ಲೋಕೇಶ್ ಸಾಗರ್ ಅಭಿಮತ

ಸುಂಟಿಕೊಪ್ಪ, ಜ. 5: ಕನ್ನಡ ಭಾಷೆಯನ್ನು ಗಟ್ಟಿಗೊಳಿಸುವ ಕೆಲಸ ಆಗಬೇಕು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‍ನ ಅಧ್ಯಕ್ಷ ಲೋಕೇಶ್ ಸಾಗರ್ ಹೇಳಿದರು. ಇಲ್ಲಿನ ಸರಕಾರಿ ಪ್ರೌಢಶಾಲೆಯಲ್ಲಿ ಜಿಲ್ಲಾ ಕಸಾಪ ವತಿಯಿಂದ ಸುಂಟಿಕೊಪ್ಪ ಹೋಬಳಿ ಮಟ್ಟದ ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಸ್ವಚ್ಛ ಕನ್ನಡ ಭಾಷಣ ಹಾಗೂ ಪ್ರಬಂಧ ಸ್ಪರ್ಧೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡ ವಿಶ್ವದಲ್ಲಿಯೇ ಅತೀ ಪ್ರಾಚೀನ ಭಾಷೆಯಾಗಿದ್ದು, ಕನ್ನಡ ಭಾಷೆಗೆ 4 ಸಾವಿರ ವರ್ಷಗಳ ಇತಿಹಾಸವಿದೆ ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ನಿವೃತ್ತ ಮುಖ್ಯೋಪಾಧ್ಯಾಯ ಸುಂದರ್ ಮಾತನಾಡಿ, ಕನ್ನಡ ಭಾಷೆ ಬೆಳೆಯಬೇಕಾದರೆ ಅದರ ಬಳಕೆಯನ್ನು ಹೆಚ್ಚಾಗಿ ಮಾಡಬೇಕು ಎಂದರು. ಸಮಾರಂಭದ ಅಧ್ಯಕ್ಷತೆಯನ್ನು ಸರಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಬಾಲಕೃಷ್ಣ ವಹಿಸಿ ಮಾತನಾಡಿದರು.

ವೇದಿಕೆಯಲ್ಲಿ ಸುಂಟಿಕೊಪ್ಪ ಕಸಾಪ ಅಧ್ಯಕ್ಷ ಎಂ.ಎಸ್. ಸುನೀಲ್, ಕಾರ್ಯದರ್ಶಿ ಸತೀಶ್ ಶೇಟ್, ಸುಂಟಿಕೊಪ್ಪ ಸರಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕರುಗಳಾದ ಈಶ, ಪಿಲಿಫ್ ವಾಸ್, ಕೊಡಗು ಜಿಲ್ಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ಟಿ. ಸೋಮಶೇಖರ್, ತಾಲೂಕು ಸದಸ್ಯರಾದ ಪಿ.ಎಫ್. ಸಬಾಸ್ಟೀನ್, ಡಿ. ನರಸಿಂಹ, ಬಿ.ಎಸ್. ಅಶೋಕ್ ಶೇಟ್ ಹಾಗೂ ಪ್ರೌಢಶಾಲೆಯ ಕನ್ನಡ ಶಿಕ್ಷಕಿ ಪುಷ್ಪ, ಟಿ.ಜಿ. ಪ್ರೇಮ್ ಕುಮಾರ್ ಉಪಸ್ಥಿತರಿದ್ದರು.