*ಸಿದ್ದಾಪುರ, ಜ. 5: ವಾಲ್ನೂರು-ತ್ಯಾಗತ್ತೂರು ಗ್ರಾಮ ಪಂಚಾಯಿತಿ ವತಿಯಿಂದ ಗ್ರಾಮಸ್ಥರಿಗೆ ನೀರಿನ ತೆರಿಗೆ ಹೆಚ್ಚಳ ಮಾಡಲು ಹಾಗೂ ನೀರು ಬಳಸುವ ಬಗ್ಗೆ ಮೀಟರ್ ಅಳವಡಿಸಲು ಸಾಮಾನ್ಯ ಸಭೆಯಲ್ಲಿ ಒಕ್ಕೊರಲಿನ ನಿರ್ಣಯ ಕೈಗೊಳ್ಳಲಾಯಿತು. ವಾಲ್ನೂರು ತ್ಯಾಗತ್ತೂರು ಗ್ರಾಮ ಪಂಚಾಯಿತಿಯ ಸಾಮಾನ್ಯ ಸಭೆಯು ಅಧ್ಯಕ್ಷೆ ನಾಗರತ್ನ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸದಸ್ಯ ಭುವನೇಂದ್ರ ವಿಷಯ ಪ್ರಸ್ತಾಪಿಸಿ ಆಭ್ಯತ್‍ಮಂಗಲ ಪೈಸಾರಿ ಜ್ಯೋತಿನಗರ ಹಾಗೂ ಇತರೆ ಕೆಲವಡೆ ಜನರಿಗೆ ಕುಡಿಯುವ ನೀರು ಸರಿಯಾಗಿ ಲಭಿಸುತ್ತಿಲ್ಲ, ಕೆಲವರು ಮನೆಯಲ್ಲಿ ಸಿಂಟೆಕ್ಸ್ ಟ್ಯಾಂಕ್ ಬಾವಿಯನ್ನು ನಿರ್ಮಿಸಿಕೊಂಡು ಅದಕ್ಕೆ ನೀರು ಶೇಖರಿಸುತ್ತಿರುವದರಿಂದ ಇತರೆ ಸಾಮಾನ್ಯ ಮಂದಿಗೆ ನೀರು ಸಿಗುತ್ತಿಲ್ಲ ಎಂಬ ದೂರು ಬಂದಿದೆ. ನೀರು ಸರಬರಾಜಿಗೆ ಪಂಚಾಯಿತಿಗೆ ದುಬಾರಿ ಖರ್ಚು ಬೀಳುತ್ತದೆ. ವಿದ್ಯುತ್ ಬಿಲ್ ಪೈಪ್ ರಿಪೇರಿ, ಮೋಟಾರ್ ರಿಪೇರಿ, ನೀರು ಗಂಟಿ ಸಂಬಳ ಸೇರಿ ಭಾರೀ ಹೊರೆ ಬೀಳುತ್ತದೆ. ಆದ್ದರಿಂದ ಈಗ ಪ್ರತಿ ತಿಂಗಳು 1 ಮನೆಯಿಂದ ನೀರು ತೆರಿಗೆ ರೂ 50 ವಿಧಿಸುವದನ್ನು ರೂ.75 ಕ್ಕೆ ಏರಿಸುವದು ಅನಿವಾರ್ಯ ವಾಗಿದೆ. ಹಾಗೆಯೇ ನೀರು ಬಳಕೆಗೆ ಮೀಟರ್ ಅಳವಡಿಸುವ ಅಗತ್ಯವಿದೆ ಎಂದರು. ಆಗ ಇತರ ಸದಸ್ಯರುಗಳು ಇದಕ್ಕೆ ಸಮ್ಮತಿ ಸೂಚಿಸಿದರು.

ವಾಲ್ನೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಅಲ್ಲಿ ಬೋರ್‍ವೆಲ್, ಹಾಗೂ 1 ಬಾವಿ ತೆಗೆದರೂ ಅಲ್ಲಿ ನೀರು ದೊರಕಿಲ್ಲ ಅದುದರಿಂದ ಮಕ್ಕಳಿಗೆ ಬಿಸಿಯೂಟ ತಯಾರಿಸಲು ಕುಡಿಯುವ ನೀರಿಗೆ ತೊಂದರೆಯಾಗಿದೆ. ಕೂಡಲೇ ಅಲ್ಲಿನ ಮೋಟಾರ್‍ಗೆ ಹ್ಯಾಂಡ್ ಪೈಪ್ ಅಳವಡಿಸಿ ನೀರು ಒದಗಿಸಿಕೊಡಬೇಕೆಂದು ಭುವನೇಂದ್ರ ಆಗ್ರಹಿಸಿದಾಗ ಸಭೆ ಒಪ್ಪಿಗೆ ಸೂಚಿಸಿತು. ಈ ಸಾಮಾನ್ಯ ಸಭೆಯಲ್ಲಿ ಉಪಾಧ್ಯಕ್ಷ ಕೆ.ಬಿ.ಸತೀಶ, ಪಿಡಿಓ ನಂಜುಡಸ್ವಾಮಿ, ಸದಸ್ಯರುಗಳಾದ ಅಂಚೆಮನೆ ಸುಧಿ, ಹೆಚ್.ಎಂ.ಕಮಲಮ್ಮ, ಕವಿತ, ಜಮೀಲಾ, ಸಲೀಂ,ದಿನೇಶ ಹಾಗೂ ಬಿ.ಕೆ. ಯಶೋಧ ಹಾಜರಿದ್ದರು.