ಮಡಿಕೇರಿ, ಜ. 4: ವಿಧಾನಸಭಾ ಚುನಾವಣೆ ಸನಿಹವಾಗುತ್ತಿರುವಂತೆ ರಾಜಕೀಯ ಸಂಚಲನವೂ ಹೆಚ್ಚಾಗುತ್ತಿದೆ. ಜಿಲ್ಲೆಯಿಂದ ಯಾವ ಪಕ್ಷದಿಂದ ಯಾರು ಅಭ್ಯರ್ಥಿಗಳಾಗಬಹುದು ಎಂಬ ಕೌತುಕ ದಿನೇ ದಿನೇ ಹೆಚ್ಚಾಗುತ್ತಿದೆ. ಕಾಂಗ್ರೆಸ್ ಪಕ್ಷದಲ್ಲಿ ಅದರಲ್ಲೂ ವೀರಾಜಪೇಟೆ ಕ್ಷೇತ್ರದ ಟಿಕೆಟ್ ವಿಚಾರ ಹೆಚ್ಚು ಕುತೂಹಲ ಮೂಡಿಸುತ್ತಿದೆ.ಇಲ್ಲಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಾಗಿ ಈ ತನಕ ಆರು ಮಂದಿಯ ಹೆಸರು ಚಲಾವಣೆಯಲ್ಲಿದ್ದು ಇದೀಗ ಇನ್ನಿಬ್ಬರು ಈ ಪಟ್ಟಿಯಲ್ಲಿ ಸೇರ್ಪಡೆಯಾಗಿದ್ದಾರೆ. ಅರುಣ್ ಮಾಚಯ್ಯ, ಪದ್ಮಿನಿ ಪೊನ್ನಪ್ಪ, ಶಿವು ಮಾದಪ್ಪ, ಕದ್ದಣಿಯಂಡ ಹರೀಶ್ ಬೋಪಣ್ಣ, ಸರಿತಾ ಪೂಣಚ್ಚ, ಬಿ.ಎಸ್. ತಮ್ಮಯ್ಯ ಅವರ ಹೆಸರು ಕೇಳಿ ಬಂದಿತ್ತು. ಈ ಆರು ಮಂದಿ ತಮ್ಮ ತಮ್ಮ ಮಟ್ಟದಲ್ಲಿ ಪ್ರಯತ್ನ ನಡೆಸುತ್ತಿದ್ದಾರೆ.
ಇದೀಗ ಈ ತನಕ ತೆರೆ ಮರೆಯಲ್ಲಿದ್ದ ಮತ್ತೊಂದು ಹೆಸರು ಚಲಾವಣೆಗೆ ಬಂದಿದೆ. ಅರೆಭಾಷೆ ಅಕಾಡೆಮಿಯ ಅಧ್ಯಕ್ಷರಾಗಿ ಕಳೆದ ಅವಧಿಯಲ್ಲಿ ಕಾರ್ಯನಿರ್ವಹಿಸಿದ್ದ ನಾಪೋಕ್ಲು ಬ್ಲಾಕ್ ಕಾಂಗ್ರೆಸ್‍ನ ಮಾಜಿ ಅಧ್ಯಕ್ಷ ಕೊಲ್ಯದ ಗಿರೀಶ್ ಅವರು ತಮ್ಮ ಮಟ್ಟದಲ್ಲಿ ಪ್ರಯತ್ನ ಮುಂದುವರಿಸಿದ್ದು, ಹಲವು ರಾಜ್ಯ ಪ್ರಮುಖರ ಸಂಪರ್ಕದಲ್ಲಿರುವದು ತಿಳಿದು ಬಂದಿದೆ.
ಗಿರೀಶ್ ಒಟ್ಟಿಗೆ ಇನ್ನೊಬ್ಬರು ಆಕಾಂಕ್ಷಿ ಕಾಫಿ ಬೆಳೆಗಾರರು, ಬೆಳೆಗಾರರ ಸಂಘಟನೆಗಳೊಂದಿಗೆ ಗುರುತಿಸಿಕೊಂಡಿರುವ ಕಾಫಿ ಮಂಡಳಿಯ ಮಾಜಿ ಉಪಾಧ್ಯಕ್ಷೆ ಆದೇಂಗಡ ತಾರಾ ಅಯ್ಯಮ್ಮ ಅವರು ಇವರೂ ಪಕ್ಷದ ವರಿಷ್ಠರ ಸಂಪರ್ಕ ಹೊಂದಿದ್ದು, ಇದೀಗ ಕೆಪಿಸಿಸಿಯ ಕಾರ್ಯಕಾರಿ ಸಮಿತಿಯ ಸದಸ್ಯೆಯಾಗಿಯೂ ಆಯ್ಕೆಯಾಗಿದ್ದಾರೆ.
ಒಂದು ವೇಳೆ ಹೀಗಾದಲ್ಲಿ...
ರಾಜಕೀಯದಲ್ಲಿ ಏನುಬೇಕಾದರೂ ನಡೆಯಬಹುದೆಂಬ ಮಾತಿದೆ. ಇದರಂತೆ ಜನವಲಯದಲ್ಲಿ ಹಲವು ಮಾತು ಅಂತೆ-ಕಂತೆಗಳು ಕೇಳಿ ಬರುತ್ತಿವೆ. ವೀರಾಜಪೇಟೆ ಕ್ಷೇತ್ರದ ಹಾಲಿ ಶಾಸಕ, ಪ್ರಭಾವಿಯಾಗಿರುವ ಕೆ.ಜಿ. ಬೋಪಯ್ಯ ಅವರು ಈ ಬಾರಿ ಕ್ಷೇತ್ರ ಬದಲಾವಣೆ ಮಾಡಿ ಮಡಿಕೇರಿ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ ಎಂಬದಾಗಿ ವದಂತಿ ಹರಡಿದೆ. ಈ ಬೆಳವಣಿಗೆಯಾದಲ್ಲಿ ಕಾಂಗ್ರೆಸ್ ಟಿಕೆಟ್‍ನ ಮೇಲೆಯೂ ಇದರ ಪರಿಣಾಮ ಬೀರಲಿದೆ ಎಂಬದು ರಾಜಕೀಯ ಲೆಕ್ಕಾಚಾರ.
ಮಡಿಕೇರಿ ಕ್ಷೇತ್ರದಲ್ಲಿ ಐ.ಎನ್.ಟಿ.ಯು.ಸಿ. ಸಂಘಟನೆಯೊಂದಿಗೆ ಕ್ರಿಯಾಶೀಲ ಕೆಲಸದೊಂದಿಗೆ ಗುರುತಿಸಿಕೊಂಡಿರುವ ನಾಪಂಡ ಮುತ್ತಪ್ಪ ಅವರು ಓರ್ವ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದು, ಪಕ್ಷದ ವಲಯದಲ್ಲಿ ಇತರ ಆಕಾಂಕ್ಷಿಗಳಾದ ಚಂದ್ರಮೌಳಿ, ವಿರೂಪಾಕ್ಷ, ಕೆ.ಎಂ. ಲೋಕೇಶ್, ಕೆ.ಪಿ. ಚಂದ್ರಕಲಾ ಅವರುಗಳ ಹೆಸರಿನೊಂದಿಗೆ ಇವರ ಹೆಸರೂ ಈಗಾಗಲೇ ಚಲಾವಣೆಯಲ್ಲಿದೆ. ಒಂದು ವೇಳೆ ಮಡಿಕೇರಿ ಕ್ಷೇತ್ರದ ಟಿಕೆಟ್ ಮುತ್ತಪ್ಪ ಅವರಿಗೆ ದೊರೆತು ಕೆ.ಜಿ. ಬೋಪಯ್ಯ ಅವರು ಮಡಿಕೇರಿಯಿಂದ ಕಣಕ್ಕಿಳಿದರೆ, ಮುಂದಿನ ಬೆಳವಣಿಗೆ ಏನಾಗಬಹುದು ಎಂಬದು ರಾಜಕೀಯಾಸಕ್ತರು ಹಾಗೂ ಪಕ್ಷಗಳ ಕಾರ್ಯಕರ್ತರಲ್ಲಿ ಹುದುಗಿರುವ ಸದ್ಯದ ಯಕ್ಷ ಪ್ರಶ್ನೆಯಾಗಿದೆ.
ಪ್ರಸ್ತುತ ಬೆಳವಣಿಗೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿಯಲ್ಲಿ ಜಾತಿ ಆಧಾರದ ಒತ್ತಡ ಹೆಚ್ಚಾಗುತ್ತಿದ್ದು, ಇದು ಏನಾಗಬಹುದು ಎಂಬದಕ್ಕೆ ಸದ್ಯಕ್ಕೆ ಉತ್ತರ ಸಿಗದು.
ನಾಪಂಡ ಮುತ್ತಪ್ಪ ಕೊಡವ ಜನಾಂಗದವರಾಗಿದ್ದು ಇವರಿಗೆ ಮಡಿಕೇರಿಯ ಟಿಕೆಟ್ ದೊರೆತಲ್ಲಿ ವೀರಾಜಪೇಟೆ ಕ್ಷೇತ್ರದಲ್ಲಿ ಗೌಡ ಜನಾಂಗದವರಿಗೆ ಟಿಕೆಟ್ ನೀಡಬೇಕು ಎಂಬ ಒತ್ತಡದ ಸಹಜವಾಗಿಯೇ ಎದುರಾಗುತ್ತದೆ ಎಂಬದರಲ್ಲಿ ಸಂಶಯವಿಲ್ಲ. ಈ ಹಿನ್ನಲೆಯಲ್ಲಿ ಕೊಲ್ಯದ ಗಿರೀಶ್ ಅವರ ಟಿಕೆಟ್ ಬೇಡಿಕೆ ವಿಚಾರ ಹೆಚ್ಚು ಕುತೂಹಲಕ್ಕೆ ಕಾರಣವಾಗಿದೆ.
ಮಹಿಳೆಯರಿಗೆ ಅವಕಾಶ ನೀಡುವದಾದಲ್ಲಿ ತಾವೂ ಟಿಕೆಟ್ ಕೇಳಲು ಎಲ್ಲಾ ಅರ್ಹತೆ ಹೊಂದಿದ್ದು, ತಮಗೆ ನೀಡಬೇಕು ಎನ್ನುವದು ತಾರಾ ಅಯ್ಯಮ್ಮ ಅವರ ವಾದವಾಗಿದೆ. ‘ಕೈ’ ಪಕ್ಷದ ಹೈಕಮಾಂಡ್ ಈ ಬಾರಿ ತೆಗೆದುಕೊಳ್ಳುವ ನಿಲುವೇನು ಎಂಬದು ಕುತೂಹಲದಲ್ಲಿರಿಸಿದೆ.