ಮಡಿಕೇರಿ, ಜ. 7: ಕರ್ನಾಟಕ ಹಾಗೂ ಕೇಂದ್ರ ಸರಕಾರ ಎಲ್ಲರಿಗೂ ಕಡ್ಡಾಯ ಶಿಕ್ಷಣದ ಘೋಷಣೆಯೊಂದಿಗೆ ಒಂದರಿಂದ 14ರವರಗಿನ ಯೊರೊಬ್ಬರೂ ಈ ವಯಸ್ಸಿನಲ್ಲಿ ಶಿಕ್ಷಣ ವಂಚಿತರಾಗದಂತೆ ಅನೇಕ ಯೋಜನೆಗಳನ್ನು ಜಾರಿಗೊಳಿಸಿದೆ. ಅಲ್ಲದೆ ಗ್ರಾಮೀಣ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ಅನೇಕ ಕಡೆಗಳಲ್ಲಿ ವಸತಿ ನಿಲಯಗಳನ್ನು ಸ್ಥಾಪಿಸಿದೆ. ಈ ರೀತಿ ಒಂದೊಮ್ಮೆ ಸುಸಜ್ಜಿತ ಕಟ್ಟಡದೊಂದಿಗೆ ಪ್ರಾಥಮಿಕ ಹಂತದ ವಿದ್ಯಾರ್ಥಿಗಳ ಕಲಿಕೆಗಾಗಿ ಸ್ಥಾಪಿಸಿದ್ದ ವಿದ್ಯಾರ್ಥಿ ನಿಲಯವೊಂದು ಸದ್ದಿಲ್ಲದೆ ಬಾಗಿಲು ಮುಚ್ಚಿಕೊಂಡು ಇಂದು ಕಾಡು ಪಾಲಾಗಿರುವ ದೃಶ್ಯ ಎದುರಾಗಿದೆ.

ಮಡಿಕೇರಿಯಿಂದ ಅನತಿ ದೂರದಲ್ಲಿ ಕಾಟಕೇರಿ ಗ್ರಾ.ಪಂ. ವ್ಯಾಪ್ತಿಯಲ್ಲಿರುವ ಈ ವಿದ್ಯಾರ್ಥಿ ನಿಲಯ ಮುಚ್ಚಿ ಹೋಗಿದೆ. ಕಾರಣ ಕೇಳಿದರೆ ಮಕ್ಕಳು ಇಲ್ಲ ಎಂಬ ಉತ್ತರ ಅಧಿಕಾರಿಗಳಿಂದ ಬರಲಿದೆ. ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವಂತೆ ಪಕ್ಕದಲ್ಲೇ ಸರಕಾರಿ ಶಾಲೆಯ ಸಹಿತ ಮದೆಮಹೇಶ್ವರ ಖಾಸಗಿ ವಿದ್ಯಾಸಂಸ್ಥೆಯೂ ಇರುವೆಡೆ ಈ ವಿದ್ಯಾರ್ಥಿ ನಿಲಯ ಕಾಡು ಪಾಲಾಗುತ್ತಿರುವದು ಆತಂಕಕಾರಿಯಾಗಿದೆ. ಹೊಸ ಹೊಸ ಘೋಷಣೆಗಳನ್ನು ಮಾಡುವ ಮುನ್ನ ಇರುವ ವ್ಯವಸ್ಥೆಯನ್ನು ಸಮರ್ಪಕವಾಗಿ ಬಳಸಿಕೊಳ್ಳುವ ದಿಸೆಯಲ್ಲಿ ಸರಕಾರ, ಜನಪ್ರತಿನಿಧಿಗಳು, ಅಧಿಕಾರಿಗಳು ಕಾಳಜಿ ವಹಿಸಿದರೆ ಕಾಟಕೇರಿಯಲ್ಲಿರುವ ಇಂಥ ವಸತಿನಿಲಯ ನೆಲಕಚ್ಚುವ ಮುನ್ನ ಉಳಿಸಿಕೊಂಡು ಸದ್ಬಳಕೆ ಮಾಡಿಕೊಳ್ಳಲು ಸಾಧ್ಯವಾದೀತು.