ಮಡಿಕೇರಿ, ಜ. 4: ಕೊಡಗು ಮತ್ತು ದಕ್ಷಿಣ ಕನ್ನಡ ಗೌಡ ಸಮಾಜದ ಬೆಂಗಳೂರು ಯುವ ಘಟಕದ ವತಿಯಿಂದ ಇತ್ತೀಚೆಗೆ ಕ್ರಿಕೆಟ್ ಪಂದ್ಯಾವಳಿ ಬೆಂಗಳೂರಿನ ಜಾಲಹಳ್ಳಿಯಲ್ಲಿರುವ ಹೆಚ್.ಎಂ.ಟಿ ಕ್ರೀಡಾಂಗಣದಲ್ಲಿ ನಡೆಯಿತು. ಕೊಡಗು ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ಸುಮಾರು 20 ತಂಡಗಳು ಪಾಲ್ಗೊಂಡಿದ್ದವು.

ಅಂತಿಮ ಪಂದ್ಯದಲ್ಲಿ ಕುಶಾಲನಗರ ಗೌಡ ಸಮಾಜ ಉಜಿರೆಯ ಸ್ಟ್ರೈಕ್ ಫೈಟರ್ಸ್ ತಂಡವನ್ನು ಸೋಲಿಸಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ಪ್ರಥಮ ತಂಡಕ್ಕೆ ರೂ. 15,000 ಹಾಗೂ ದ್ವಿತೀಯ ತಂಡಕ್ಕೆ ರೂ. 10,000 ನಗದು ಮತ್ತು ಟ್ರೊಫಿ ವಿತರಿಸಲಾಯಿತು.

ಸಮಾಜದ ಕಾರ್ಯಕಾರಿ ಮಂಡಳಿ ಸದಸ್ಯರುಗಳಾದ ಅಡ್ಕಾರ್ ಹೂವಪ್ಪ ಗೌಡ, ಕಾನಡ್ಕ ಗಂಗಾಧರ ಗೌಡ, ಕಲ್ಲುಮುಟ್ಲು ನಾಗೇಶ್, ಕುಂಬಗೌಡನ ಸೋಮಣ್ಣ, ಕೆದಂಬಾಡಿ ರಾಜೇಶ್ ಪ್ರಶಸ್ತಿ ವಿತರಿಸಿದರು.

ಈ ಸಂದರ್ಭ ಸಮಾಜದ ಅಧ್ಯಕ್ಷ ತೇನನ ರಾಜೇಶ್, ಗೌರವ ಕಾರ್ಯದರ್ಶಿ ಪಾಣತ್ತಲೆ ಪಳಂಗಪ್ಪ, ಮೊಟ್ಟೆರ ಪೂರ್ಣಿಮಾ ಮುಂತಾದ ಹಿರಿಯರು ಭಾಗವಹಿಸಿ, ಯುವ ಘಟಕದ ಅಚ್ಚುಕಟ್ಟಾದ ವ್ಯವಸ್ಥೆಯನ್ನು ಶ್ಲಾಘಿಸಿದರು.