ಮಡಿಕೇರಿ, ಜ. 7: ನಾಳೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೊಡಗು ಜಿಲ್ಲಾ ಪ್ರವಾಸ ಹಿನ್ನೆಲೆಯಲ್ಲಿ ಒಂದೆಡೆ ಜಿಲ್ಲಾಡಳಿತ ಹಾಗೂ ಕಾಂಗ್ರೆಸ್ ಪಕ್ಷದಿಂದ ಪ್ರತ್ಯೇಕ ತಯಾರಿ ನಡೆಯುತ್ತಿದೆ. ಇಲ್ಲಿನ ಮ್ಯಾನ್ಸ್ ಕಾಂಪೌಂಡ್ ಮೈದಾನದಲ್ಲಿ ಈಗಾಗಲೇ ಬೃಹತ್ ಶಾಮಿಯಾನ ದೊಂದಿಗೆ ಪೆಂಡಾಲ್ ನಿರ್ಮಾಣಗೊಳ್ಳುತ್ತಿದೆ.ಮುಖ್ಯಮಂತ್ರಿ ಸಹಿತ ಗಣ್ಯರಿಗೆ ವಿಶೇಷ ಆಸನ ವ್ಯವಸ್ಥೆಯೊಂದಿಗೆ, ವೇದಿಕೆಯಲ್ಲಿ 50 ಆಸನಗಳನ್ನು ಹಾಕುವಷ್ಟು ವಿಶಾಲತೆಯನ್ನು ಕಲ್ಪಿಸಲಾಗುತ್ತಿದೆ. ಅಲ್ಲದೆ ಭದ್ರತಾ ದೃಷ್ಟಿಯಿಂದ ಇತರರು ವೇದಿಕೆಯನ್ನು ಏರದಂತೆ ಸರಳು ಬೇಲಿ ನಿರ್ಮಾಣ ಗೊಳಿಸಲಾಗುತ್ತಿದ್ದು, ತುರ್ತು ಸಂದರ್ಭ ಪಕ್ಕದಲ್ಲೇ ತಾತ್ಕಾಲಿಕ ಶೌಚಾಲಯ ಕೂಡ ಮಾಡಲಾಗುತ್ತಿದೆ.

ಕಾರ್ಯಕ್ರಮ ವೇದಿಕೆಯಿಂದ ಎದುರುಗಡೆ ಮಾಧ್ಯಮ ಪ್ರತಿನಿಧಿಗಳ ಸಹಿತ ವಿಶೇಷ ಆಹ್ವಾನಿತರು, ಕಾಂಗ್ರೆಸ್ ಮುಖಂಡರಿಗಾಗಿ ಸುಮಾರು 300 ಆಸನಗಳನ್ನು ವ್ಯವಸ್ಥೆಗೊಳಿಸಲು ಗಮನ ಹರಿಸಲಾಗಿದೆ.

ಮುಖ್ಯಮಂತ್ರಿಗಳ ಭಾಷಣ ಆಲಿಸಲು ಮೈದಾನದ ಪೆಂಡಾಲ್ ಕೆಳಗೆ ಆರು ಸಾವಿರಕ್ಕೂ ಅಧಿಕ ಮಂದಿಗೆ ಕುಳಿತುಕೊಳ್ಳಲು ಕುರ್ಚಿಗಳನ್ನು ಹಾಕಲಾಗುತ್ತಿದ್ದು, ಮೈದಾನ ಸುತ್ತಲು ಸಾವಿರಾರು ಸಂಖ್ಯೆಯಲ್ಲಿ ಜನರು ಕುಳಿತುಕೊಳ್ಳಲು ಇರುವಂತಹ ಗ್ಯಾಲರಿಗಳನ್ನು ಕೂಡ ಬಳಸಿಕೊಳ್ಳಲು ನಿರ್ಧರಿಸಲಾಗಿದೆ.

ಜಿಲ್ಲಾಡಳಿತ ತಯಾರಿ : ಇನ್ನೊಂದೆಡೆ ಜಿಲ್ಲಾಧಿಕಾರಿ ಶ್ರೀವಿದ್ಯಾ ಹಾಗೂ ಪೊಲೀಸ್ ಅಧೀಕ್ಷಕ ಪಿ. ರಾಜೇಂದ್ರ ಪ್ರಸಾದ್, ನೂತನ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಮಿಶ್ರ ಸೇರಿದಂತೆ ಮುಖ್ಯಮಂತ್ರಿಗಳ ಕಾರ್ಯಕ್ರಮ ಯಶಸ್ಸಿಗೆ ವಿವಿಧ ಇಲಾಖಾ ಅಧಿಕಾರಿಗಳು ತಯಾರಿ ಯಲ್ಲಿದ್ದಾರೆ. ಕಳೆದ ಐದು ವರ್ಷಗಳಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ಸರಕಾರದಿಂದ ಕೊಡಗಿನಲ್ಲಿ ಕೈಗೊಂಡಿರುವ ಅಭಿವೃದ್ಧಿ ಪಟ್ಟಿಯನ್ನು ಕೂಡ ಈ ಸಂದರ್ಭ ಬಿಡುಗಡೆ ಗೊಳಿಸಲಾಗುತ್ತಿದೆ.

ಮಡಿಕೇರಿಯ ಹೆಲಿಪ್ಯಾಡ್‍ನಿಂದ ರಸ್ತೆ ಮಾರ್ಗದಲ್ಲಿ 12 ಗಂಟೆ ಸುಮಾರಿಗೆ ಕ್ರಿಸ್ಟಲ್ ಹಾಲ್‍ಗೆ ಆಗಮಿಸಲಿರುವ ಮುಖ್ಯಮಂತ್ರಿಗಳು ಅಲ್ಲಿ ಸರಕಾರದ ವಿವಿಧ ಯೋಜನೆಯಡಿ ಫಲಾನುಭವಿಗಳಿಗೆ ಸವಲತ್ತುಗಳನ್ನು ವಿತರಿಸಲಿದ್ದಾರೆ. ಅಲ್ಪಸಂಖ್ಯಾತರ ಕಲ್ಯಾಣ ಕಾರ್ಯಕ್ರಮಗಳು,

(ಮೊದಲ ಪುಟದಿಂದ) ಶಿಕ್ಷಣ ಕ್ಷೇತ್ರದಲ್ಲಿ ಉನ್ನತ ವಿದ್ಯಾಭ್ಯಾಸಕ್ಕಾಗಿ ‘ಲ್ಯಾಪ್‍ಟಾಪ್’ ಇತ್ಯಾದಿಯನ್ನು ವಿದ್ಯಾರ್ಥಿಗಳಿಗೆ ವಿತರಿಸಲಿದ್ದು, ಭೂ ಮಂಜೂರಾತಿ ಫಲಾನುಭವಿಗಳಿಗೆ ಹಕ್ಕುಪತ್ರ ನೀಡಲಿದ್ದಾರೆ. ಇನ್ನು ಹಲವಷ್ಟು ಸವಲತ್ತುಗಳನ್ನು ಆಯಾ ಇಲಾಖೆಗಳಿಂದ ನೇರ ಫಲಾನುಭವಿಗಳಿಗೆ ಮುಖ್ಯಮಂತ್ರಿ ಹಸ್ತಾಂತರ ಮಾಡಲಿದ್ದಾರೆ.

ಉದ್ಘಾಟನಾ ಕಾರ್ಯಕ್ರಮ: ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆಗೆ ಚಾಲನೆ ನೀಡಲಿದ್ದಾರೆ. ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಪಿ.ಅಪ್ಪಚ್ಚುರಜನ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ, ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್.ಸೀತಾರಾಂ, ಕಂದಾಯ ಸಚಿª ಕಾಗೋಡು ತಿಮ್ಮಪ್ಪ, ಲೋಕೋಪಯೋಗಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ, ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಉಮಾಶ್ರೀ, ಪೌರಾಡಳಿತ ಸಚಿವ ಈಶ್ವರ ಬಿ. ಖಂಡ್ರೆ, ಜವಳಿ ಮತ್ತು ಮುಜರಾಯಿ ಸಚಿª ರುದ್ರಪ್ಪ ಮಾನಪ್ಪ ಲಮಾಣಿ, ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಕೊಡಗು ಜಿ.ಪಂ.ಅಧ್ಯಕ್ಷ ಬಿ.ಎ.ಹರೀಶ್, ಸಂಸದ ಪ್ರತಾಪ್ ಸಿಂಹ, ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ, ವಿಧಾನ ಪರಿಷತ್ ಸದಸ್ಯರಾದ ಎಂ.ಪಿ.ಸುನಿಲ್ ಸುಬ್ರಮಣಿ, ಶಾಂತೆಯಂಡ ವೀಣಾ ಅಚ್ಚಯ್ಯ, ರಾಜ್ಯ ರೇಷ್ಮೆ ಮಾರಾಟ ಮಂಡಳಿ ಅಧ್ಯಕ್ಷ ಟಿ.ಪಿ.ರಮೇಶ್, ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷೆ ಎಂ. ಪದ್ಮಿನಿ ಪೊನ್ನಪ್ಪ, ಜಿ.ಪಂ.ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ನಗರಸಭೆ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಹಾಗೂ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಇತರರು ಪಾಲ್ಗೊಳ್ಳಲಿದ್ದಾರೆ.