ಕುಶಾಲನಗರ, ಜ. 6: ಕುಶಾಲನಗರವನ್ನು ಕೇಂದ್ರವಾಗಿಸಿ ಕೊಂಡು ಕಾವೇರಿ ತಾಲೂಕು ರಚಿಸಬೇಕೆಂದು ಸರಕಾರಕ್ಕೆ ಆಗ್ರಹಿಸಿ ಕುಶಾಲನಗರದಲ್ಲಿ ನಡೆಯುತ್ತಿರುವ ಅಮರಣಾಂತ ಉಪವಾಸ ಸತ್ಯಾಗ್ರಹ 6 ದಿನಗಳನ್ನು ಪೂರೈಸಿದೆ.
ನಿರಶನ ನಿರತ ವಿ.ಪಿ.ಶಶಿಧರ್, ಕೆ.ಎಸ್.ರಾಜಶೇಖರ್ ಅವರೊಂದಿಗೆ ಕೇಂದ್ರ ಸಮಿತಿ ಪ್ರಮುಖರಾದ ಎನ್.ಕೆ.ಮೋಹನ್‍ಕುಮಾರ್, ತಮ್ಮಯ್ಯ ಮತ್ತು ಕರೀಂ ಅವರುಗಳು ಸತ್ಯಾಗ್ರಹಕ್ಕೆ ಕೈಜೋಡಿಸಿದ್ದಾರೆ.
ಪ್ರತಿಭಟನೆಗೆ ಸ್ಥಳೀಯ ಶಾಲಾ, ಕಾಲೇಜು ವಿದ್ಯಾರ್ಥಿಗಳು ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ. ನೂರಾರು ಸಂಖ್ಯೆಯಲ್ಲಿ ಸತ್ಯಾಗ್ರಹ ವೇದಿಕೆ ಬಳಿ ಜಮಾಯಿಸಿದ ವಿದ್ಯಾರ್ಥಿಗಳು ತಾಲೂಕು ರಚನೆಗೆ ಆಗ್ರಹಿಸಿ ಘೋಷಣೆಗಳನ್ನು ಕೂಗಿದರು. ಪಟ್ಟಣದ ಪ್ರಮುಖ ಬೀದಿಯಲ್ಲಿ ಮೆರವಣಿಗೆಯಲ್ಲಿ ಸಾಗಿ, ಪಟ್ಟಣದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ ಮಾನವ ಸರಪಳಿ ರಚಿಸಿ ಕೆಲಕಾಲ ರಸ್ತೆ ತಡೆ ನಡೆಸಿದರು.
ಈ ಸಂದರ್ಭ ಮಾತನಾಡಿದ ಸಮಿತಿಯ ಎನ್.ಕೆ. ಮೋಹನ್‍ಕುಮಾರ್, ಕಳೆದ 2 ದಶಕಗಳಿಂದ ಕಾವೇರಿ ತಾಲೂಕಿಗಾಗಿ ಹೋರಾಟ ನಡೆಸಿಕೊಂಡು ಬರುತ್ತಿದ್ದೇವೆ. ರಾಜ್ಯದಲ್ಲೇ ಕೊಡಗು ಪುಟ್ಟ ಜಿಲ್ಲೆ ಎಂಬ ಧೋರಣೆಯನ್ನು ಸರಕಾರ ಕೈಬಿಟ್ಟು ನಮ್ಮ ಬೇಡಿಕೆಗೆ ಮನ್ನಣೆ ನೀಡಬೇಕಿದೆ. ಮುಖ್ಯಮಂತ್ರಿ ಗಳು ಜಿಲ್ಲೆಗೆ ಭೇಟಿ ನೀಡುವ ಕಾರ್ಯಕ್ರಮದ ಸಂದರ್ಭದಲ್ಲಿ ಕಾವೇರಿ ತಾಲೂಕು ರಚನೆ ಬಗ್ಗೆ ಸ್ಪಷ್ಟ ಚಿತ್ರಣ ನೀಡಿ ಈ ಭಾಗದ ಜನರ ಬೇಡಿಕೆಯನ್ನು ಈಡೇರಿಸಬೇಕು ಎಂದು ಅಗ್ರಹಿಸಿದರು.
ವಿದ್ಯಾರ್ಥಿ ಮುಖಂಡ ಹೆಚ್.ಇ ದರ್ಶನ್, ಕೆ.ಎನ್. ದೇವರಾಜು ಸೇರಿದಂತೆ ಸಮಿತಿಯ ಪ್ರಮುಖರು ಈ ಸಂದರ್ಭ ಇದ್ದರು.