಹೆದ್ದಾರಿ ಹಾಗೂ ಜಿಲ್ಲಾರಸ್ತೆಗಳ ಎರಡು ಬದಿಯಲ್ಲಿ ಕುರುಚಲು ಗಿಡಗಳನ್ನು ತೆರವುಗೊಳಿಸಲಾಗುತ್ತಿದೆ.

ಬೇಸಿಗೆ ಅವಧಿ ಆರಂಭ ಗೊಂಡಂತೆ ಮರಗಿಡಗಳ ಎಲೆಗಳು ಉದುರಲು ಆರಂಭವಾಗುತ್ತದೆ. ಕಾಡಿನಲ್ಲಿ ಬೆಸಿಲಿನ ಬೇಗೆಗೆ ಬಿದಿರು ಮೆಳೆಗಳು, ಗಿಡಗಂಟೆಗಳು ಒಣಗಿ ಹೋಗುತ್ತವೆ. ಈ ಒಣಗಿ ಹೋದ ಗಿಡಗಂಟೆಗಳಿಗೆ ಬೆಂಕಿ ಬೀಳದಂತೆ ಅರಣ್ಯ ಇಲಾಖೆ ಎಚ್ಚರ ವಹಿಸ ಬೇಕಾಗಿದೆ. ಈ ನಿಟ್ಟಿನಲ್ಲಿ ಕಿಡಿಗೇಡಿ ಗಳಿಂದ ಹಾಗೂ ಧೂಮಪಾನಿಗಳಿಂದ ಅರಣ್ಯಕ್ಕೆ ಆಗುವ ಹಾನಿಯನ್ನು ತಪ್ಪಿಸುವ ಉದ್ದೇಶದಿಂದ ಬಸವನಹಳ್ಳಿಯಿಂದ ಆನೆಕಾಡುವರೆಗೆ ರಾಜ್ಯ ಹೆದ್ದಾರಿ ರಸ್ತೆಯಲ್ಲಿ ಮುಂಜಾಗ್ರತಾವಾಗಿ ಫೈರ್ ಲೈನ್ ನಿರ್ಮಾಣ ಮಾಡಲಾಗುತ್ತಿದೆ.

ಕಾಡಿನ ಮಧ್ಯೆ ಹಾದು ಹೋಗುವ ರಸ್ತೆಗಳಲ್ಲಿ ಸಂಚರಿಸುವ ಧೂಮಪಾನಿಗಳು ಬೀಡಿ ಸಿಗರೇಟ್‍ಗಳನ್ನು ಸೇದಿದ ನಂತರ ರಸ್ತೆ ಬದಿಯಲ್ಲಿ ಹಾಕಿದಾಗ ಅದರಿಂದ ಒಣಗಿದ ಹುಲ್ಲು ಮತ್ತು ಎಲೆಗಳಿಗೆ ಬೆಂಕಿ ತಾಗಿ ಅದು ಅರಣ್ಯ ಪ್ರದೇಶಕ್ಕೆ ವ್ಯಾಪಿಸಿ ಅರಣ್ಯ ಸಂಪತ್ತು ಹಾಗೂ ವನ್ಯಜೀವಿಗಳು ಬೆಂಕಿಗೆ ಸಿಲುಕಿ ನಾಶವಾಗುತ್ತಿವೆ. ಈ ಹಿನ್ನೆಲೆಯಲ್ಲಿ ಅರಣ್ಯ ಸಂಪತ್ತು, ವನ್ಯಪ್ರಾಣಿ ಹಾಗೂ ಪಕ್ಷಿ ಸಂಕುಲಗಳನ್ನು ಸಂರಕ್ಷಿಸುವ ಉದ್ದೇಶದಿಂದ ಪ್ರತಿ ವರ್ಷ ಬೇಸಿಗೆಗೂ ಮುನ್ನ ಅರಣ್ಯ ಪ್ರದೇಶದಲ್ಲಿ ಹಾದುವ ಹೋಗುವ ರಸ್ತೆಗಳ ಎಡ ಮತ್ತು ಬಲ ಬದಿಯಲ್ಲಿ ತಲಾ 4 ಮೀಟರ್ ಉದ್ದ ಗಿಡಗಂಟೆಗಳನ್ನು ಕಡಿದು ಅವುಗಳಿಗೆ ಬೆಂಕಿಕೊಡಲಾಗುತ್ತಿದೆ. ಕಾಡಿಗೆ ಬೀಳುವ ಬೆಂಕಿಯನ್ನು ನಂದಿಸಲು ಹಾಗೂ ಕಣ್ಗಾವಲಿಡಲು ಅಲ್ಲದೆ ಬೆಂಕಿ ಇತರೆಡೆಗಳಿಗೆ ಹರಡುವದನ್ನು ತಡೆಯುವ ಸಲುವಾಗಿ ರಸ್ತೆಯ ಎರಡು ಕಡೆಗಳಲ್ಲಿ ಗಿಡಗಂಟೆಗಳನ್ನು ತೆರವುಗೊಳಿಸಿ ಒಣಗಿದ ಹುಲ್ಲನ್ನು ಸುಟ್ಟು ನಿರ್ಮಿಸುವ ಮಾರ್ಗವೇ ಫೈರ್ ಲೈನ್ ಆಗಿದ್ದು, ಇದೀಗ ಜಿಲ್ಲೆ ವಿವಿಧೆಡೆ ಗಳಲ್ಲಿ ಫೈರ್ ಲೈನ್ ನಿರ್ಮಾಣ ಕಾರ್ಯ ಕೈಗೊಳ್ಳಲಾಗುತ್ತಿದೆ.

ಆರ್.ಎಫ್.ಒ.ಅರಣ್ ಮಾರ್ಗದರ್ಶನಲ್ಲಿ ಅತ್ತೂರು ಉಪ ವಲಯ ಅರಣ್ಯಾಧಿಕಾರಿ ಅನಿಲ್ ಡಿಸೋಜ ನೇತೃತ್ವದಲ್ಲಿ ವನಪಾಲಕರಾದ ಪೂಣಚ್ಚ ಸಿಬ್ಬಂದಿಗಳಾದ ಮಣಿ, ಗಣೇಶ್, ತಿಮ್ಮಯ್ಯ, ರವಿ,ಸುದೀಪ್ ಮತ್ತಿತರರು ಫೈರ್ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.