ಮಡಿಕೇರಿ, ಜ. 8: ಡಿಸೆಂಬರ್ ತಿಂಗಳನ್ನು ಪೊಲೀಸ್ ಇಲಾಖೆ ಅಪರಾಧ ತಡೆ ಮಾಸಾಚರಣೆ ಎಂದು ಘೋಷಿಸುವ ಮೂಲಕ ಎಲ್ಲೆಡೆ ವ್ಯಾಪಕ ಕಟ್ಟೆಚ್ಚರ ವಹಿಸಲಿದೆಯಾದರೂ, ಇತ್ತೀಚಿನ ವರ್ಷಗಳಲ್ಲಿ ಸಾಕಷ್ಟು ಸುಧಾರಣೆಯೊಂದಿಗೆ ಕೊಡಗಿನಾದ್ಯಂತ ಜಿಲ್ಲಾ ನಿಯಂತ್ರಣ ಕೇಂದ್ರದಿಂದಲೇ ಕಣ್ಗಾವಲು ಇಡುತ್ತಾ ಎಲ್ಲೆಡೆ ಅಪರಾಧ ತಡೆಗೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದೆ.

ಮುಖ್ಯವಾಗಿ ಜಿಲ್ಲಾ ಕೇಂದ್ರ ಮಡಿಕೇರಿಯಿಂದ ಸಂಪಾಜೆವರೆಗಿನ ಗಡಿ ಹಾಗೂ ಕುಶಾಲನಗರದಾಚೆಗಿನ ಗಡಿ ತನಕ ಹೆದ್ದಾರಿ ಸಂಚಾರ ಸುಗಮಗೊಳಿಸಲು ಎರಡು ಪ್ರತ್ಯೇಕ ‘ಹೈವೇ ಪೆಟ್ರೋಲಿಂಗ್’ ವಾಹನಗಳು ಕಾರ್ಯಾಚರಿಸುತ್ತಾ, ರಸ್ತೆ ಅಪಘಾತ ಹಾಗೂ ಅಪರಾಧಗಳ ತಡೆಗೆ ನಿಗಾವಹಿಸುತ್ತಿವೆ. ಈ ವಾಹನಗಳ ಚಲನವಲನದೊಂದಿಗೆ ಹೆದ್ದಾರಿಯ ಯಾವದೇ ಕಡೆ ನಿತ್ಯ ನಡೆಯುವ ಬೆಳವಣಿಗೆಗಳ ಕುರಿತು ಜಿಲ್ಲಾ ನಿಯಂತ್ರಣ ಕೊಠಡಿಯಿಂದ ಗಮನ ಕೇಂದ್ರೀಕರಿಸಲಾಗುತ್ತಿದೆ.

ಇನ್ನು ಜಿಲ್ಲಾ ನಿಯಂತ್ರಣ ಕಚೇರಿಯಲ್ಲಿ ಸಾಕಷ್ಟು ಉದ್ಯೋಗಿಗಳ ಕೊರತೆ ನಡುವೆಯೂ ದಿನದ 24 ಗಂಟೆ ಸಮಯ ಕೆಲಸ ನಿರ್ವಹಿಸಲ್ಪಡುತ್ತಿದ್ದು, ಇರುವಷ್ಟು ಅಧಿಕಾರಿಗಳು ಮತ್ತು ಸಿಬ್ಬಂದಿ ಕೊಡಗು ಪೊಲೀಸ್ ಬಳಗದ ಸಹಕಾರದಿಂದ ವ್ಯಾಪಕ ಮುಂಜಾಗ್ರತೆಯೊಂದಿಗೆ ಕಾಲ ಕಾಲಕ್ಕೆ ಪೊಲೀಸ್ ಅಧೀಕ್ಷಕರಿಗೆ ಮಾಹಿತಿ ರವಾನಿಸಲಿದೆ.

ಕ್ಯಾಮರಾ ಕಣ್ಗಾವಲು : ಕೊಡಗಿನಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಅಷ್ಟ ದಿಕ್ಕುಗಳಲ್ಲಿ ಜಿಲ್ಲೆಯ ಒಳಗೆ ಪ್ರವೇಶಿಸುವ ಮತ್ತು ಹೊರಹೋಗುವ ಗಡಿ ತಪಾಸಣಾ ಕೇಂದ್ರಗಳಲ್ಲಿ ಸಿ.ಸಿ. ಕ್ಯಾಮರಾ ಅಳವಡಿಸುವ ಮೂಲಕ ಸುರಕ್ಷತಾ ಕ್ರಮಕ್ಕೆ ಕಣ್ಗಾವಲು ಇರಿಸಲಾಗುತ್ತಿದೆ. ಹೆದ್ದಾರಿ ಪೆಟ್ರೋಲಿಂಗ್‍ನಲ್ಲಿ ಸಹಾಯಕ ಪೊಲೀಸ್ ಉಪ ನಿರೀಕ್ಷಕ ಹುದ್ದೆಯಲ್ಲಿರುವವರು ಸಮಗ್ರ ಕಾನೂನು ನಿಭಾಯಿಸುವ ಹೊಣೆಗಾರಿಕೆ ಹೊಂದಿರುತ್ತಾರೆ.

ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಗೆ ಹೊಂದಿಕೊಂಡಂತೆ ಇರುವ ಕೊಡಗು ಪೊಲೀಸ್ ನಿಯಂತ್ರಣ ಕಚೇರಿ ಮೂಲಕ ಕೊಡಗಿನ ಎಲ್ಲಾ ಪೊಲೀಸ್ ಠಾಣೆಗಳನ್ನು ಹಾಗೂ ಗ್ರಾಮೀಣ ಭಾಗದಲ್ಲಿರುವ ಉಪಠಾಣೆಗಳನ್ನು ಸಂಪರ್ಕಿಸಲು ನಗರದ ಸ್ಟೋನ್‍ಹಿಲ್ ಬಳಿ ಎತ್ತರದ ಪ್ರದೇಶದಲ್ಲಿ ಪೊಲೀಸ್ ಮರು ಪ್ರಸರಣಾ ಕೇಂದ್ರ ಸ್ಥಾಪನೆಯೊಂದಿಗೆ ಆಧುನಿಕ ತಂತ್ರಜ್ಞಾನ ಬಳಸಿಕೊಳ್ಳಲಾಗಿದೆ.

ಕಡಗದಾಳುವಿನಲ್ಲಿಯೂ ಇಂತಹ ಮರು ಪ್ರಸರಣಾ ಕೇಂದ್ರ ಸ್ಥಾಪಿಸಿದ್ದು, ಸದ್ಯದಲ್ಲೇ ನಗರದ ಕೊಡಗು ವಿದ್ಯಾಲಯ ಬಳಿ ಕೂಡ ಪೊಲೀಸ್ ಇಲಾಖೆಯ ವಿಚಾರ ವಿನಿಮಯಕ್ಕಾಗಿ ಮತ್ತೊಂದು ಕೇಂದ್ರ ಕಾರ್ಯಾರಂಭಗೊಳ್ಳುವ ಮಾಹಿತಿ ಲಭಿಸಿದೆ. ಈ ರೀತಿ ಮರು ಪ್ರಸರಣಾ ಕೇಂದ್ರಗಳಿಂದ ಆಧುನಿಕ ತಂತ್ರಜ್ಞಾನದೊಂದಿಗೆ ಏಕಕಾಲಕ್ಕೆ ಎಲ್ಲಾ ಪೊಲೀಸ್ ಠಾಣೆಗಳಿಗೆ ಮಾಹಿತಿ ರವಾನಿಸುವ ಉದ್ದೇಶದಿಂದ ಮರು ಪ್ರಸರಣಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.

ಇನ್ನೊಂದೆಡೆ ಪೊಲೀಸ್ ನಿಯಂತ್ರಣ ಕೊಠಡಿ ಮೂಲಕ ಸೌರವಿದ್ಯುತ್ ಬೆಳಕು, ಕಂಪ್ಯೂಟರ್, ಸಿ.ಸಿ. ಕ್ಯಾಮರಾದಂತಹ ಸುಧಾರಿತ ವ್ಯವಸ್ಥೆಯೊಂದಿಗೆ ಕೊಡಗಿನಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಮಾತ್ರವಲ್ಲದೆ ಅಪರಾಧಗಳನ್ನು ತಡೆಗಟ್ಟಲು ಗಂಭೀರ ಚಿಂತನೆ ಹರಿಸಲಾಗುತ್ತಿದ್ದು, ಕೊಡಗು ಪೊಲೀಸ್ ಸಾಕಷ್ಟು ಸುಧಾರಣೆ ಹೊಂದಿದೆ.

ಕೊಡಗಿನ ಗಡಿಭಾಗದ ಕುಟ್ಟ, ಮಾಕುಟ್ಟ, ತಿತಿಮತಿ, ಕುಶಾಲನಗರ, ಶಿರಂಗಾಲ, ಬಾಣಾವರ, ನಿಲುವಾಗಿಲು, ಶಾಂತಪುರ, ಸಂಪಾಜೆ, ಮಾಲ್ದಾರೆ, ಕರಿಕೆ, ಮುಂಡ್ರೋಟು, ಹಿಪ್ಪಲಿಗಟ್ಟ ಮುಂತಾದೆಡೆಗಳಲ್ಲಿ ನಿರಂತರ ಗಮನ ಹರಿಸಲಾಗುತ್ತಿದೆ. ಮಡಿಕೇರಿಯಂತಹ ಕೇಂದ್ರ ಸ್ಥಳ ಸೇರಿದಂತೆ ಜಿಲ್ಲೆಯ ಪ್ರಮುಖ ಪಟ್ಟಣಗಳು ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿಯೂ ಇಲಾಖೆಯಿಂದ ನಿಗಾವಿರಿಸುವ ಮೂಲಕ ಅಲ್ಲಲ್ಲಿ ಸಿ.ಸಿ. ಕ್ಯಾಮರಾಗಳನ್ನು ಅಳವಡಿಸಲು ಯೋಜನೆ ರೂಪಿಸಲಾಗಿದೆ. ಹೀಗೆ ಕೊಡಗು ಪೊಲೀಸ್ ಇಲಾಖೆ ಕಾನೂನು ಸುವ್ಯವಸ್ಥೆಯೊಂದಿಗೆ ಜನಹಿತ ಕಾಪಾಡುವ ಮೂಲಕ ಅಪರಾಧಗಳನ್ನು ತಡೆಗಟ್ಟುತ್ತಾ, ಸುಧಾರಣೆ ತರುವ ದಿಸೆಯಲ್ಲಿ ಕಾರ್ಯೋನ್ಮುಖವಾಗಿರುವದು ಗೋಚರಿಸಿದೆ.

-ಶ್ರೀಸುತ.