ಮಡಿಕೇರಿ, ಜ. 4: ಮದ್ಯ ಬಳಕೆ ವಿಚಾರದಲ್ಲಿ ಕೊಡಗು ಜಿಲ್ಲೆ ರಾಜ್ಯದ ಇತರೆಡೆಗಳಿಗಿಂತ ವಿಭಿನ್ನ. ಇಲ್ಲಿನ ಸಂಸ್ಕøತಿಯ ಒಂದು ಭಾಗವಾಗಿಯೂ ಕೊಡಗಿನಲ್ಲಿ ಮದ್ಯ ಬಳಕೆ ಬೆಸೆದುಕೊಂಡಿದೆ. ಪ್ರಸಕ್ತ ವರ್ಷ ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿ ಒತ್ತಿನ 500 ಮೀಟರ್ ಹಾಗೂ 220 ಮೀಟರ್ ಅಂತರದಲ್ಲಿ ಬರುವ ಮದ್ಯದಂಗಡಿ ಬಾರ್‍ಗಳನ್ನು ಸ್ಥಳಾಂತರಿಸಬೇಕೆಂದು ಸುಪ್ರೀಂ ಕೋರ್ಟ್ ನೀಡಿದ ಆದೇಶ ಕಟ್ಟುನಿಟ್ಟಾಗಿ ಜಾರಿಯಾದ ಪರಿಣಾಮ ಸುಮಾರು ಮೂರು ತಿಂಗಳು ಮದ್ಯ ವಹಿವಾಟುದಾರರು ಸಾಕಷ್ಟು ಸಮಸ್ಯೆ ಎದುರಿಸುವಂತಾಗಿತ್ತಲ್ಲದೆ, ಈ ಅವಧಿಯಲ್ಲಿ ಜಿಲ್ಲೆಯಲ್ಲಿ ಶೇ. 70ರಷ್ಟು ಮದ್ಯದಂಗಡಿ ಬಾರ್‍ಗಳು ಅನಿವಾರ್ಯವಾಗಿ ಮುಚ್ಚಲ್ಪಡಬೇಕಾಯಿತು. ಈ ಹಿನ್ನೆಲೆಯಲ್ಲಿ ಪ್ರಸಕ್ತ ವರ್ಷ ಮದ್ಯ ಮಾರಾಟ ಪ್ರಮಾಣ ಜಿಲ್ಲೆಯಲ್ಲಿ ಸ್ವಲ್ಪ ಮಟ್ಟಿಗೆ ಕುಸಿತವಾಗಲಿದೆ ಎಂಬ ಊಹೆ ಇತ್ತು. ಆದರೆ ಮದ್ಯ ಮಾರಾಟದಲ್ಲಿ ಅಡೆ ತಡೆಗಳ ನಡುವೆಯೂ ಯಾವದೇ ಕುಸಿತ ಕಂಡು ಬಂದಿಲ್ಲ. ಸರಕಾರ ಹಾಗೂ ಇಲಾಖೆಯ ನಿರೀಕ್ಷೆಗೆ ತಕ್ಕಂತೆ ಗುರಿ ಸಾಧನೆಯಾಗುತ್ತಿದೆ. ಮೂರು ತಿಂಗಳು (ಜುಲೈ, ಆಗಸ್ಟ್, ಸೆಪ್ಟಂಬರ್) ತನಕ ಹಲವಾರು ಮದ್ಯದಂಗಡಿ, ಬಾರ್‍ಗಳು ಮುಚ್ಚಿದ್ದರೂ, ನೀಡಿದ್ದ ಗುರಿಯಲ್ಲಿ ಗಮನಾರ್ಹ ಸಾಧನೆಯಾಗಿದೆ. ಅಂಕಿ ಅಂಶಗಳನ್ನು ಗಮನಿಸಿದರೆ ಇತ್ತೀಚೆಗೆ ವಿಧಾನಸಭಾ ಅಧಿವೇಶನದಲ್ಲಿ ರಾಜ್ಯದಲ್ಲಿ ಮದ್ಯ ನಿಷೇಧ ಖಡಾ ಖಂಡಿತವಾಗಿ ಸಾಧ್ಯವಿಲ್ಲ ಎಂಬದಾಗಿ ಸಿ.ಎಂ. ಸಿದ್ಧರಾಮಯ್ಯ ಅವರು ಹೇಳಿದ್ದ ಮಾತನ್ನು ಪುಷ್ಟೀಕರಿಸುವಂತಿದೆ.
(ಮೊದಲ ಪುಟದಿಂದ) ಮದ್ಯ ಪ್ರಿಯರು ಹೆಚ್ಚಿರುವ ಜಿಲ್ಲೆಯಲ್ಲಿ ಬಹುತೇಕ ಸಭೆ ಸಮಾರಂಭ, ಹಿರಿಯರ ಸ್ಮರಣೆಯಂತಹ ಕಾರ್ಯಗಳಲ್ಲಿ ಮದ್ಯ ಬಳಕೆ ಸರ್ವೇ ಸಾಮಾನ್ಯ. ಇದರೊಂದಿಗೆ ಲಂಗುಲಗಾಮಿಲ್ಲದಂತೆ ಪ್ರವಾಸಿಗರ ದಂಡೂ ಇತ್ತೀಚಿನ ದಿನಗಳಲ್ಲಿ ಕೊಡಗಿಗೆ ಆಗಮಿಸುತ್ತಿರುವದರಿಂದ ಮದ್ಯ ಮಾರಾಟವು ಇಲಾಖೆಗೆ, ಸರಕಾರಕ್ಕೆ ಜಿಲ್ಲೆಯಿಂದ ಹೆಚ್ಚು ಆದಾಯ ಒದಗಿಸುತ್ತಿದೆ.
ಶೇ. 94ರಷ್ಟು ಗುರಿ ಸಾಧನೆ
ಪ್ರಸಕ್ತ ಸಾಲಿನಲ್ಲಿ 2017ರ ಏಪ್ರಿಲ್‍ನಿಂದ 2018ರ ಮಾರ್ಚ್ ತನಕ ಜಿಲ್ಲೆಯಲ್ಲಿ 10,98,812 ಬಾಕ್ಸ್‍ಗಳಷ್ಟು ಮದ್ಯ ಮಾರಾಟದ ಗುರಿ ನೀಡಲಾಗಿದೆ. ಇದರಲ್ಲಿ ಡಿಸೆಂಬರ್ ಅಂತ್ಯದವರೆಗೆ ಶೇ. 94ರಷ್ಟು ಗುರಿ ಸಾಧನೆಯಾಗಿರುವದು ಗಮನಾರ್ಹ ವಾಗಿದೆ. ಏಪ್ರಿಲ್‍ನಿಂದ ಡಿಸೆಂಬರ್ ತನಕ 7,89,364 ಬಾಕ್ಸ್ ಮದ್ಯ ಮಾರಾಟದ ಗುರಿಯಲ್ಲಿ ಡಿಸೆಂಬರ್ ಅಂತ್ಯಕ್ಕೆ 7,38,783 ಬಾಕ್ಸ್ ಮಾರಾಟವಾಗಿದ್ದು, ಶೇ. 94ರಷ್ಟು ಗುರಿ ತಲುಪಿದೆ.
ತಿಂಗಳುವಾರು ಮಾರಾಟ
ಮೇ ತಿಂಗಳಲ್ಲಿ ಒಟ್ಟು ಗುರಿಯಲ್ಲಿ ಶೇ. 76ರಷ್ಟು ಮಾತ್ರ ಮಾರಾಟ ವಾಗಿರುವದು ಹೊರತುಪಡಿಸಿದರೆ, ಇನ್ನಿತರ ಎಲ್ಲಾ ತಿಂಗಳಿನಲ್ಲಿ ಶೇ. 90ರಷ್ಟು ಅಥವಾ ಇದಕ್ಕಿಂತ ಹೆಚ್ಚು ಮಾರಾಟವಾಗಿದೆ. ಸಮಸ್ಯೆ ಇದ್ದ ಮೂರು ತಿಂಗಳಿನಲ್ಲಿಯೂ ಶೇ. 90ರಷ್ಟು ಸಾಧನೆಯಾಗಿರುವದು ವಿಶೇಷವಾಗಿದೆ.
ಮೇ ತಿಂಗಳಿನಲ್ಲಿ 98,245 ಬಾಕ್ಸ್‍ನ ಗುರಿಯಲ್ಲಿ 94,470 ಬಾಕ್ಸ್ ಮಾರಾಟವಾಗಿದ್ದು, ಶೇ. 76ರಷ್ಟು ಸಾಧನೆಯಾಗಿದ್ದರೆ, 95,807 ಬಾಕ್ಸ್ ಪೈಕಿ 86,090 ಬಾಕ್ಸ್ ಮಾರಾಟ ವಾಗಿದ್ದು, ಶೇ. 90ರಷ್ಟು ಗುರಿ ತಲುಪಲಾಗಿದೆ.
ಕಳೆದ ಬಾರಿ ಶೇ. 85ರಷ್ಟು ಸಾಧನೆ
ಕಳೆದ ಸಾಲಿನಲ್ಲಿ ಜಿಲ್ಲೆಯಲ್ಲಿ ಏಪ್ರಿಲ್‍ನಿಂದ ಮಾರ್ಚ್ ತನಕ 12,32,438 ಬಾಕ್ಸ್ ಮದ್ಯ ಮಾರಾಟದ ಗುರಿ ನೀಡಲಾಗಿತ್ತು. ಇದರಲ್ಲಿ 10,38,302 ಬಾಕ್ಸ್ ಮದ್ಯ ಮಾರಾಟವಾಗಿದ್ದು, ಶೇ. 84ರಷ್ಟು ಸಾಧನೆಯಾಗಿದೆ. ಡಿಸೆಂಬರ್ ಅಂತ್ಯಕ್ಕೆ 7,52,678 ಬಾಕ್ಸ್ ಮದ್ಯ ಮಾರಾಟವಾಗಿತ್ತು.
ಸುಪ್ರೀಂ ಕೋರ್ಟ್ ಆದೇಶ ಜಾರಿ ಬಳಿಕ
ಸುಪ್ರೀಂ ಕೋರ್ಟ್‍ನ ನಿರ್ದೇಶನ ಜುಲೈ ಒಂದರಿಂದ ರಾಜ್ಯದಲ್ಲಿ ಜಾರಿಯಾಗಿತ್ತು. ಇದಾದ ನಂತರದ ಕೆಲವು ತಿಂಗಳು ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿ ಬದಿಯ ಹಲವಷ್ಟು ಸನ್ನದುಗಳು ಸಕಾಲದಲ್ಲಿ ಸ್ಥಳಾಂತರಕ್ಕೆ ಅವಕಾಶವಾಗದೆ ಮುಚ್ಚಲ್ಪಟ್ಟಿದ್ದವು. ಆದರೂ ಮದ್ಯ ಪ್ರಿಯರು ನಶೆ ಏರಿಸುವದರಲ್ಲಿ ಹಿಂದೆ ಬಿದ್ದಿರಲಿಲ್ಲ. ಪಾನೀಯದ ಅಂಗಡಿ ದೂರ ಹೋದರೂ ಪಾನೀಯದ ಹಿಂದೆ ತೆರಳಿದ ಮದ್ಯಸಕ್ತರು ಇಲಾಖೆಗೆ ನಿರೀಕ್ಷಿತ ಆದಾಯವನ್ನು ತಂದು ಕೊಟ್ಟಿರುವದು ಕೊಡಗಿನಲ್ಲಿ ಮದ್ಯದ ವಿಶೇಷತೆ.