ಮಡಿಕೇರಿ, ಜ. 5: ಕಳೆದ ನವೆಂಬರ್ 10ರಂದು ಬೆಂಗಳೂರಿನ ಸ್ಯಾಟ್ಲೈಟ್ ರಾಜ್ಯ ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣದಿಂದ ಇಲ್ಲಿನ ವರ್ತಕರೊಬ್ಬರನ್ನು ಕಾರೊಂದರಲ್ಲಿ ಮೈಸೂರಿಗೆ ಬಿಡುವದಾಗಿ ನಂಬಿಸಿ ಮಾರ್ಗ ಮಧ್ಯೆ ಅವರನ್ನು ಮಾರಕಾಸ್ತ್ರಗಳಿಂದ ಘಾಸಿಗೊಳಿಸಿ, ನಗದು ಸೇರಿದಂತೆ ಚಿನ್ನದ ಸರ, ಮೊಬೈಲ್ ಕಸಿದುಕೊಂಡ ಪ್ರಕರಣ ನಡೆದಿತ್ತು.
ಅಂದು ಮಧ್ಯರಾತ್ರಿ ನಡೆದಿದ್ದ ಈ ಪ್ರಕರಣವನ್ನು ಕುಂಬಳಗೋಡು ಪೊಲೀಸ್ ಠಾಣಾ ವ್ಯಾಪ್ತಿಯ ಯುವಕರು ಪ್ರತ್ಯಕ್ಷ ಕಂಡು ವರ್ತಕನನ್ನು ಆಸ್ಪತ್ರೆಗೆ ದಾಖಲಿಸುವದರೊಂದಿಗೆ ಪೊಲೀಸರಿಗೆ ವಿಷಯ ಮುಟ್ಟಿಸಿದ್ದರು. ಗಾಯಾಳುವಿನ ಹೇಳಿಕೆ ಪಡೆದಿದ್ದ ಪೊಲೀಸರು ಈ ಬಗ್ಗೆ ಕೆಂಗೇರಿ ಠಾಣೆಯಲ್ಲಿ ವಿಷಯ ನಮೂದಿಸಿಕೊಂಡಿದ್ದರು.
ನ. 22ರಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಬ್ಯಾಟರಾಯನಪುರ ಪೊಲೀಸರು ಐವರನ್ನು ಬಂಧಿಸಿ, 40 ಗ್ರಾಂ ಚಿನ್ನದ ಆಭರಣ ಸೇರಿದಂತೆ 13 ಮೊಬೈಲ್ ಇತ್ಯಾದಿ ವಶಕ್ಕೆ ಪಡೆದಿರುವ ಬಗ್ಗೆ ಸುಳಿವು ಲಭಿಸಿತು. ಈ ಬಗ್ಗೆ ಖುದ್ದು ಪೊಲೀಸ್ ಠಾಣೆಗೆ ಸಂಪರ್ಕಿಸಿದಾಗ ಸಂಬಂಧಿಸಿದ ಠಾಣೆಯಲ್ಲಿ ಸಂಪರ್ಕಿಸಿ ಚಿನ್ನದ ಸರ ಹಾಗೂ ಮೊಬೈಲ್ ಪಡೆದುಕೊಳ್ಳುವಂತೆ ಉತ್ತರ ಬಂತು.
ಆ ಮೇರೆಗೆ ಗಾಯಾಳು ವರ್ತಕರು ತನ್ನ ಸ್ನೇಹಿತರ ಜತೆಯಲ್ಲಿ ತಾ. 30ರಂದು ಬೆಳಗ್ಗಿನ ಜಾವ 3 ಗಂಟೆಯ ಸುಮಾರಿಗೆ ಬ್ಯಾಟರಾಯನಪುರ ಪೊಲೀಸ್ ಠಾಣೆಗೆ ಭೇಟಿ ನೀಡಿದರು. ಅಲ್ಲಿ ಕರ್ತವ್ಯ ನಿರತ ಸಿಬ್ಬಂದಿ ಬೆಳಿಗ್ಗೆ 9 ಗಂಟೆಗೆ ಬಂದು ಮೇಲಧಿಕಾರಿಯನ್ನು ಕಂಡು ಕಳೆದುಕೊಂಡಿದ್ದ ವಸ್ತುಗಳನ್ನು ಪಡೆದುಕೊಳ್ಳುವಂತೆ ಸಲಹೆ ನೀಡಿದರು.
ಆ ಮೇರೆಗೆ 9 ಗಂಟೆಗೆ ಪೊಲೀಸ್ ಠಾಣೆಗೆ ತೆರಳಿದಾಗ ಅಲ್ಲಿನ ವೃತ್ತ ನಿರೀಕ್ಷಕರು ಭೇಟಿಗೆ ಲಭಿಸಿ
ನ. 10ರ ಪ್ರಕರಣ ಭೇದಿಸಿರುವ ಬಗ್ಗೆ ತಾವೇ ವಿವರ ನೀಡಿದರಲ್ಲದೆ, ಅರ್ಧ ಗಂಟೆಯಲ್ಲಿ ಠಾಣೆಯ ಮೊಕದ್ದಮೆ ಸಿಬ್ಬಂದಿಯಾಗಿರುವ ಮುಖ್ಯಪೇದೆ ಜಗದೀಶ್ ಬರಲಿದ್ದು, ಚಿನ್ನದ ಸರ ಹಾಗೂ ಮೊಬೈಲ್ ಪಡೆದುಕೊಳ್ಳುವಂತೆ ಸಲಹೆ ನೀಡಿ, ಕರ್ತವ್ಯ ನಿಮಿತ್ತ ತೆರಳಿದರು.
ಇತ್ತ 10 ಗಂಟೆ ಕಳೆದರೂ, ಸಂಬಂಧಿಸಿದ ಸಿಬ್ಬಂದಿ ಬರಲಿಲ್ಲ. ಅನಂತರ ಠಾಣೆಗೆ ಬಂದ ಈ ಸಿಬ್ಬಂದಿ ಮೊದಲೇ ವೃತ್ತ ನಿರೀಕ್ಷಕರು ದೂರವಾಣಿ ಮೂಲಕ ವಿಷಯ ತಿಳಿಸಿದ್ದರೂ, ತನಗೇನೂ ತಿಳಿಯದಂತೆ ಕುಳಿತಿದ್ದರು. ಸಮಯ ಮೀರಿದ್ದರಿಂದ ಅಲ್ಲಿನ ಬೇರೊಬ್ಬರು ಸಿಬ್ಬಂದಿ ಬಳಿ ವಿಚಾರಿಸಲಾಗಿ ಪಕ್ಕದ ಕೋಣೆಯಲ್ಲಿ ಕಂಪ್ಯೂಟರ್ ಎದುರು ನಾಗರಿಕ ಧಿರಿಸುವಿನೊಂದಿತೆ ಇದ್ದ ವ್ಯಕ್ತಿಯೇ ‘ಕೇಸ್ ವರ್ಕರ್’ ಎಂದು ತಿಳಿಯಿತು.
ಈ ವ್ಯಕ್ತಿ ಬಳಿ ತೆರಳಿ ವಿಷಯ ತಿಳಿಸಿದಾಗ ಬಿಳಿ ಹಾಳೆಯೊಂದರಲ್ಲಿ ಅನ್ಯಾಯಕ್ಕೆ ಒಳಗಾಗಿದ್ದ ವರ್ತಕ ಹೇಳಿದೆಲ್ಲವನ್ನು ಬರೆದುಕೊಂಡರು. ಆ ವೇಳೆಗೆ ಇನ್ನಿಬ್ಬರು ಹಿರಿಯ ಸಿಬ್ಬಂದಿಗಳಾದ ಶಿವರಾಜ್ ಹಾಗೂ ಕಾಳರಸಯ್ಯ ಬಂದರು. ಈ ಮೂವರು ಸೇರಿ ಏನೋ ಮಾತುಕತೆ ನಡೆಸಿದರಲ್ಲದೆ, ಪ್ರಕರಣ ಸಂಬಂಧ ವರ್ತಕರಲ್ಲಿ ದಾಖಲಾತಿ ಕೇಳಿದರು.
ನ. 10ರಂದು ಮಧ್ಯರಾತ್ರಿ ದುಷ್ಕರ್ಮಿಗಳಿಂದ ಗಾಯಗೊಂಡಿದ್ದ ವೇಳೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ ಸಂಬಂಧ (ರಾಜರಾಜೇಶ್ವರಿ ಆಸ್ಪತ್ರೆ) ಪುಟ್ಟ ಫೈಲ್ವೊಂದನ್ನು ವರ್ತಕ ಈ ಪೊಲೀಸರಿಗೆ ನೀಡಿದರು. ಅದನ್ನು ನೋಡಿದ ಸಿಬ್ಬಂದಿ ಜಗದೀಶ್ ಏನನ್ನೋ ಕಂಪ್ಯೂಟರ್ನಲ್ಲಿ ನಮೂದಿಸುತ್ತಿದ್ದರು.
ಈ ವೇಳೆ ಇನ್ನಿಬ್ಬರು ವರ್ತಕ ಹಾಗೂ ಜತೆಯವರನ್ನು ಠಾಣೆ ಬಳಿಯ ಉಪಹಾರ ಗೃಹದಲ್ಲಿ ಚಹಾ ಸೇವಿಸಲು ಕರೆದೊಯ್ದರು. ಅಲ್ಲಿ ಚಹಾ ಕುಡಿದು ಬರುವಷ್ಟರಲ್ಲಿ ಪ್ರಕರಣ ಸಂಬಂಧ ಕುಂಬಳಗೋಡು ಠಾಣೆಗೊಮ್ಮೆ ಹೋಗಿ ಬರೋಣವೆಂದು ವರ್ತಕರ ಕಾರನ್ನೇರಿ ಹೊರಟರು.
ಅಲ್ಲಿನ ಸುಮಾರು ಒಂದು ಗಂಟೆ ವಿನಾಃಕಾರಣ ಕಳೆದು ಹಿಂದಿರುಗಿ ರಾಜರಾಜೇಶ್ವರಿ ಆಸ್ಪತ್ರೆಗೆ ಬರಲಾಯಿತು. ಆಸ್ಪತ್ರೆಯ ದಾಖಲೆ ಪರಿಶೀಲಿಸಿದಾಗ, ಅಲ್ಲಿ ನ. 10ರಂದು ಮಧ್ಯರಾತ್ರಿ 12.45ರ ವೇಳೆಗೆ ಗಾಯಾಳುವಿಗೆ ಚಿಕಿತ್ಸೆ ನೀಡುವದರೊಂದಿಗೆ ಕೆಂಗೇರಿ ಠಾಣೆಗೆ ವರದಿ ರವಾನಿಸಿದ್ದನ್ನು ರುದ್ರಪ್ಪ ಎಂಬ ಸಿಬ್ಬಂದಿ ಪಡೆದಿರುವದು ದೃಢಪಟ್ಟಿತು.
ಆಸ್ಪತ್ರೆಯಿಂದ ನೇರವಾಗಿ ಕೆಂಗೇರಿ ಪೊಲೀಸ್ ಠಾಣೆಗೆ ತೆರಳಲಾಯಿತು. ಅಲ್ಲಿ ಠಾಣಾಧಿಕಾರಿ ಹಾಗೂ ಸಿಬ್ಬಂದಿ ಜತೆ ಬ್ಯಾಟರಾಯನಪುರ ಪೊಲೀಸರು ಅರ್ಧ ಗಂಟೆಗೂ ಹೆಚ್ಚು ಸಮಯ ಕಳೆದರಲ್ಲದೆ, ಮಧ್ಯಾಹ್ನ ಊಟದ ವೇಳೆ ಮೀರುತ್ತಿದ್ದ ಕಾರಣ ಎಲ್ಲರೂ ಒಂದೆಡೆ ಊಟ ಮುಗಿಸಿ ಮತ್ತೆ 2.30ರ ಹೊತ್ತಿಗೆ ಬ್ಯಾಟರಾಯನಪುರ ಠಾಣೆಗೆ ಬರಲಾಯಿತು.
ಅಲ್ಲಿ ಸುಮಾರು 5 ಗಂಟೆಯ ತನಕ ಇರಿಸಿಕೊಂಡ ಸಿಬ್ಬಂದಿ ಜಗದೀಶ, ವರ್ತಕರನ್ನು ಸ್ಯಾಟ್ಲೈಟ್ ನಿಲ್ದಾಣಕ್ಕೆ ಕರೆದುಕೊಂಡು ಬಂದು ಸ್ಥಳ ಪರಿಶೀಲಿಸಿ ನ. 10ರ ಘಟನೆ ಬಗ್ಗೆ ಒಂದಿಷ್ಟು ಮರು ವಿಚಾರಣೆಗಾಗಿ ಹೇಳಿಕೆ ಪಡೆದು ದೂರು ನಮೂದಿಸಿಕೊಂಡು ಪ್ರಥಮ ವರ್ತಮಾನ ವರದಿ ನೀಡಿದರು.
ಈ ಸಂದರ್ಭ ಮೊಬೈಲ್ ಹಾಗೂ ಚಿನ್ನದ ಸರ ಇತ್ಯಾದಿ ಕೇಳಿದಾಗ, ಅದು ಪ್ರಕರಣವೇ ಬೇರೆ... ನಿಮ್ಮನ್ನು ದೋಚಿದ ಆರೋಪಿಗಳು ಬೇರೆಯಿದ್ದು, ಮುಂದೆ ಅವರನ್ನು ಬಂಧಿಸಿದರೆ ವಿಷಯ ತಿಳಿಸುವದಾಗಿ ಹೇಳಿದರು. ಬೆಳಿಗ್ಗೆಯಿಂದ ಸಂಜೆಯ ತನಕ ಮಡಿಕೇರಿಯಿಂದ ಕರೆಸಿಕೊಂಡಿದ್ದವರಿಗೆ ಕೇವಲ ದೂರು ದಾಖಲಿಸಿಕೊಳ್ಳಲು ಇಷ್ಟು ಹೊತ್ತು ಕೂರಿಸಿಕೊಳ್ಳುವ ಅಗತ್ಯವಿತ್ತೇ? ಎಂದು ಪ್ರಶ್ನಿಸಿದಾಗ ಪೊಲೀಸರ ಬಳಿ ಉತ್ತರವಿರಲಿಲ್ಲ.
ಚಿನ್ನ ಲಪಟಯಿಸಿರುವ ಸಂಶಯ : ಮೇಲಿನ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರವಾಣಿ ಮೂಲಕ ವಿಚಾರಿಸಿದಾಗ ವರ್ತಕ ಕಳೆದುಕೊಂಡಿದ್ದ ಚಿನ್ನದ ಸರ ಹಾಗೂ ಮೊಬೈಲ್ ಸಿಕ್ಕಿರುವದಾಗಿ ದೃಢಪಡಿಸಿ ಠಾಣೆಗೆ ಬಂದು ಪಡೆದುಕೊಳ್ಳುವಂತೆ ತಿಳಿಸಿದ್ದ ಪೊಲೀಸರು ಇಲ್ಲಿ ಚಿನ್ನದ ಸರ ಹಾಗೂ ಮೊಬೈಲ್ ಲಪಟಾಯಿಸಿ ಬಿಟ್ಟರೇ? ಎಂಬ ಸಂಶಯ ಹುಟ್ಟಿಕೊಂಡಿದೆ.
ಅಲ್ಲದೆ ಸಮವಸ್ತ್ರ ಧರಿಸಿ ಕರ್ತವ್ಯ ನಿರ್ವಹಿಸುವ ಪೊಲೀಸರಿಗೂ ಮಫ್ತ್ತಿಯಲ್ಲಿ (ನಾಗರಿಕ ಧಿರಿಸು) ಇರುವವರಿಗೂ ಪರಸ್ಪರ ಸಂಬಂಧವಿಲ್ಲವೇ? ಇಂಥವರು ಕಳ್ಳ ಖಧೀಮರು, ಸಮಾಜಘಾತುಕರ ಒಡನಾಟದಲ್ಲಿ ಅದೇ ಚಾಳಿಗೆ ಒಗ್ಗಿಕೊಂಡಿರುವರೇ ಎಂಬ ಸಂಶಯ ಮೇಲಿನ ಪ್ರಕರಣದಿಂದ ಹುಟ್ಟಿಕೊಳ್ಳುವಂತಾಗಿದೆ. ಈ ಬಗ್ಗೆ ಉನ್ನತ ಮಟ್ಟದ ಅಧಿಕಾರಿಗಳು ನಿಗಾ ವಹಿಸಿ ಮಡಿಕೇರಿ ವರ್ತಕರಂತೆ ಅನ್ಯಾಯಕ್ಕೆ ಸಿಲುಕಿದವರಿಗೆ ನ್ಯಾಯ ನೀಡಬೇಕಿದೆ. - ಶ್ರೀಸುತ