ಮಡಿಕೇರಿ, ಜ. 7: ಅರೆಸೇನಾ ಪಡೆಯ ನಿವೃತ್ತ ಯೋಧರ ಒಕ್ಕೂಟದ ಕೊಡಗು ಜಿಲ್ಲಾ ಘಟಕಕ್ಕೆ ಸ್ವಂತ ಕಚೇರಿಯನ್ನು ಹೊಂದಲು ನಿವೇಶನವನ್ನು ತಕ್ಷಣ ಮಂಜೂರು ಮಾಡಬೇಕೆಂದು ಒತ್ತಾಯಿಸಿರುವ ಒಕ್ಕೂಟದ ಪದಾಧಿಕಾರಿಗಳು, ತಾ. 16 ರಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸುವದಾಗಿ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಅಧ್ಯಕ್ಷÀ ಎಂ.ಜಿ. ಯತೀಶ್, ಅರೆಸೇನಾಪಡೆಯ ನಿವೃತ್ತ ಯೋಧರು ಕಚೇರಿಗಾಗಿ ಕೇವಲ 20 ಸೆಂಟ್ ಜಾಗದ ಬೇಡಿಕೆಯನ್ನು ಇಡಲಾಗಿದೆ. ಸ್ವಂತ ಕಚೇರಿ, ಕ್ಯಾಂಟೀನ್ ಸೌಲಭ್ಯ ಮತ್ತು ಯೋಧರ ಕಲ್ಯಾಣ ಕೇಂದ್ರಕ್ಕಾಗಿ ಕಟ್ಟಡವನ್ನು ಹೊಂದಲು ಸರ್ವೆ ಸಂಖ್ಯೆ 10/2ರ ಕರ್ಣಂಗೇರಿ ಗ್ರಾಮದ 0.20 ಏಕರೆ ಜಾಗದ ಮಂಜೂರಾತಿಗಾಗಿ ಅರ್ಜಿ ಸಲ್ಲಿಸಿ ಐದು ವರ್ಷ ಕಳೆÉದಿದ್ದರು ಇಲ್ಲಿಯವರೆಗೆ ಯಾವದೇ ಸ್ಪÀಂದನ ದೊರಕಿಲ್ಲವೆಂದು ಬೇಸರ ವ್ಯಕ್ತಪಡಿಸಿದರು.

ಅನುರಾಗ್ ತಿವಾರಿ ಜಿಲ್ಲಾಧಿಕಾರಿಗಳಾಗಿದ್ದಾಗ ಈ ಬಗ್ಗೆ ಹೆಚ್ಚಿನ ಆಸಕ್ತಿ ತೋರಿದ್ದರು. ಆದರೆ, ಅವರು ವರ್ಗಾವಣೆಯಾದ ನಂತರ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ ಸತತವಾಗಿ ಸತಾಯಿಸುವ ಮೂಲಕ ಮಾನಸಿಕ ಹಿಂಸೆಯನ್ನು ನೀಡುತ್ತಿದ್ದಾರೆ ಎಂದು ಆರೋಪಿಸಿದರು.

ಅನೇಕ ಬಾರಿ ಕಡತ ನಾಪತ್ತೆಯಾಗಿದೆ ಎನ್ನುವ ನಿರ್ಲಕ್ಷ್ಯ ಮನೋಭಾವವನ್ನು ಕೂಡ ತೋರಿದ್ದಾರೆ. ಅಧಿಕಾರಿಗಳ ಈ ವರ್ತನೆಯಿಂದ ಮಾನಸಿಕವಾಗಿ ಹಿಂಸೆ ಅನುಭವಿಸಿದ ಒಕ್ಕೂಟದ ಕಾರ್ಯದರ್ಶಿಯೊಬ್ಬರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಸೌಲಭ್ಯಗಳನ್ನು ನೀಡಲು ಸರ್ಕಾರ ಅರೆ ಸೇನಾ ಪಡೆಯ ನಿವೃತ್ತರನ್ನು ನಿರ್ಲಕ್ಷಿಸುತ್ತಿದೆಯೆಂದು ಆರೋಪಿಸಿದರು.

ರಾಜಕೀಯ ಪಕ್ಷಗಳು ಕೂಡ ನಮ್ಮ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲವೆಂದು ಬೇಸರ ವ್ಯಕ್ತಪಡಿಸಿದ ಪದಾಧಿಕಾರಿಗಳು ತಾ. 16 ರಂದು ಜಿಲ್ಲಾಧಿಕಾರಿಗಳ ಕಚೇರಿ ಎದುರಿನಲ್ಲಿ ಧರಣಿ ಸತ್ಯಾಗ್ರಹ ನಡೆಸುವದಾಗಿ ತಿಳಿಸಿದರು.

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ‘ನೋಟಾ’ಕ್ಕೆ ಮತ ಹಾಕುವ ಮೂಲಕ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸುವದಾಗಿ ಒಕ್ಕೂಟದ ಕಾರ್ಯದರ್ಶಿ ನೂರೇರ ಎಂ. ಭೀಮಯ್ಯ ತಿಳಿಸಿದರು. ಈ ಚಳುವಳಿಯನ್ನು ರಾಜ್ಯಮಟ್ಟಕ್ಕೆ ವಿಸ್ತರಿಸುವದಾಗಿ ಎಚ್ಚರಿಕೆ ನೀಡಿದರು. ಜಿಲ್ಲಾ ಒಕ್ಕೂಟದಲ್ಲಿ ಸುಮಾರು 700ಕ್ಕೂ ಅಧಿಕ ಮಂದಿ ಸದಸ್ಯರಿದ್ದಾರೆ ಎಂದರು.

ಗೋಷ್ಠಿಯಲ್ಲಿ ಗೌರವಾಧ್ಯಕ್ಷ ಎಂ.ಡಿ. ಗಣಪತಿ, ಪ್ರಧಾನ ಕಾರ್ಯದರ್ಶಿ ಬಿ.ಎಸ್. ರಾಜಶೇಖರ್ ಹಾಗೂ ಸಲಹೆಗಾರ ಕುದುಪಜೆ ಎಸ್.ಆನಂದ ಉಪಸ್ಥಿತರಿದ್ದರು.