ಮಡಿಕೇರಿ, ಜ. 6: ಕೊಡಗು ಜಿಲ್ಲೆ ಸೇರಿದಂತೆ ದೇಶದಾದ್ಯಂತ ದಲಿತರು ಹಾಗೂ ಅಲ್ಪಸಂಖ್ಯಾತರ ವಿರುದ್ಧ ದೌರ್ಜನ್ಯ ಹೆಚ್ಚುತ್ತಿದ್ದು, ಎರಡೂ ಸಮುದಾಯಗಳು ಒಂದಾಗಿ ಹೋರಾಟ ಮಾಡುವಂತೆ ಸಮಾನ ಮನಸ್ಕರ ಒಕ್ಕೂಟದ ಪ್ರಮುಖರು ಕರೆ ನೀಡಿದ್ದಾರೆ.
ವಿಜಯಪುರದಲ್ಲಿ ಇತ್ತೀಚೆಗೆ ದಾನಮ್ಮ ಎಂಬ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ಮಾಡಿದ ಪ್ರಕರಣದ ವಿರುದ್ಧ ಸಮಾನ ಮನಸ್ಕರ ಒಕ್ಕೂಟದ ವತಿಯಿಂದ ನಗರದ ಮುಖ್ಯ ರಸ್ತೆಯಲ್ಲಿ ಪ್ರತಿಭಟನೆ ಮೆರವಣಿಗೆ ನಡೆಸಿದ ಬಳಿಕ ಗಾಂಧಿಮೈದಾನದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿದ ಪ್ರಮುಖರು ಕರೆ ನೀಡಿದ್ದಾರೆ.
ಸಮಾನ ಮನಸ್ಕರ ಒಕ್ಕೂಟದ ಜಿಲ್ಲಾ ವಕ್ತಾರ ಹಾಗೂ ಎಸ್‍ಡಿಪಿಐ ಜಿಲ್ಲಾಧ್ಯಕ್ಷ ಅಮಿನ್ ಮೊಹಿಸಿನ್ ಪ್ರಾಸ್ತಾವಿಕವಾಗಿ ಮಾತನಾಡಿ, ದಾನಮ್ಮ ಅತ್ಯಾಚಾರ ಹಾಗೂ ಹತ್ಯೆ ಹೇಯ ಕೃತ್ಯವಾಗಿದ್ದು, ಖಂಡನೀಯ. ದಲಿತರು, ಆದಿವಾಸಿಗಳು ಹಾಗೂ ಅಲ್ಪಸಂಖ್ಯಾತರ ವಿರುದ್ಧ ನಡೆಯುತ್ತಿರುವ ದೌರ್ಜನ್ಯ, ಅನ್ಯಾಯವನ್ನು ಅರಿತು ಅವರ ವಿರುದ್ಧ ಧ್ವನಿ ಎತ್ತಬೇಕಾಗಿದೆ. ದಾನಮ್ಮ ಅತ್ಯಾಚಾರ ಹತ್ಯೆಯ ಪ್ರಕರಣವನ್ನು ಮರೆಮಾಚುವ ಉದ್ದೇಶದಿಂದ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಸಂವಿಧಾನ ವಿರೋಧಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿದ ಅವರು, ಸಮಾಜದಲ್ಲಿ ಭ್ರಾತೃತ್ವವನ್ನು ಬೆಸೆಯಬೇಕಾಗಿದೆ ಎಂದರು.
ಕೊಡಗಿನಲ್ಲಿ ಜೀತ ಪದ್ಧತಿ ಇಲ್ಲ ಎಂದು ಹೇಳುತ್ತಿರುವ ಭೂಮಾಲೀಕರು ಲೈನ್ ಮನೆಗಳಲ್ಲಿ ಇಂದಿಗೂ ಜೀತ ಪದ್ಧತಿ ಇದೆ ಎಂದು ಆರೋಪಿಸಿದರು. ದಿಡ್ಡಳ್ಳಿ ಹೋರಾಟದಿಂದಾಗಿ ಜಿಲ್ಲೆಗೆ 200 ಕೋಟಿ ರೂ. ಅನುದಾನವನ್ನು ಹಾಗೂ ದಿಡ್ಡಳ್ಳಿ ನಿವಾಸಿಗಳಿಗೆ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ. ಪಾಲೆಮಾಡು, ತೆರ್ಮೆಕಾಡು, ಚೆರಿಯಪರಂಬು, ಪೆರುಂಬಾಡಿ ಪೈಸಾರಿಗಳಲ್ಲಿ ದಲಿತರು ಮೂಲಭೂತ ಸೌಲಭ್ಯಕ್ಕಾಗಿ ಹೋರಾಟ ಮಾಡುತ್ತಿದ್ದರೂ, ಜಿಲ್ಲೆಯ ಜನಪ್ರತಿನಿಧಿಗಳು ಇತ್ತ ಗಮನ ಹರಿಸಿಲ್ಲ. ಮುಂದಿನ ಚುನಾವಣೆಯಲ್ಲಿ ದಲಿತರು ಅಲ್ಪಸಂಖ್ಯಾತರು ಒಂದಾಗಿ ತಕ್ಕ ಉತ್ತರ ನೀಡಬೇಕಾಗಿದೆ. ದಲಿತರು, ಅಲ್ಪಸಂಖ್ಯಾತರಿಗೆ ಭಯ ಮುಕ್ತ, ಹಸಿವು ಮುಕ್ತ ಸಮಾಜ ನಿರ್ಮಾಣ ಅಗತ್ಯವಾಗಿದೆ. ಫ್ಯಾಸಿಸ್ಟ್ ಸಂಘಪರಿವಾರದ ವಿರುದ್ಧ ಹೋರಾಟ ಕೈಗೊಳ್ಳಬೇಕಾಗಿದೆ ಎಂದು ಹೇಳಿದರು.
ಕೊಡಗು ಮುಸ್ಲಿಂ ಸಮಾಜದ ಅಧ್ಯಕ್ಷ ಪಿ.ಎಂ. ಖಾಸಿಂ ಮಾತನಾಡಿ, ದಲಿತರು ಮತ್ತು ಅಲ್ಪಸಂಖ್ಯಾತರು ಮತವನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡಬೇಕಾಗಿದೆ. ಭಾರತದಲ್ಲಿ ಮುಸಲ್ಮಾನರನ್ನು ಗುರಿ ಮಾಡಿಯಾಗಿಟ್ಟುಕೊಂಡು ದೇಶ ಕಟ್ಟುವದು ಅಸಾಧ್ಯ. ಮುಂದಿನ ಚುನಾವಣೆಯಲ್ಲಿ ಕೋಮುವಾದಿ ಶಕ್ತಿಗಳಿಗೆ ತಕ್ಕ ಪಾಠ ಕಲಿಸಬೇಕಾಗಿದೆ. ಇದಕ್ಕಾಗಿ ಅಲ್ಪಸಂಖ್ಯಾತರು, ದಲಿತರು ಒಂದಾಗಬೇಕಾಗಿದೆ. ದೇಶದ ಮೇಲೆ ನಮಗೂ ಪ್ರೀತಿ ಇದೆ. ಭಾರತದ ವಿರುದ್ಧ ಪಾಕ್ ಯುದ್ಧ ಸಾರಿದರೆ ಭಾರತದ ಪರವಾಗಿ ನಾವು ಮುಂದೆ ನಿಲ್ಲುತ್ತೇವೆ ಎಂದರು.
ಸಿಪಿಐಎಂಎಲ್ ಜಿಲ್ಲಾಧ್ಯಕ್ಷ ಡಿ.ಸಿ. ನಿರ್ವಾಣಪ್ಪ ಮಾತನಾಡಿ, ದೇಶದಲ್ಲಿ ದಲಿತರು, ಆದಿವಾಸಿಗಳು ಹಾಗೂ ಅಲ್ಪಸಂಖ್ಯಾತರಿಗೆ ರಕ್ಷಣೆ ಇಲ್ಲದಂತಾಗಿದೆ. ನಮ್ಮನ್ನು ಮತ ಹಾಕಲು ಮಾತ್ರ ಬಳಕೆ ಮಾಡುತ್ತಿದ್ದಾರೆ. ಎಲ್ಲಾ ಪಕ್ಷಗಳು ಬಂಡವಾಳಶಾಹಿಗಳ ಪರವಾಗಿದ್ದು, ಸಂವಿಧಾನಾತ್ಮಕ ಹಕ್ಕು ಇದ್ದಿದ್ದರೆ ದಾನಮ್ಮ ಅತ್ಯಾಚಾರ ನಡೆಯುತ್ತಿರಲಿಲ್ಲ. ಜಿಲ್ಲೆಯಲ್ಲಿ 20 ವರ್ಷದಿಂದ ಶಾಸಕರಾದವರು ಜಿಲ್ಲೆಗೆ ಏನು ಕೊಡುಗೆ ನೀಡಿದ್ದಾರೆ ಎಂದು ಪ್ರಶ್ನಿಸಿದ ಅವರು, ಜಿಲ್ಲೆಯಲ್ಲಿ ಅಭಿವೃದ್ಧಿ ಶೂನ್ಯವಾಗಿದೆ ಎಂದು ಆರೋಪಿಸಿದರು.
ಕೊಡಗಿನಲ್ಲಿ ಬಿಜೆಪಿ, ಸಂಘ ಪರಿವಾರವನ್ನು ಎದುರು ಹಾಕಿಕೊಳ್ಳಲು ಕಾಂಗ್ರೆಸ್‍ಗೆ ಸಾಧ್ಯವಿಲ್ಲ. ದಲಿತರು, ಅಲ್ಪಸಂಖ್ಯಾತರ ಮತ ಪಡೆದ ಕಾಂಗ್ರೆಸ್ ಕೊಡುಗೆಯೂ ಶೂನ್ಯ. ದೇಶದ ದರಿದ್ರಕ್ಕೆ ಕಾಂಗ್ರೆಸ್ ಕಾರಣವಾಗಿದೆ. ದಲಿತರು, ಅಲ್ಪಸಂಖ್ಯಾತರು ಸಂಘಟಿತರಾಗಬೇಕು ಎಂದು ಹೇಳಿದರು.
ಬಿಎಸ್‍ಪಿ ಜಿಲ್ಲಾಧ್ಯಕ್ಷ ಪ್ರೇಮ್‍ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಪ್ರತಿಭಟನಾ ವೇದಿಕೆಯಲ್ಲಿ ಎಸ್‍ಡಿಪಿಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಕ್ತಾರ್, ಭೂಮಿ ಮತ್ತು ವಸತಿ ಹಕ್ಕು ಹೋರಾಟ ಸಮಿತಿ ಸದಸ್ಯೆ ಹೆಚ್.ಎಂ. ಕಾವೇರಿ, ಪ್ರಮುಖರಾದ ಮೋಹನ್ ಮೌರ್ಯ, ಕೆ.ಬಿ. ರಾಜು, ಕೆ.ಜೆ. ಪೀಟರ್, ಮೊಣ್ಣಪ್ಪ, ಹೆಚ್.ಎಲ್. ದಿವಾಕರ್, ಮನ್ಸೂರ್ ಅಲಿ, ಕುಸುಮ, ನಾಗರತ್ನಮ್ಮ, ಎಸ್.ಆರ್. ಮಂಜುನಾಥ್, ಬಶೀರ್ ಹಾಗೂ ಇನ್ನಿತರರು ಇದ್ದರು.
ಇದಕ್ಕೂ ಮುನ್ನ ಸುದರ್ಶನ ವೃತ್ತದಿಂದ ಜನರಲ್ ತಿಮ್ಮಯ್ಯ ವೃತ್ತ, ಖಾಸಗಿ ಬಸ್ ನಿಲ್ದಾಣಕ್ಕಾಗಿ ಗಾಂಧಿಮೈದಾನದವರೆಗೆ ಮೆರವಣಿಗೆ ನಡೆಯಿತು. ರಫೀಕ್ ಸ್ವಾಗತಿಸಿದರು.