ಮಡಿಕೇರಿ, ಜ. 5: ಪ್ರತಿಯೊಬ್ಬರಿಗೂ ತಮ್ಮದೇ ಆದ ಸಾಮಥ್ರ್ಯವಿದ್ದು, ಶ್ರಮವಹಿಸಬೇಕು, ಜೊತಗೆ ಆಸಕ್ತಿ ಇರಬೇಕು. ಆಗಾದಾಗ ಮಾತ್ರ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆಯಲು ಸಾಧ್ಯ ಎಂದು ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರು ಅಭಿಪ್ರಾಯಪಟ್ಟರು. ರೋಟರಿ ಮಿಸ್ಟಿ ಹಿಲ್ಸ್, ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣ ಕಚೇರಿ ವತಿಯಿಂದ ನಗರದ ಸಂತ ಜೋಸೆಫರ ಶಾಲೆಯಲ್ಲಿ ಶುಕ್ರವಾರ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಮಾರ್ಗದರ್ಶಿ ಕಾರ್ಯಗಾರದಲ್ಲಿ ಗಿಡಕ್ಕೆ ನೀರು ಹಾಕುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ಯಾವದೇ ಕಾರಣಕ್ಕೂ ಒತ್ತಡಕ್ಕೆ ಒಳಗಾಗಬಾರದು, ವಿಶ್ವಾಸದಿಂದ ಪರೀಕ್ಷೆ ಬರೆಯಬೇಕು. ಆಯಾಯ ದಿನದ ಪಠ್ಯವನ್ನು ಅಂದೇ ಅಧ್ಯಯನ ಮಾಡುವಂತೆ ಜಿಲ್ಲಾಧಿಕಾರಿ ಅವರು ಸಲಹೆ ಮಾಡಿದರು.

ಜಿಲ್ಲಾ ಪಂಚಾಯತ್ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಮೂಕೊಂಡ ಪಿ.ಸುಬ್ರಮಣ್ಯ ಅವರು ಮಾತನಾಡಿ, ಕೊಡಗು ಜಿಲ್ಲೆ ಕ್ರೀಡೆ ಮತ್ತು ಸೈನ್ಯದಲ್ಲಿ ಖ್ಯಾತವಾಗಿದೆ. ಆದರೆ, ಎಸ್.ಎಸ್.ಎಲ್.ಸಿ ಫಲಿತಾಂಶದಲ್ಲಿ 9ನೇ ಸ್ಥಾನದಲ್ಲಿದ್ದೇವೆ. ಆತ್ಮಸ್ಥೈರ್ಯದಿಂದ ಪರೀಕ್ಷೆಯನ್ನು ಬರೆದು ಪ್ರಥಮ 5 ಸ್ಥಾನಗಳ ಪೈಕಿ ಕೊಡಗು ಪಡೆಯುವಂತಾಗಲು ಶ್ರಮಿಸಬೇಕಿದೆ ಎಂದರು.

ಒತ್ತಡ ದಿಂದ ಓದಬೇಡಿ, ಮನಸಿಟ್ಟು ಓದಿ. ಭರವಸೆಯೊಂದೇ ನಿಮ್ಮ ಬದುಕು. ವಿದ್ಯಾಭ್ಯಾಸಕ್ಕೆ ಕೊನೆಯಿಲ್ಲ. ಎಸ್.ಎಸ್.ಎಲ್.ಸಿ ಮುಗಿದ ಮೇಲೆ ಸಂದರ್ಶನ ಬಹಳ ಮುಖ್ಯ ಎಂದೂ ಪಿ.ಸುಬ್ರಮಣಿ ತಿಳಿಸಿದರು. ರೋಟರಿ ಜಿಲ್ಲಾ ಗವರ್ನರ್ ಮಹೇಶ ನಲ್ವಾಡೆ ಮಾತನಾಡಿ, ಎಸ್.ಎಸ್.ಎಲ್.ಸಿಯ ನಂತರ ಯಾವ ವಿಷಯದಲ್ಲಿ ಶಿಕ್ಷಣ ಮುಂದುವರೆಸಬೇಕು ಎಂಬದು ಈಗಿನಿಂದಲೇ ಮನಸಿನಲ್ಲಿರಬೇಕು. ಶೈಕ್ಷಣಿಕ ಸಾಧನೆಗೆ ದೊರಕಿರುವ ಅವಕಾಶವನ್ನು ಸದುಪಯೋಗ ಪಡೆದುಕೊಂಡು ಕೊಡಗಿಗೆ ಎಸ್.ಎಸ್.ಎಲ್.ಸಿ.ಯಲ್ಲಿ ಪ್ರಥಮ ಸ್ಥಾನ ಪಡೆಯಲು ಶ್ರಮಿಸಿ ಎಂದರು.

ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕಿ ಎಚ್.ಜಿ.ಭಾಗ್ಯ ಅವರು ಮಾತನಾಡಿ, ಎಸ್.ಎಸ್.ಎಲ್.ಸಿ ಪರೀಕ್ಷೆಗೆ ವಿದ್ಯಾರ್ಥಿಗಳು ಶ್ರಮವಹಿಸಿ ಓದಿ ಅತ್ಯುತ್ತಮ ಶ್ರೇಣಿಯಲ್ಲಿ ಅಂಕಗಳಿಸಿ ಶಾಲೆಗೆ ಮತ್ತು ಜಿಲ್ಲೆಗೆ ಕೀರ್ತಿ ತಂದುಕೊಡಿ ಎಂದು ಕೋರಿದರು. ಸಮಯವನ್ನು ವ್ಯರ್ಥಮಾಡಬೇಡಿ ಗುರಿಯಿರಲಿ ಮತ್ತು ನಿಮ್ಮಲ್ಲಿ ಆತ್ಮವಿಶ್ವಾಸವಿರಲಿ ಹಾಗೆಯೇ ನಿಮ್ಮ ಜೀವನದ ಮಟ್ಟ ಬದಲಾಯಿಸಿಕೊಳ್ಳಿ ಎಂದು ಅವರು ಕರೆ ನೀಡಿದರು.

ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಅನಿಲ್ ಎಚ್.ಟಿ. ಮಾತನಾಡಿ, ಎಸ್.ಎಸ್.ಎಲ್. ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಎದುರಿಸುವ ಸಂಬಂಧಿತ ಸೂಕ್ತ ಮಾರ್ಗದರ್ಶನ ನೀಡುವ ನಿಟ್ಟಿನಲ್ಲಿ ಮಿಸ್ಟಿ ಹಿಲ್ಸ್ ಈ ಕಾರ್ಯಾಗಾರ ಆಯೋಜಿಸಿದ್ದು, ಇದರಿಂದಾಗಿ ಉತ್ತಮ ಫಲಿತಾಂಶವನ್ನು ನಿರೀಕ್ಷಿಸಬಹು ದಾಗಿದೆ ಎಂದು ಭರವಸೆ ವ್ಯಕ್ತಪಡಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್. ಗಾಯತ್ರಿ ಮಾತನಾಡಿ, ಶೇ.78 ರ ಫಲಿತಾಂಶ ಹೆಚ್ಚಿಸುವ ಉದ್ದೇಶದಿಂದ ಸಂಪನ್ಮೂಲ ವ್ಯಕ್ತಿಗಳ ಮೂಲಕ ಎಸ್.ಎಸ್.ಎಲ್.ಸಿ ಫಲಿತಾಂಶ ಹೆಚ್ಚಿಸುವ ಉದ್ದೇಶ ಹೊಂದಲಾಗಿದ್ದು ಕಾರ್ಯಾಗಾರದಲ್ಲಿ 1200 ಕ್ಕೂ ಅಧಿಕ ವಿದ್ಯಾರ್ಥಿಗಳು ಶಿಕ್ಷಕರೊಂದಿಗೆ ಪಾಲ್ಗೊಂಡಿದ್ದಾಗಿ ಮಾಹಿತಿ ನೀಡಿದರು. ರೋಟರಿ ಜೋನಲ್ ಲೆಫ್ಟಿನೆಂಟ್ ಅಂಬೆಕಲ್ ವಿನೋದ್ ಕುಶಾಲಪ್ಪ, ಸಂತ ಜೊಸೇಫರ ಕಾನ್ವೆಂಟ್ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ರೋಜಾ, ಮಿಸ್ಟಿ ಹಿಲ್ಸ್ ಸ್ಥಾಪಕಾಧ್ಯಕ್ಷ ಬಿ.ಜಿ.ಅನಂತಶಯನ, ಮೈಸೂರಿನ ಖ್ಯಾತ ವ್ಯಕ್ತಿತ್ವ ವಿಕಸನ ತರಬೇತುದಾರ ಚೇತನ್ ರಾಮ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಮಿಸ್ಟಿ ಹಿಲ್ಸ್ ಕಾರ್ಯದರ್ಶಿ ಪಿ.ಎಂ.ಸಂದೀಪ್ ವಂದಿಸಿ, ಉಪನ್ಯಾಸಕಿ ಕೆ.ಜಯಲಕ್ಷ್ಮಿ ನಿರೂಪಿಸಿದರು.