ವೀರಾಜಪೇಟೆ, ಜ. 4: ವೀರಾಜಪೇಟೆ ಪ.ಪಂ.ಯಲ್ಲಿ ಕಳೆದ 10 ವರ್ಷಗಳಿಂದ ನೈರ್ಮಲ್ಯ ವಿಭಾಗದಲ್ಲಿ ದುಡಿಯುತ್ತಿದ್ದ ಪುರುಷರು, ಮಹಿಳೆಯರು ಸೇರಿದಂತೆ 26 ಮಂದಿಗೆ ಜನವರಿ 1 ರಿಂದ ಅನ್ವಯವಾಗುವಂತೆ ಕೆಲಸದಿಂದ ವಜಾಗೊಳಿಸಲಾಗಿದೆ. ಇದರಿಂದ ಪೌರ ಕಾರ್ಮಿಕರು ಕೆಲಸವಿಲ್ಲದೆ ಅತಂತ್ರರಾಗಿದ್ದಾರೆ ಎಂದು ಪೌರ ಸೇವಾ ನೌಕರರ ಸಂಘದ ಅಧ್ಯಕ್ಷ ಎಚ್.ಕುಮಾರ್ ತಿಳಿಸಿದ್ದಾರೆ.
ವೀರಾಜಪೇಟೆಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕುಮಾರ್ ಅವರು ಈಗ ನಮ್ಮ ಕಾರ್ಮಿಕರ ಸೇವೆ ಇನ್ನು ಕೆಲವೇ ವರ್ಷಗಳಲ್ಲಿ ಖಾಯಂ ಆಗಬೇಕಿತ್ತು. ಆದರೆ 26 ಮಂದಿ ಕಾರ್ಮಿಕರನ್ನು ಕಾರಣವಿಲ್ಲದೆ ಸೇವೆಯಿಂದ ಕಿತ್ತು ಹಾಕಲಾಗಿದೆ. ಇದರಿಂದ ಕಾರ್ಮಿಕರು ಬೇರೆ ಕೆಲಸ ಮಾಡಲು ಸಾಧ್ಯವಿಲ್ಲದೆ ಸಂಕಷ್ಟವನ್ನು ಎದುರಿಸುವಂತಾಗಿದೆ. ಬೆಂಗಳೂರಿನ ಪೌರಾಡಳಿತ ನಿರ್ದೇಶನಾಲಯದ ಆದೇಶದಂತೆ 2011 ರ ಜನಗಣತಿ ಪ್ರಕಾರ ಪಟ್ಟಣದಲ್ಲಿ 17246 ಜನ ಸಂಖ್ಯೆ ಇದ್ದು ಈ ಪೈಕಿ ತಲಾ700 ಜನಸಂಖ್ಯೆಗೆ ಶುಚಿತ್ವಕ್ಕಾಗಿ ಒಬ್ಬ ಕಾರ್ಮಿಕರನ್ನು ನೇಮಕ ಮಾಡಬಹುದಾಗಿದೆ. ಇದರಂತೆ ಪಟ್ಟಣ ಪಂಚಾಯಿತಿ ಈಗ 26 ಮಂದಿಗೆ ಉದ್ಯೋಗ ನೀಡಿ ಉಳಿದವರಿಗೆ ಕೆಲಸವಿಲ್ಲದಂತೆ ಮಾಡಲಾಗಿದೆ. ನಿರಂತರವಾಗಿ ಖಾಯಂ ಉದ್ಯೋಗದಂತೆ ನಂಬಿಕೊಂಡವರಿಗೆ ಇದರಿಂದ ಅನ್ಯಾಯವಾಗಿದೆ. ಈಗ ಪಟ್ಟಣ ಪಂಚಾಯಿತಿ ಟೆಂಡರ್ ಮೂಲಕವು ಕಾರ್ಮಿಕರ ಉದ್ಯೋಗಕ್ಕೆ ಅವಕಾಶ ನೀಡಿದರೂ ಪಟ್ಟಣ ಪಂಚಾಯಿತಿಗೆ ಇನ್ನು ಕಾರ್ಮಿಕರ ಕೊರತೆ ಇದೆಯಾದರೂ ಈಗಿನ 26ಮಂದಿ ಅನುಭವಿ ಕಾರ್ಮಿಕರಿಗೆ ಕೆಲಸದಿಂದ ಕೊಕ್ ಕೊಟ್ಟಿರುವದನ್ನು ಕಾರ್ಮಿಕರು ನ್ಯಾಯ ಸಮ್ಮತವಾಗಿ ಪ್ರಶ್ನಿಸುವಂತಾಗಿದೆ ಎಂದರು.
ಪೌರ ಸೇವಾ ಸಮಿತಿ ಸಂಘಟನೆಯ ನಾಗೇಶ್ ಮಾತನಾಡಿ 26 ಮಂದಿ ಕಾರ್ಮಿಕರು ನಾಲ್ಕು ದಿನಗಳಿಂದ ಕೆಲಸವಿಲ್ಲದೆ ಅಲೆಯುವಂತಾಗಿದೆ. ಶುಚಿತ್ವಕ್ಕೆ ಆದ್ಯತೆ ನೀಡುವ ಕಾರ್ಮಿಕರ ಕುಟುಂಬ ಇದರಿಂದಾಗಿ ಉಪವಾಸ ಬೀಳುವಂತಾಗಿದೆ. ಸರಕಾರದ ಪೌರಾಡಳಿತ ನಿರ್ದೇಶನಾಲಯದ ಅಧಿಕಾರಿಗಳು, ಸಂಬಂಧ ಪಟ್ಟ ಸಚಿವರು, ಆಯುಕ್ತರು ಆದೇಶವನ್ನು ಪುನರ್ ಪರಿಶೀಲಿಸಿ ಪೌರ ಕಾರ್ಮಿಕರಿಗೆ ನ್ಯಾಯ ಒದಗಿಸಿ ಕೊಡಬೇಕೆಂದು ಆಗ್ರಹಿಸಿದ್ದಾರೆ.
ಈ ಸಂಬಂಧದಲ್ಲಿ ಕ್ಷೇತ್ರದ ಶಾಸಕರಿಗೂ ಮನವಿ ಸಲ್ಲಿಸಲಾಗಿದ್ದು ಕಾರ್ಮಿಕರಿಗೆ ನ್ಯಾಯ ದೊರಕುವವರೆಗೂ ಸರಕಾರದ ವಿರುದ್ಧ ಹೋರಾಟ ನಡೆಸಲು ರೂಪು ರೇಷೆಗಳನ್ನು ರೂಪಿಸಲಾಗುವದು ಎಂದು ಸಂಘಟನೆಯ ಚಂದ್ರು ಹಾಗೂ ಈಶ್ವರ್ ತಿಳಿಸಿದರು. ಗೋಷ್ಠಿಯಲ್ಲಿ ಮಾದೇವಿ, ನಾಗಮಣಿ, ಕವಿತಾ ಹಾಗೂ ರಾಧ ಉಪಸ್ಥಿತರಿದ್ದರು.