ಮಡಿಕೇರಿ, ಜ. 5: ಕೊಡಗಿನ ಗಡಿ ಭಾಗವಾದ ಕರಿಕೆಯ ಜನತೆ ಮೂಲಭೂತ ಸೌಲಭ್ಯಗಳ ಕೊರತೆ ಯನ್ನು ಎದುರಿಸುತ್ತಿದ್ದು, ಗಡಿ ಭಾಗದ ಗ್ರಾಮಗಳ ಹೀನಾಯ ಪರಿಸ್ಥಿತಿಗೆ ಸರಕಾರ ಹಾಗೂ ಅಧಿಕಾರಿ ಗಳ ನಿರ್ಲಕ್ಷ್ಯ ಧೋರಣೆಯೇ ಕಾರಣವೆಂದು ಆರೋಪಿಸಿರುವ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಕರಿಕೆ ರಸ್ತೆ ದುರಸ್ತಿಗೆ ಒಂದು ತಿಂಗಳ ಗಡುವು ನೀಡಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಸಾಪ ಜಿಲ್ಲಾಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್, ಇತ್ತೀಚೆಗೆ ಕರಿಕೆಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಗಡಿಭಾಗದಲ್ಲಿರುವ ಅನ್ಯ ಭಾಷಿಕರು ಹೆಚ್ಚು ಕಾಳಜಿ ವಹಿಸಿ ಯಶಸ್ವಿಗೊಳಿಸಿದ್ದಾರೆ. ಗಡಿಭಾಗವಾಗಿರುವ ಕಾರಣ ಇಲ್ಲಿ ಕನ್ನಡಿಗರು ಸೇರಿದಂತೆ ಅನ್ಯಭಾಷಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಇವರುಗಳ ಸಹಕಾರ ಅವಿಸ್ಮರಣೀಯವೆಂದರು.
ಆದರೆ ಗಡಿಭಾಗ ಎನ್ನುವ ಕಾರಣಕ್ಕಾಗಿಯೇ ಕರಿಕೆಯನ್ನು ಕರ್ನಾಟಕದ ಆಡಳಿತ ವ್ಯವಸ್ಥೆ ಸಂಪೂರ್ಣವಾಗಿ ನಿರ್ಲಕ್ಷಿಸಿದ್ದು, ಸ್ಥಳೀಯರು ಮೂಲಭೂತ ಸೌಲಭ್ಯಗಳ ಕೊರತೆಯಿಂದ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ರಸ್ತೆ ಹದಗೆಟ್ಟಿದ್ದು, ಕನಿಷ್ಠ ಸಾಹಿತ್ಯ ಸಮ್ಮೇಳನಕ್ಕಾದರೂ ರಸ್ತೆ ದುರಸ್ತಿ ಕಾರ್ಯ ಕೈಗೊಳ್ಳಬೇಕಾಗಿತ್ತು. ಆದರೆ ಸೇವಾ ಮನೋಭಾವದ ಅಧಿಕಾರಿಗಳ ಕೊರತೆ ಕೊಡಗನ್ನು ಕಾಡುತ್ತಿರುವದರಿಂದ ಈ ರೀತಿಯ ಯಾವದೇ ಸ್ಪಂದನೆ ದೊರೆಯುತ್ತಿಲ್ಲವೆಂದು ಲೋಕೇಶ್ ಸಾಗರ್ ಆರೋಪಿಸಿದರು.
ರಸ್ತೆ ಅವ್ಯವಸ್ಥೆಯಿಂದ ಬೇಸತ್ತಿರುವ ಕರಿಕೆ ಗ್ರಾಮಸ್ಥರು ಜಿಲ್ಲಾ ಕೇಂದ್ರ ಸ್ಥಾನ ಮಡಿಕೇರಿಗೆ ನೇರವಾಗಿ ಬರುವ ಬದಲು ಕೇರಳದ ಮಾರ್ಗವಾಗಿ ದಕ್ಷಿಣ ಕನ್ನಡಕ್ಕೆ ಬಂದು ನಂತರ ಮಡಿಕೇರಿ ತಲುಪುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ಮುಂದಿನ ಒಂದು ತಿಂಗಳೊಳಗೆ ರಸ್ತೆ ದುರಸ್ತಿ ಕಾರ್ಯ ಸೇರಿದಂತೆ ಕರಿಗೆ ಗ್ರಾಮಕ್ಕೆ ಮೂಲಭೂತ ಸೌಲಭ್ಯಗಳನ್ನು ನೀಡದಿದ್ದಲ್ಲಿ ಗ್ರಾಮಸ್ಥರ ಬೆಂಬಲದೊಂದಿಗೆ ಕಸಾಪ ವತಿಯಿಂದ ಪ್ರತಿಭಟನೆ ನಡೆಸಲಾಗುವದೆಂದು ಎಚ್ಚರಿಕೆ ನೀಡಿದರು.
ಸರಕಾರ ಗಡಿ ಗ್ರಾಮಗಳ ಅಭಿವೃದ್ಧಿಗೆ ಹೆಚ್ಚಿನ ಕಾಳಜಿ ತೋರಬೇಕೆಂದು ಒತ್ತಾಯಿಸಿದ ಅವರು, ಜನಸೇವೆ ಮಾಡಲು ಇಚ್ಛೆ ಇಲ್ಲದ ಅಧಿಕಾರಿಗಳು ಕೊಡಗನ್ನು ಬಿಟ್ಟು ತೊಲಗಲಿ ಎಂದು ಅಸಮಾಧಾನ ವ್ಯಕ್ತಪಡಿಸಿದರು. ರಾಜಕಾರಣಿಗಳು ಕೇವಲ ಮತಬ್ಯಾಂಕ್ ರಾಜಕಾರಣಕ್ಕಾಗಿ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದ್ದಾರೆಯೇ ಹೊರತು ಗಡಿಗ್ರಾಮಗಳ ಅಭಿವೃದ್ಧಿಯ ಬಗ್ಗೆ ಕಾಳಜಿ ತೋರುತ್ತಿಲ್ಲವೆಂದು ಟೀಕಿಸಿದರು.
ಪ್ರವಾಸಿಗರ ಗಮನ ಸೆಳೆಯುವ ಸಲುವಾಗಿ ಅರಣ್ಯ ಇಲಾಖೆ ಜಿಲ್ಲೆಯ ವಿವಿಧ ಭಾಗಗಳಲ್ಲಿ ಅಳವಡಿಸಿರುವ ನಾಮಫಲಕಗಳು ಆಂಗ್ಲ ಮಾಧ್ಯಮದಲ್ಲಿದ್ದು, ಕನ್ನಡಕ್ಕೆ ಆದ್ಯತೆ ನೀಡದಿದ್ದರೆ ಪ್ರತಿಭಟನೆ ನಡೆಸುವದಾಗಿ ಎಚ್ಚರಿಕೆ ನೀಡಿದರು. ಕಸಾಪದ ವತಿಯಿಂದ ಜಿಲ್ಲೆಯಾದ್ಯಂತ ಕನ್ನಡ ಭಾಷೆ, ಸಾಹಿತ್ಯ ಪರ ಚಟುವಟಿಕೆಗಳು ಹೆಚ್ಚು ನಡೆಯುತ್ತಿದೆ ಎಂದು ಲೋಕೇಶ್ ಸಾಗರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕಸಾಪ ಜಿಲ್ಲಾ ಕಾರ್ಯದರ್ಶಿ ಕೆ.ಎಸ್.ರಮೇಶ್ ಹಾಗೂ ವೀರಾಜಪೇಟೆ ತಾಲೂಕು ಅಧ್ಯಕ್ಷ ಮದೋಷ್ ಪೂವಯ್ಯ ಉಪಸ್ಥಿತರಿದ್ದರು.