ಸೋಮವಾರಪೇಟೆ,ಜ.7: ಇಳಿಜಾರಿನ ರಸ್ತೆಯಲ್ಲಿ ನಿಲ್ಲಿಸಿದ್ದ ಐಷರ್ ಲಾರಿಯೊಂದು ದಿಢೀರಾಗಿ ಮುಂದಕ್ಕೆ ಚಲಿಸಿದ ಪರಿಣಾಮ ಎದುರು ಬದಿ ನಿಲುಗಡೆಯಾಗಿದ್ದ ಮೂರು ದ್ವಿಚಕ್ರ ವಾಹನಗಳು ಜಖಂಗೊಂಡ ಘಟನೆ ಇಂದು ಪಟ್ಟಣದಲ್ಲಿ ನಡೆದಿದ್ದು, ಅದೃಷ್ಟವಶಾತ್ ಹೆಚ್ಚಿನ ದುರಂತ ತಪ್ಪಿದೆ.

ಪಟ್ಟಣದ ಸಿ.ಕೆ. ಸುಬ್ಬಯ್ಯ ರಸ್ತೆ ಯಲ್ಲಿರುವ ಕಾಫಿ ಗೋದಾಮಿನಿಂದ ಕಾಫಿ ಚೀಲಗಳನ್ನು ಸಾಗಾಟ ಗೊಳಿಸಲು ಐಷರ್ ಲಾರಿಯನ್ನು ರಸ್ತೆ ಬದಿ ನಿಲ್ಲಿಸಲಾಗಿತ್ತು. ಲಾರಿಯ ಚಕ್ರಗಳಿಗೆ ಕಲ್ಲನ್ನು ಅಡ್ಡವಿಡುವ ಬದಲು ಇಟ್ಟಿಗೆಯ ತುಂಡನ್ನು ಕ್ಲೀನರ್ ಇಟ್ಟಿದ್ದ.

ಕಾಫಿ ತುಂಬಿದ್ದ ಚೀಲಗಳನ್ನು ಐಷರ್ ವಾಹನಕ್ಕೆ ತುಂಬಿಸುತ್ತಿದ್ದಂತೆ ಮುಂದಕ್ಕೆ ಚಲಿಸಿದ ಲಾರಿ ಇಟ್ಟಿಗೆ ಯನ್ನು ಪುಡಿಗೈದು ಮುನ್ನುಗ್ಗಿತು. ಪರಿಣಾಮ ಎದುರು ಭಾಗದಲ್ಲಿ ನಿಲುಗಡೆಗೊಂಡಿದ್ದ ಎರಡು ಬೈಕ್ ಮತ್ತು ಒಂದು ಸ್ಕೂಟಿಗೆ ಅಪ್ಪಳಿಸಿತು. ಇದರಿಂದ ಮೂರೂ ದ್ವಿಚಕ್ರ ವಾಹನಗಳು ಸಂಪೂರ್ಣವಾಗಿ ಜಖಂಗೊಂಡಿದ್ದು, ಸಾವಿರಾರು ರೂ. ನಷ್ಟ ಸಂಭವಿಸಿದೆ.

ಸಿ.ಕೆ. ಸುಬಯ್ಯ ರಸ್ತೆ ಇಳಿಜಾರು ರಸ್ತೆಯಾಗಿದ್ದು, ದ್ವಿಚಕ್ರ ವಾಹನಗಳಿಗೆ ಡಿಕ್ಕಿಯಾಗದೇ ಇದ್ದಿದ್ದರೆ ಹಲವು ಪ್ರಾಣ ಹಾನಿ ಸಂಭವಿಸುತ್ತಿತ್ತು. ಅದೃಷ್ಟವಶಾತ್ ಯಾವದೇ ಪ್ರಾಣಹಾನಿ ಸಂಭವಿಸಿಲ್ಲ. ಲಾರಿ ಮಾಲೀಕರು ಮತ್ತು ದ್ವಿಚಕ್ರ ವಾಹನ ಮಾಲೀಕರ ನಡುವೆ ಮಾತುಕತೆ ಮೂಲಕ ಪ್ರಕರಣವನ್ನು ಇತ್ಯರ್ಥಗೊಳಿಸಲಾಗಿದೆ.