*ಗೋಣಿಕೊಪ್ಪಲು, ಜ. 5: ತಿತಿಮತಿಯ ದೇವಮಚ್ಚಿ ಮೀಸಲು ಅರಣ್ಯಕ್ಕೆ ಸೇರಿದ ಸ್ಥಳದಲ್ಲಿ ಇತ್ತೀಚೆಗೆ ವಿಶ್ವ ಹಿಂದು ಪರಿಷತ್ ಸಂಘಟಕರು ಭಗವಾಧ್ವಜವನ್ನು ಅಳವಡಿಸಿ ಅರಣ್ಯ ಪ್ರದೇಶವನ್ನು ಒತ್ತುವರಿ ಮಾಡಿಕೊಂಡಿರುವದರ ವಿರುದ್ಧ ತಿತಿಮತಿ ವಲಯ ಅರಣ್ಯಾಧಿಕಾರಿಗಳು ವಿಶ್ವ ಹಿಂದು ಪರಿಷತ್‍ನ ಕೆಲವು ಕಾರ್ಯಕರ್ತರಿಗೆ ನೊಟೀಸ್ ನೀಡಿದ್ದಾರೆ.

ಧ್ವಜ ಅಳವಡಿಸಿರುವ ಸ್ಥಳ ಅರಣ್ಯ ಪ್ರದೇಶದ್ದಾಗಿದೆ. ಇಲ್ಲಿನ ವ್ಯಕ್ತಿಯೊಬ್ಬರು ಈ ಜಾಗವನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿ ದ್ದಾರೆ. ಅರಣ್ಯ ಪ್ರದೇಶದಲ್ಲಿ ಕಾನೂನು ಬಾಹಿರವಾಗಿ ಯಾವದೇ ಚಟುವಟಿಕೆಗೆ ಅವಕಾಶವಿಲ್ಲ. ಅರಣ್ಯ ಇಲಾಖೆ ನಿಯಮದಂತೆ ಅರಣ್ಯ ಜಾಗದಲ್ಲಿ ಅಕ್ರಮ ಚಟುವಟಿಕೆ ನಡೆಸಿದವರ ವಿರುದ್ಧ ಕ್ರಮಕೈಗೊಳ್ಳಲಾಗುವದು. ಇದಕ್ಕಾಗಿ ಸಂಬಂಧಪಟ್ಟ ವ್ಯಕ್ತಿಗಳಿಗೆ ಸ್ಥಳ ತೆರವುಗೊಳಿಸುವಂತೆ ನೋಟೀಸ್ ನೀಡಲಾಗಿದೆ ಎಂದು ಎಸಿಎಫ್ ಶ್ರೀಪತಿ ಹೇಳಿದರು.

ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಕೆ.ಜಿ.ಬೋಪಯ್ಯ ಸ್ಥಳ ಪರಿಶೀಲನೆ ಮಾಡಿ ಭದ್ರಗೋಳ ಅರಣ್ಯ ಪೈಸಾರಿ ಸರ್ವೆ ನಂ. 280ರಲ್ಲಿ ಒಟ್ಟು 131 ಎಕರೆ ಅರಣ್ಯ ಪ್ರದೇಶವಿದೆ. ಇದರಲ್ಲಿ ಸುಮಾರು 10 ಎಕರೆ ಜಾಗದಲ್ಲಿ ಕಾಫಿ ಗಿಡ ನೆಡಲಾಗಿದೆ. ಕಂದಾಯ ಇಲಾಖೆಯವರು ಹಕ್ಕು ಪತ್ರ ನೀಡಿದ್ದಾರೆ. ಇದರಲ್ಲಿ ಕಾಫಿ ಕೃಷಿ ಎಂದಿದ್ದು ಅರಣ್ಯ ಭೂಮಿ ಎಂಬುದನ್ನು ನಮೂದಿಸಲಾಗಿದೆ. ಜತೆಗೆ ಇದೇ ಸರ್ವೆ ಭೂಮಿಯಲ್ಲಿ 8 ಎಕರೆ ಗೋಮಾಳವಿರುವ ಬಗ್ಗೆ ದಾಖಲೆಯಲ್ಲಿದೆ. ಆದರೆ ಅದು ಎಲ್ಲಿದೆ ಎಂಬದು ಸ್ವತಃ ಅರಣ್ಯ ಇಲಾಖೆಯ ವರಿಗೂ ಗೊತ್ತಿಲ್ಲ. ಇದನ್ನೆಲ್ಲ ಕೂಲಂಕಷವಾಗಿ ಪರಿಶೀಲಿಸಿ ಮುಂದಿನ ಕ್ರಮಕೈಗೊಳ್ಳಬೇಕು ಎಂದು ಎಸಿಎಫ್ ಶ್ರೀಪತಿ ಅವರಿಗೆ ತಿಳಿಸಿದರು.

ಬಳಿಕ ಎಸಿಎಫ್ ಶ್ರೀಪತಿ ಮಾತನಾಡಿ ಒತ್ತವರಿಯಾಗಿರುವ ಅರಣ್ಯ ಭೂಮಿ ಬಗ್ಗೆ ಸರ್ವೆ ಮಾಡಿಸಲಾಗುವದು ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ.ಎ. ಹರೀಶ್, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮನು ಮುತ್ತಪ್ಪ, ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಚಲನ್ ಕುಮಾರ್, ದೇವರಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ವಸಂತ, ಸದಸ್ಯ ಕಿಟ್ಟು, ವೀರಾಜಪೇಟೆ ಪಟ್ಟಣ ಪಂಚಾಯಿತಿ ಅಧ್ಯಕ್ಷ ಇ.ಸಿ. ಜೀವನ್, ಜಿಲ್ಲಾ ಪಂಚಾಯಿತಿ ಸದಸ್ಯ ಸಿ.ಕೆ. ಬೋಪಣ್ಣ, ತಿತಿಮತಿ ಬಿಜೆಪಿ ಸ್ಥಾನೀಯ ಸಮಿತಿ ಅಧ್ಯಕ್ಷ ಎನ್.ಎನ್. ಅನೂಪ್, ಫೆಡರೇಷನ್ ನಿರ್ದೇಶಕ ಮಲ್ಲಂಡ ಮಧು ದೇವಯ್ಯ, ಚೆಪ್ಪುಡೀರ ಮಾಚಯ್ಯ, ಗೋಣಿಕೊಪ್ಪಲು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ರಾಜೇಶ್ ಹಾಗೂ ಅಲ್ಲಿನ ನಿವಾಸಿಗಳು ಹಾಜರಿದ್ದರು.

ಚಿತ್ರ ವರದಿ: ಎನ್.ಎನ್.ದಿನೇಶ್