ಸುಂಟಿಕೊಪ್ಪ, ಜ. 3: ಸಾರ್ವಜನಿಕ ಶಿಕ್ಷಣ ಇಲಾಖೆ, ಸರ್ವ ಶಿಕ್ಷಣ ಅಭಿಯಾನ ಯೋಜನೆ ಹಾಗೂ ಸುಂಟಿಕೊಪ್ಪ ಕ್ಲಸ್ಟರ್ ಸಂಪನ್ಮೂಲ ಕೇಂದ್ರದ ವತಿಯಿಂದ ಇಲ್ಲಿನ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಹೋಬಳಿ ವ್ಯಾಪ್ತಿಯ ಸರ್ಕಾರಿ ಹಾಗೂ ಅನುದಾನಿತ ಪ್ರಾಥಮಿಕ ಶಾಲೆಯ ಎಸ್‍ಡಿಎಂಸಿ ಸದಸ್ಯರಿಗೆ ತರಬೇತಿ ಶಿಬಿರವನ್ನು ಇತ್ತೀಚೆಗೆ ನಡೆಸಲಾಯಿತು.
ತರಬೇತಿ ಶಿಬಿರದಲ್ಲಿ ಮಾತನಾಡಿದ ನೋಡಲ್ ಅಧಿಕಾರಿಯಾದ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಬಾಲಕೃಷ್ಣ ಅವರು, ಶಾಲೆಗಳ ಪೋಷಕ ಸಮಿತಿಯು ಶಾಲೆಯ ಸರ್ವಾಂಗೀಣ ಅಭಿವೃದ್ಧಿಗೆ ಸಹಕರಿಸಬೇಕು ಎಂದರು.
ಶಿಬಿರ ಉದ್ಘಾಟಿಸಿದ ಸರ್ಕಾರಿ ಪ್ರೌಢಶಾಲೆಯ ಇಕೋ ಕ್ಲಬ್ ಸಂಚಾಲಕ ಟಿ.ಜಿ. ಪ್ರೇಮ್ ಕುಮಾರ್ ಮಾತನಾಡಿ, ಶಾಲೆಗಳಲ್ಲಿ ಮಕ್ಕಳ ಕಲಿಕೆಗೆ ಪೂರಕವಾಗಿ ಹಸಿರು ವಾತಾವರಣದೊಂದಿಗೆ ಪರಿಸರ ಸ್ನೇಹಿ ಶಾಲೆಯಾಗಿ ರೂಪಿಸಲು ಎಲ್ಲರೂ ಶ್ರಮಿಸಬೇಕು ಎಂದರು.
ಸಿಆರ್‍ಪಿ ಪುರುಷೋತ್ತಮ್ ಪ್ರಾಸ್ತಾವಿಕವಾಗಿ ಮಾತನಾಡಿ, ಶಾಲೆಯ ಮೇಲುಸ್ತವಾರಿ ಸದಸ್ಯರು ಶಾಲೆಯ ಪ್ರಗತಿಗೆ ಸಹಕರಿಸುವಂತೆ ಮನವಿ ಮಾಡಿಕೊಂಡರು. ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಅಧ್ಯಕ್ಷ ಶೇಖರ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಶಿಕ್ಷಕಿ ಗೀತಾ ಮಾತನಾಡಿದರು.
ಸಂಪನ್ಮೂಲ ವ್ಯಕ್ತಿಗಳಾದ ಹೆಬ್ಬಾಲೆ ನಾಗರಾಜು ಮತ್ತು ಸತ್ಯನಾರಾಯಣ ಅವರು ಶಾಲೆಯ ಮೇಲುಸ್ತುವಾರಿ ಸಮಿತಿಯ ಕರ್ತವ್ಯಗಳು ಮತ್ತು ಜವಾಬ್ದಾರಿಗಳು ಹಾಗೂ ಮಕ್ಕಳ ಶೈಕ್ಷಣಿಕ ಪ್ರಗತಿಯಲ್ಲಿ ಸಮಿತಿ ಪಾತ್ರ ಕುರಿತು ತರಬೇತಿ ನೀಡಿದರು.
ಶಾಲೆಯ ಸರ್ವಾಂಗೀಣ ಪ್ರಗತಿಗೆ ಸಮುದಾಯದ ಸದ್ಬಳಕೆ ಬಗ್ಗೆ ತಿಳಿಸಲಾಯಿತು. ಶಿಕ್ಷಕಿ ಲತಾ ವಂದಿಸಿದರು.