ಸೋಮವಾರಪೇಟೆ, ಜ. 4: ಕರ್ನಾಟಕ ಲೋಕೋಪಯೋಗಿ ಇಲಾಖೆ ಮೂಲಕ ಕಿ.ಮೀ.ಗೆ ಒಂದು ಕೋಟಿಯಂತೆ ರೂ. 18.88 ಕೋಟಿ ವೆಚ್ಚದಲ್ಲಿ ಪ್ರಗತಿಯಲ್ಲಿರುವ ಕೋವರ್‍ಕೊಲ್ಲಿ-ಕೂಡಿಗೆ ರಸ್ತೆ ಕಾಮಗಾರಿ ಅಂದಾಜು ಪಟ್ಟಿಯಂತೆ ನಡೆಯುತ್ತಿಲ್ಲ ಎಂದು ಸಾರ್ವಜನಿ ಕರು ಆರೋಪಿಸಿದ್ದಾರೆ. ಗುಣಮಟ್ಟ ವನ್ನು ಕಾಯ್ದು ಕೊಳ್ಳಬೇಕಾದ ಇಲಾಖೆಯ ಇಂಜಿನಿಯರ್‍ಗಳು ನಿರ್ಲಕ್ಷ್ಯ ಧೋರಣೆ ತಾಳಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬೇಳೂರು ಶಾಲೆಯ ಬಳಿ ಅಂದಾಜು ಪಟ್ಟಿಯಂತೆ ಕಾಮಗಾರಿ ನಿರ್ವಹಿಸುತ್ತಿಲ್ಲ ಎಂದು ಆರೋಪಿಸಿ ಮಾಹಿತಿ ಹಕ್ಕು ಕಾರ್ಯಕರ್ತ ಬಗ್ಗನ ಅನಿಲ್‍ಕುಮಾರ್, ಸಾರ್ವಜನಿಕರಾದ ಬಗ್ಗನ ಹರೀಶ್, ಬೇಳೂರು ಕೃಷ್ಣ, ದೊಡ್ಡಮಳ್ತೆ ರಾಶಿತ್ ಸೇರಿದಂತೆ ಇತರರು ಕಾಮಗಾರಿಯ ಬಗ್ಗೆ ಆಕ್ಷೇಪಿಸಿದ್ದಾರೆ.

ರಸ್ತೆ ಕೆಲಸ ನಿರ್ವಹಿಸುವ ಸಂದರ್ಭ ಸಂಬಂಧಪಟ್ಟ ಅಭಿಯಂತರರು ಸ್ಥಳದಲ್ಲೇ ಇದ್ದು ಗುಣಮಟ್ಟದ ಬಗ್ಗೆ ಪರಿಶೀಲಿಸ ಬೇಕಿದ್ದರೂ ನಿರ್ಲಕ್ಷ್ಯ ಧೋರಣೆ ಹೊಂದಿರುವ ಇಂಜಿನಿಯರ್‍ಗಳು ಯಾರೊಬ್ಬರೂ ಸ್ಥಳದಲ್ಲಿ ಇಲ್ಲದಿರುವ ಬಗ್ಗೆ ಅಸಮಾಧಾನಗೊಂಡಿದ್ದಾರೆ.

ಮಿಕ್ಸಿಂಗ್ ಪ್ಲಾಂಟ್‍ನಲ್ಲಿ ಗುಣಮಟ್ಟವನ್ನು ಪರಿಶೀಲಿಸಿ ನಂತರ ಲಾರಿಗಳಲ್ಲಿ ಕಳುಹಿಸಿಕೊಡಬೇಕು. ಆದರೆ ಮಿಕ್ಸಿಂಗ್ ಪ್ಲಾಂಟ್‍ನಲ್ಲಿ ಅಂದಾಜು ಪಟ್ಟಿಯಲ್ಲಿರುವಂತೆ ಡಾಂಬರು ಮತ್ತು ಜಲ್ಲಿಯ ಗುಣಮಟ್ಟವನ್ನು ಪರಿಶೀಲಿಸುತ್ತಿಲ್ಲ. ಅಲ್ಲಿಂದ ನೇರವಾಗಿ ತಂದು ರಸ್ತೆಗೆ ಸುರಿಯಲಾಗುತ್ತಿದೆ. ಕಾಮಗಾರಿ ನಡೆಯುವ ಸ್ಥಳದಲ್ಲಿ ಗುಣಮಟ್ಟ ಪರಿಶೀಲಿಸಲು ಪಿಎಂಸಿ ಅಭಿಯಂತರರು ಇರಬೇಕು. ಆದರೆ ಯಾರೊಬ್ಬರೂ ಸ್ಥಳದಲ್ಲಿಲ್ಲ ಎಂದು ಅನಿಲ್ ಕುಮಾರ್ ಮಾಧ್ಯಮ ದವರೊಂದಿಗೆ ಆರೋಪಿಸಿದರು.

ರಸ್ತೆ ಕಾಮಗಾರಿಗೆ ಅನುದಾನ ಬಿಡುಗಡೆ ಮಾಡುವ ಸಂದರ್ಭವೇ ರಸ್ತೆಯ ಗುಣಮಟ್ಟವನ್ನು ಪರಿಶೀಲಿಸಲು ಮೈಸೂರಿನ ರೋಡ್ ಡಿಸೈನರ್ ಎಂಬ ಕಂಪೆನಿಗೆ (ಪಿಎಂಸಿ ಅವರಿಗೆ) ಕಾಮಗಾರಿಯ ಅನುದಾನದಲ್ಲಿ ಶೇ. 2.5 ರಷ್ಟು ಹಣವನ್ನು ನೀಡಲಾಗುತ್ತದೆ. ಆದರೆ ಪಿಎಂಸಿ ಅಭಿಯಂತರರು ಜವಾಬ್ದಾರಿ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ತೋರಿದ್ದು, ಗುಣಮಟ್ಟವನ್ನು ಪರಿಶೀಲಿಸುತ್ತಿಲ್ಲ. ಇದರಿಂದಾಗಿ ಕಿ.ಮೀ.ಗೆ 1 ಕೋಟಿ ಅನುದಾನ ಸರ್ಕಾರ ನೀಡಿದ್ದರೂ ನ್ಯಾಯಯುತವಾಗಿ ಬಳಕೆಯಾಗುತ್ತಿಲ್ಲ ಎಂದು ದೊಡ್ಡಮಳ್ತೆಯ ರಾಶಿತ್ ಅಸಮಾಧಾನ ಹೊರಹಾಕಿದರು. ಕಾಮಗಾರಿಯ ಗುತ್ತಿಗೆದಾರ ಕಾಮಗಾರಿ ನಡೆಯುವ ಸಂದರ್ಭ ಒಮ್ಮೆಯೂ ಇತ್ತ ತಲೆಹಾಕಿಲ್ಲ.

ಇದರೊಂದಿಗೆ ಸ್ಥಳದಲ್ಲಿಯೇ ಗ್ರೇಡಿಯೇಷನ್, ಕಾಂಪ್ಯಾಕ್ಷನ್, ಎಮೆಕ್ಷನ್ ಪರೀಕ್ಷಿಸುತ್ತಿಲ್ಲ. ಕ್ವಾಲಿಟಿ ಚೆಕ್ಕಿಂಗ್ ಲ್ಯಾಬ್ ಅಳವಡಿಸಿಲ್ಲ. 7 ಮೀಟರ್ ಡಾಂಬರು ರಸ್ತೆ, ಅದರ ಎರಡೂ ಬದಿಯಲ್ಲಿ 2.5 ಮೀಟರ್ ಶೋಲ್ಡರ್ಸ್, ನಂತರ ಚರಂಡಿ ನಿರ್ಮಿಸಬೇಕೆಂದು ಅಂದಾಜು ಪಟ್ಟಿ ಯಲ್ಲಿದ್ದರೂ ಸಹ ಇವುಗಳೆಲ್ಲವನ್ನೂ ಗಾಳಿಗೆ ತೂರಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಸರ್ಕಾರದ 18.88 ಕೋಟಿ ಹಣ ಸದುಪಯೋಗವಾಗುವ ಬದಲು ದುರುಪಯೋಗವಾಗುತ್ತಿದೆ ಎಂದು ಬಗ್ಗನ ಅನಿಲ್ ಮತ್ತು ಹರೀಶ್ ಅವರು ಆರೋಪಿಸಿದರು.

ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸಿ, ಮರಗಳನ್ನು ತೆರವು ಗೊಳಿಸಬೇಕೆಂಬ ಸೂಚನೆಯಿದ್ದರೂ ಅಭಿಯಂತರರು ಈ ಬಗ್ಗೆ ಯಾರೊಂದಿಗೂ ವ್ಯವಹರಿಸುವ ಗೋಜಿಗೆ ಹೋಗಿಲ್ಲ. ಇದರಿಂದಾಗಿ ಕಾಮಗಾರಿಯೂ ನಿರೀಕ್ಷಿತ ಅವಧಿ ಯಲ್ಲಿ ಮುಗಿದಿಲ್ಲ. ಸಾರ್ವಜನಿಕರೇ ರಸ್ತೆ ಕಾಮಗಾರಿಯನ್ನು ಪರಿಶೀಲಿಸುವ ದುಸ್ಥಿತಿ ತಲುಪಿದ್ದು, ತೋಟ ಮಾಲೀಕರೊಂದಿಗೆ ಮಾತನಾಡಿ ಮರಗಳನ್ನು ತೆರವುಗೊಳಿಸುವ ಪ್ರಯತ್ನ ನಡೆಸುತ್ತಿದ್ದೇವೆ ಎಂದು ದೊಡ್ಡಮಳ್ತೆ ರಾಶಿತ್ ದೂರಿದರು.

ಇಷ್ಟೆಲ್ಲಾ ಆರೋಪಗಳನ್ನು ಮಾಡುತ್ತಿದ್ದರೂ ಸಹ ಸ್ಥಳದಲ್ಲಿ ಪಿಎಂಸಿ ಅಭಿಯಂತರರಾಗಲಿ ಅಥವಾ ಲೋಕೋಪಯೋಗಿ ಇಲಾಖಾ ಅಭಿಯಂತರರಾಗಲಿ ಕಂಡುಬರಲಿಲ್ಲ. ನಂತರ ಮಾಧ್ಯಮದವರು ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಮಹೇಂದ್ರ ಅವರನ್ನು ಸಂಪರ್ಕಿಸಿ ಮಾಹಿತಿ ನೀಡಿದ ಹಿನ್ನೆಲೆ ಸ್ಥಳಕ್ಕೆ ಪಿಡಬ್ಲ್ಯೂಡಿ ಇಂಜಿನಿಯರ್ ವೆಂಕಟೇಶ್ ನಾಯಕ್ ಮತ್ತು ಸೆಕ್ಷನ್ ಇಂಜಿನಿಯರ್ ಪೀಟರ್ ಆಗಮಿಸಿದರು.

ಅಂದಾಜು ಪಟ್ಟಿಯಂತೆ ಕಾಮಗಾರಿ ನಡೆಯದ ಬಗ್ಗೆ ಸಾರ್ವಜನಿಕರು ಇಂಜಿನಿಯರ್‍ರನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಸರ್ಕಾರಿ ಹಣ ದುರುಪಯೋಗ ವಾಗಲು ನೀವುಗಳೇ ಕಾರಣ ರಾಗುತ್ತಿದ್ದೀರಿ. ಕಾಮಗಾರಿ ನಡೆಯುವ ಸಂದರ್ಭ ಸ್ಥಳದಲ್ಲಿರದೆ ಕಳಪೆ ಕಾಮಗಾರಿಗೆ ಅವಕಾಶ ನೀಡುತ್ತಿದ್ದೀರಿ ಎಂದು ಆಕ್ಷೇಪಿಸಿದರು.

ಇದೀಗ ತಂದಿರುವ ಬಿಟ್‍ಮಿನ್ ಮೆಕ್‍ಡೆಮ್‍ನ್ನು ಹಾಕಲಾಗುವದು. ನಾಳೆ ಮತ್ತೊಮ್ಮೆ 20 ಎಂ.ಎಂ. ಜಲ್ಲಿ ಹಾಕಿ ಅಂದಾಜು ಪಟ್ಟಿಯಂತೆ ಕೆಲಸ ಮಾಡಲು ಕ್ರಮ ವಹಿಸಲಾಗುವದು ಎಂದು ಅಭಿಯಂತರರು ಭರವಸೆ ನೀಡಿದರು.

ಈ ಬಗ್ಗೆ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯ ಪಾಲಕ ಅಭಿಯಂತರ ಮಹೇಂದ್ರ ಅವರು ಪತ್ರಕರ್ತರೊಂದಿಗೆ ಮಾತನಾಡಿ, ಸುಮಾರು 20 ಮೀಟರ್‍ನಷ್ಟು ಹಾಕಲಾಗಿದ್ದ ಡಾಂಬರ್ ಮೇಲೆ ಮತ್ತೊಮ್ಮೆ 20 ಎಂ.ಎಂ. ಜಲ್ಲಿ ಹಾಕಲಾಗುವದು. ಪ್ರತಿದಿನ ಅಭಿಯಂತರರು ಕಾಮಗಾರಿಯನ್ನು ಪರಿಶೀಲಿಸಲಿದ್ದು, ಗುಣಮಟ್ಟದ ಕಾಮಗಾರಿಗೆ ಆದ್ಯತೆ ನೀಡಲಾಗುವದು ಎಂದು ಪ್ರತಿಕ್ರಿಯಿಸಿದರು.

ಒಟ್ಟಾರೆ ಕಿ.ಮೀ.ಗೆ 1 ಕೋಟಿಯಂತೆ ಸರ್ಕಾರ ಅನುದಾನ ಒದಗಿಸಿದ್ದು, ನಿರೀಕ್ಷಿತ ಗುಣಮಟ್ಟ ಕಾಯ್ದುಕೊಳ್ಳುವಲ್ಲಿ ಲೋಕೋಪ ಯೋಗಿ ಇಲಾಖಾ ಅಭಿಯಂತರರು ವಿಫಲರಾಗುತ್ತಿರುವದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಕಾಮಗಾರಿ ಸಂದರ್ಭ ಇಂಜಿನಿಯರ್‍ಗಳಿಗಿಂತ ಕೆಲ ಸಾರ್ವಜನಿಕರೇ ಹೆಚ್ಚು ಮುತುವರ್ಜಿ ವಹಿಸುತ್ತಿದ್ದಾರೆ.