ಸೋಮವಾರಪೇಟೆ, ಜ. 5: ಸಮೀಪದ ಕಲ್ಕಂದೂರು ಗ್ರಾಮದ ಶ್ರೀ ಶಾಸ್ತ ಯುವಕ ಸಂಘದ ಆಶ್ರಯದಲ್ಲಿ ಗ್ರಾಮದ ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂದಿರದಲ್ಲಿ ಅಯ್ಯಪ್ಪ ಸ್ವಾಮಿಯ ಮಂಡಲ ಪೂಜೋತ್ಸವ ಶ್ರದ್ಧಾಭಕ್ತಿಯಿಂದ ನೆರವೇರಿತು.

ಭಜನಾ ಮಂದಿರದಲ್ಲಿ ಗಣಪತಿ ಹೋಮ, ಅಯ್ಯಪ್ಪ ಸ್ವಾಮಿಗೆ ಪುಷ್ಪಾರ್ಚನೆ, ಮಧ್ಯಾಹ್ನ ಭಕ್ತಾದಿಗಳಿಗೆ ಅನ್ನದಾನ ನಡೆಯಿತು. ಸಂಜೆ ಯಡೂರಿನ ಶ್ರೀ ಸೋಮೇಶ್ವರ ದೇವಾಲಯದಿಂದ ಕಲ್ಕಂದೂರು ಗ್ರಾಮದ ವರೆಗೆ ಶ್ರೀ ಅಯ್ಯಪ್ಪ ದೇವರ ವಿಗ್ರಹದ ಮೆರವಣಿಗೆ ಏರ್ಪಡಿಸಲಾಗಿತ್ತು. ಚಂಡೆ, ಮದ್ದಳೆ, ಕಲಶ, ದೀಪಾರತಿ, ಅಯ್ಯಪ್ಪ ವ್ರತಧಾರಿಗಳ ಭಜನೆಯೊಂದಿಗೆ ಮೆರವಣಿಗೆ ನಡೆಯಿತು.

ನಂತರ ನಡೆದ ಕಾರ್ಯಕ್ರಮದಲ್ಲಿ ಮಾಜಿ ಸೈನಿಕ ಅಯ್ಯಪ್ಪ, ವನಜಾಕ್ಷಿ, ಆರೋಗ್ಯ ಕಾರ್ಯಕರ್ತೆ ಹೇಮಲತ ಅವರುಗಳನ್ನು ಸಮಿತಿಯ ವತಿಯಿಂದ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಸುತ್ತಮುತ್ತಲಿನ ಗ್ರಾಮಗಳ ಸಾರ್ವಜನಿಕರು, ಅಯ್ಯಪ್ಪ ವ್ರತಧಾರಿಗಳು ಭಾಗವಹಿಸಿದ್ದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೇಣುಕಾ ವೆಂಕಟೇಶ್, ಗ್ರಾಮದ ಮಾಜಿ ಅಧ್ಯಕ್ಷ ಶಿವರಾಜು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ರೇವತಿ ಶೆಟ್ಟಿ, ಶ್ರೀ ಶಾಸ್ತ ಯುವಕ ಸಂಘದ ಅಧ್ಯಕ್ಷ ಸಿ.ಎನ್. ಲೋಕೇಶ್, ಉಪಾಧ್ಯಕ್ಷ ಕೆ.ಬಿ. ಸುರೇಶ್, ಕಾರ್ಯದರ್ಶಿ ಕೆ.ಬಿ. ಹರೀಶ್, ಖಜಾಂಚಿ ಕೆ.ಎಸ್. ಶಿವಕುಮಾರ್, ಉದಯಕುಮಾರ್, ಕುಮಾರ, ಅನಿಲ್, ದೀಕ್ಷಿತ್, ವಿನೋದ್, ನರೇಂದ್ರ, ಮಹೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.