ಮಡಿಕೇರಿ, ಜ. 4: ರಾಜ್ಯದಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಸಿ ಇಡೀ ದೇಶದ ಗಮನ ಸೆಳೆದಿದ್ದ ಕೊಡಗು ಮೂಲದ ಡಿ.ವೈ.ಎಸ್.ಪಿ. ಗಣಪತಿ ಅವರು ಮಡಿಕೇರಿಯಲ್ಲಿ ಸಾವಿಗೀಡಾಗಿದ್ದ ಪ್ರಕರಣ ತನಿಖೆ ಇನ್ನೂ ಜೀವಂತವಾಗಿದೆ. ಸಿ.ಓ.ಡಿ. ತನಿಖೆ ಮ್ಯಾಜಿಸ್ಟ್ರೇಟ್ ತನಿಖೆ, ಬಿ. ಶೀಟ್ ಸಲ್ಲಿಕೆ ಬಳಿಕ ಇದನ್ನು ಒಪ್ಪದೆ ಸಿಬಿಐ ತನಿಖೆಗೆ ಕೋರಿ ಮೃತ ಗಣಪತಿ ಅವರ ತಂದೆ ಕುಶಾಲಪ್ಪ ಹಾಗೂ ಸಹೋದರ ಎಂ.ಕೆ. ಮಾಚಯ್ಯ ಅವರು ನಡೆಸಿದ ಹೋರಾಟದ ಫಲವಾಗಿ ಸರ್ವೋಚ್ಚ ನ್ಯಾಯಾಲಯ ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿ ಮೂರು ತಿಂಗಳಿನಲ್ಲಿ ವರದಿ ಸಲ್ಲಿಸುವಂತೆ ಸೂಚಿಸಿತ್ತು. ಈ ಆದೇಶದ ಬಳಿಕ ಸಿಬಿಐ ಅಧಿಕಾರಿಗಳ ತಂಡ ಬಿರುಸಿನ ತನಿಖೆ ಕೈಗೆತ್ತಿಕೊಂಡು ಕೊಡಗು ಸೇರಿದಂತೆ ವಿವಿಧೆಡೆ ವಿಚಾರಣೆ ನಡೆಸಿತ್ತು. ಇದಾದ ಬಳಿಕ ಈ ಪ್ರಕರಣದ ತನಿಖೆಗೆ ಮೂರು ತಿಂಗಳ ಕಾಲಾವಕಾಶ ಸಾಲದು ಇನ್ನು ಆರು ತಿಂಗಳ ಕಾಲಾವಕಾಶಬೇಕೆಂದು ಸಿಬಿಐ ಸರ್ವೋಚ್ಚ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿತ್ತು. ಇದರ ವಿಚಾರಣೆ ಇಂದು ನಡೆದಿದ್ದು, ನ್ಯಾಯಾಲಯ ತನಿಖಾ ವರದಿ ಸಲ್ಲಿಸಲು ಆರು ತಿಂಗಳು ಕಾಲಾವಕಾಶ ನೀಡಿ ಸಿಬಿಐಗೆ ಅನುಮತಿ ನೀಡಿದೆ. ಎಂ.ಕೆ. ಮಾಚಯ್ಯ ಕುಟುಂಬದವರು ಮುಂದಿನ ಎರಡು ತಿಂಗಳು ಕಾಲಾವಕಾಶ ನೀಡುವಂತೆ ಮನವಿ ಮಾಡಿದ್ದರು, ಹೆಚ್ಚಿನ ತನಿಖೆಯ ಅಗತ್ಯವಿದೆ ಎಂಬ ಸಿಬಿಐ ಮನವಿಯನ್ನು ನ್ಯಾಯಾಲಯ ಪುರಸ್ಕರಿಸಿದೆ. ಈ ಹಿಂದೆ 2017ರ ಸೆಪ್ಟಂಬರ್ 5ರಂದು ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿದ ನ್ಯಾಯಾಲಯ ಮೂರು ತಿಂಗಳಲ್ಲಿ ವರದಿ ಸಲ್ಲಿಸುವಂತೆ ಸೂಚಿಸಿತ್ತು.

ನ್ಯಾಯಾಧೀಶರಾದ ಆದರ್ಶ ಕುಮಾರ್ ಗೋಯಲ್ ಹಾಗೂ ಉದಯ್ ಉಮೇಶ್ ಲಲಿತ್ ಅವರನ್ನೊಳಗೊಂಡ ಪೀಠ ಇಂದು ವಿಚಾರಣೆ ನಡೆಸಿ ಆದೇಶ ನೀಡಿದೆ.