ಸುಂಟಿಕೊಪ್ಪ, ಜ. 7: ರಾಜ್ಯ ಸರಕಾರ ಪ್ರತಿ ಗ್ರಾಮ ಪಂಚಾಯಿತಿ ಕೇಂದ್ರದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸುವ ಮೂಲಕ ಬಡ ಜನರ ಆರೋಗ್ಯ ಕಾಪಾಡುವ ದಿಸೆಯಲ್ಲಿ ಅಗ್ಗದ ದರದಲ್ಲಿ ನೀಡಿ ನೀರಿನ ದಾಹ ನಿವಾರಿಸುವ ಬಹುನಿರೀಕ್ಷಿತ ಯೋಜನೆ ಜಾರಿಗೊಳಿಸಿದೆ.

ಆದರೆ ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಡು ಕಚೇರಿ ಬಳಿ 10 ತಿಂಗಳ ಹಿಂದೆ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಜಿ.ಪಂ. ಸದಸ್ಯೆ ಕೆ.ಪಿ. ಚಂದ್ರಕಲಾ, ತಾ.ಪಂ. ಸದಸ್ಯೆ ವಿಮಲಾವತಿ, ಗ್ರಾ.ಪಂ. ಅಧ್ಯಕ್ಷೆ ರೋಸ್‍ಮೇರಿ ರಾಡ್ರಿಗಸ್, ಪಂಚಾಯಿತಿ ಸದಸ್ಯರುಗಳು ಉದ್ಘಾಟಿಸಿದ ಶುದ್ಧ ಕುಡಿಯುವ ನೀರಿನ ಘಟಕದಲ್ಲಿ ಈಗ ಒಂದು ತೊಟ್ಟು ನೀರೂ ಲಭ್ಯವಾಗುತ್ತಿಲ್ಲ.

ಶುದ್ಧ ಕುಡಿಯುವ ನೀರಿಗಾಗಿ ವಾಹನದಲ್ಲಿ ಕ್ಯಾನ್ ಇಟ್ಟುಕೊಂಡು ಬಂದ ಗ್ರಾಹಕರು ನೀರಿಗಾಗಿ ಬಟನ್ ಒತ್ತಿದರೆ ನೀರೇ ಸಿಗದೆ ವಾಪಾಸ್ಸು ಬರಿಗೈಯಲ್ಲಿ ಹಿಂತೆರಳುವಂತಾಗಿದೆ. ಗುತ್ತಿಗೆದಾರರು ಅವೈಜ್ಞಾನಿಕವಾಗಿ ನಿರ್ಮಿಸಿದ ಶುದ್ಧ ಕುಡಿಯುವ ನೀರಿನ ಘಟಕ ಈಗ ತಾಂತ್ರಿಕ ತೊಂದರೆಯಿಂದ ಕಾರ್ಯನಿರ್ವಹಿಸದೆ ಕಳೆದ 15 ದಿನಗಳಿಂದ ಕೆಟ್ಟು ನಿಂತಿದೆ. ರೂ. 10 ಲಕ್ಷ ವೆಚ್ಚ ಮಾಡಿ ನಿರ್ಮಿಸಿರುವÀ ಕುಡಿಯುವ ನೀರಿನ ಘಟಕದಲ್ಲಿ ಕಳೆದ 20 ದಿನಗಳಿಂದ ನೀರು ಸಿಗದೆ ಗ್ರಾಹಕರು ಸಂಬಂಧಪಟ್ಟವರನ್ನು ಶಪಿಸುವಂತಾಗಿದೆ. - ಆರ್. ಆರ್