ಸಂಕೇತ್ ಪೂವಯ್ಯ ಕುಶಾಲನಗರ, ಜ. 5: ಕೊಡಗು ಜಿಲ್ಲೆಯಲ್ಲಿ ರೈತಾಪಿ ವರ್ಗದ ಹಿತದೃಷ್ಟಿ ಕಾಯುವಲ್ಲಿ ರಾಜ್ಯ ಸರಕಾರ ಸಂಪೂರ್ಣ ವಿಫಲವಾಗಿದ್ದು ಇದರ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಧನಾ ಸಮಾವೇಶ ನಡೆಸುತ್ತಿರುವದು ಹಾಸ್ಯಾಸ್ಪದ ಎಂದು ಜಾತ್ಯತೀತ ಜನತಾದಳದ ಕೊಡಗು ಜಿಲ್ಲಾ ಅಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ ಹೇಳಿದರು. ಕುಶಾಲನಗರದಲ್ಲಿ ಕಾರ್ಯಕರ್ತರ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಕೊಡಗು ಜಿಲ್ಲೆಯಲ್ಲಿ ಕಾಡಾನೆ ಧಾಳಿಯಿಂದ 32 ಜನ ಹತ್ಯೆಯಾಗಿದ್ದು, 5 ಮಂದಿ ರೈತರು ಆತ್ಮಹತ್ಯೆಗೆ ಶರಣಾದ ಪ್ರಕರಣಗಳು ದಾಖಲಾಗಿದ್ದು, ಇದಕ್ಕೆ ಶಾಶ್ವತ ಪರಿಹಾರ ಕಂಡುಹಿಡಿಯುವಲ್ಲಿ ವಿಫಲರಾಗಿದ್ದಾರೆ. ಕಾಡಾನೆ ಧಾಳಿಯ ಬಗ್ಗೆ ಅರಣ್ಯ ಸಚಿವರು ಕನಿಷ್ಟ ಭೇಟಿ ನೀಡುವ ಸೌಜನ್ಯ ಮಾಡಿಲ್ಲ. ದಿಡ್ಡಳ್ಳಿ ನಿರಾಶ್ರಿ ತರಿಗೆ ಸಮರ್ಪಕ ವಾಗಿ ಪುರ್ನವಸತಿ ಕಲ್ಪಿಸುವಲ್ಲಿ ವಿಫಲರಾಗಿದ್ದಾರೆ. ಜಿಲ್ಲೆಯನ್ನು ಸರಕಾರ ಅನಾಥವನ್ನಾಗಿ ಮಾಡಿದ್ದು, ಇದೀಗ ಸಾಧನಾ ಸಮಾವೇಶದ ಹೆಸರಿನಲ್ಲಿ ಜನರನ್ನು ದಾರಿ ತಪ್ಪಿಸಲು ಪ್ರಯತ್ನ ಮಾಡುವದು ಸರಿಯಲ್ಲ.
ಇದೇ ಸಂದರ್ಭ ರಾಜ್ಯದಲ್ಲಿ ನಡೆದ ದಲಿತ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರದ ತಪ್ಪಿತಸ್ಥರ ಮೇಲೆ ಉಗ್ರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ ಅವರು ಹೆಣ್ಣು ಮಕ್ಕಳಿಗೆ ರಾಜ್ಯದಲ್ಲಿ ಅಭದ್ರತೆ ವಾತಾವರಣ ಸೃಷ್ಟಿಯಾಗಿದೆ ಎಂದರು.
ಈ ಸಂದರ್ಭ ಕ್ಷೇತ್ರ ಅಧ್ಯಕ್ಷ ಕೆಎಂಬಿ ಗಣೇಶ್, ಸಮಿತಿಯ ಸುರೇಶ್, ರಾಜ್ಯ ಉಪಾಧ್ಯಕ್ಷ ಎಂ.ಎಂ. ಶರೀಫ್, ಜಿಲ್ಲಾ ಪಂಚಾಯಿತಿ ಸದಸ್ಯ ಪುಟ್ಟರಾಜು, ತಾಲೂಕು ಪಂಚಾಯಿತಿ ಅಧ್ಯಕ್ಷೆ ಪುಷ್ಪಾ, ರಾಜ್ಯ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ರಾಜಾರಾವ್, ಪ್ರಧಾನ ಕಾರ್ಯದರ್ಶಿ ಎಂ.ಎಸ್. ರಾಜೇಶ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಬಿ.ಡಿ. ಅಣ್ಣಯ್ಯ, ಆದಿಲ್ ಪಾಷಾ, ಆರ್‍ಎಂಸಿ ಸದಸ್ಯರುಗಳಾದ ರಾಮಚಂದ್ರ, ತಮ್ಮಯ್ಯ, ವಿಜಯ್ ಮತ್ತಿತರರು ಇದ್ದರು.