ಮಡಿಕೇರಿ ಜ.3 : ಅಲ್ಪಸಂಖ್ಯಾತ ಕೊಡವ ಬುಡಕಟ್ಟು ಕುಲವನ್ನು ರಾಜ್ಯಾಂಗದ ಷೆಡ್ಯೂಲ್ ಪಟ್ಟಿಗೆ ಸೇರಿಸಲು ಪÀÇರಕವಾಗಿ ಆರಂಭಿಸಲಾಗಿದ್ದ ಕೊಡವ ಕುಲಶಾಸ್ತ್ರ ಅಧ್ಯಯನ ಕೆಲವರ ಷಡ್ಯಂತ್ರದಿಂದ ಸ್ಥಗಿತಗೊಂಡು ಒಂದು ವರ್ಷವೇ ಕಳೆದಿದ್ದು, ಇದಕ್ಕೆ ಮರುಚಾಲನೆ ನೀಡುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ತಮ್ಮ ಸಾಧನಾ ಸಮಾವೇಶಕ್ಕೆ ನೈಜ ಅರ್ಥ ಕಲ್ಪಿಸಬೇಕೆಂದು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ಅಧ್ಯಕ್ಷರಾದ ಎನ್.ಯು. ನಾಚಪ್ಪ ಒತ್ತಾಯಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಲಶಾಸ್ತ್ರ ಅಧ್ಯಯನವನ್ನು ಪುನರಾರಂಭಿಸದಿದ್ದಲ್ಲಿ ಕೊಡವರನ್ನು ಹೊರತು ಪಡಿಸಿ ಕರ್ನಾಟಕದ ಆಡಳಿತ ನಡೆಯುತ್ತಿದೆÀಯೆಂದು ವಿಷಾದ ವ್ಯಕ್ತಪಡಿಸಬೇಕಾಗುತ್ತದೆಂದು ತಿಳಿಸಿದರು. ಕೊಡವರ ಶಾಸನಬದ್ಧ ಹಕ್ಕೊತ್ತಾಯವನ್ನು ಸಿಎನ್‍ಸಿ ಮಂಡಿಸಿದಾಗ ಕೇಂದ್ರ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಕೊಡವರ ಸಮಗ್ರ ಕುಲಶಾಸ್ತ್ರ ಅಧ್ಯಯನ ನಡೆಸಿ ವರದಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಆದೇಶಿಸಿತ್ತು. ಇದಕ್ಕೆ ಸ್ಪಂದಿಸಿದ ರಾಜ್ಯ ಸಮಾಜ ಕಲ್ಯಾಣ ಇಲಾಖೆ, ಮೈಸೂರು ಬುಡಕಟ್ಟು ಅಧ್ಯಯನ ಸಂಸ್ಥೆ ಮೂಲಕ ಅಧ್ಯಯನ ನಡೆಸಲು 11 ಲಕ್ಷ ರೂ. ಅನುದಾನವನ್ನು ಬಿಡುಗಡೆ ಮಾಡಿತ್ತು. ಮೈಸೂರು ವಿಶ್ವ ವಿದ್ಯಾನಿಲಯದ ಸಂಶೋಧನಾ ವಿಭಾಗದ ವಿದ್ಯಾರ್ಥಿಗಳ ತಂಡದಿಂದ ಆರಂಭಗೊಂಡ ಅಧ್ಯಯನ ಒಂದು ತಿಂಗಳ ಕಾಲ ನಡೆಯಿತು. ಆದರೆ, 2016 ಡಿಸೆಂಬರ್ 18 ರಂದು ಮುಖ್ಯಮಂತ್ರಿಗಳಿಂದ ಬಂದ ಮೌಖಿಕ ಆದೇಶದಿಂದ ಅಧ್ಯಯನ ಸ್ಥಗಿತಗೊಂಡಿತು ಎಂದು ನಾಚಪ್ಪ ಬೇಸರ ವ್ಯಕ್ತಪಡಿಸಿದರು.

ಕೊಡವ ವಿರೋಧಿ ಪಟ್ಟಭದ್ರರು ಕರ್ನಾಟಕದ ಬಹುಸಂಖ್ಯಾತರು, ಎಡಪಂಥೀಯ ಬುದ್ಧಿಜೀವಿಗಳು, ಕೆಲವು ಕೊಡವ ದ್ರೋಹಿಗಳಿಂದಾಗಿ ಹಾಗೂ ಅಧ್ಯಯನಕ್ಕೆ ತಡೆಯಾಗಿ ಒಂದು ವರ್ಷವೇ ಕಳೆದಿದೆ. ಅಧ್ಯಯನವನ್ನು ಪುನರಾರಂಭಿಸು ವಂತೆ ಹಲವಾರು ಬಾರಿ ಮನವಿ ಮಾಡಿದ್ದರೂ ಮತ್ತು ಶಾಸನ ಸಭೆಯಲ್ಲಿ ಶಾಸಕ ಕೆ.ಜಿ. ಬೋಪಯ್ಯ ವಿಷಯ ಮಂಡಿಸಿದ್ದರು ಇಲ್ಲಿಯವರೆಗೆ ಯಾವದೇ ಸ್ಪಂದನೆ ದೊರಕಿಲ್ಲ. ಬಲಾಢ್ಯ ಸಮುದಾಯ ಲಿಂಗಾಯಿತರಿಗೆ ಧಾರ್ಮಿಕ ಅಲ್ಪಸಂಖ್ಯಾತರ ಸ್ಥಾನಮಾನ ಕಲ್ಪಿಸುವ ತರಾತುರಿಯಲ್ಲಿರುವ ಮುಖ್ಯಮಂತ್ರಿಗಳು ಅತೀ ಸೂಕ್ಷ್ಮ ಮತ್ತು ಅಲ್ಪಸಂಖ್ಯಾತ ಜನಾಂಗವಾಗಿರುವ ಕೊಡವ ಬುಡಕಟ್ಟು ಕುಲಕ್ಕೆ ರಾಜ್ಯಾಂಗ ಖಾತರಿ ನೀಡಲು ನಿರಾಕರಿಸಿರುವದು ಅತ್ಯಂತ ನೋವಿನ ವಿಚಾರ ಮಾತ್ರವಲ್ಲದೆ, ಮಾನವೀಯ ಹಕ್ಕಿನ ಉಲ್ಲಂಘನೆಯಾಗಿದೆಯೆಂದರು..

ತಾ.9 ರಂದು ಮುಖ್ಯಮಂತ್ರಿಗಳು ಕೊಡಗಿನಲ್ಲಿ ಸಾಧನಾ ಸಮಾವೇಶ ನಡೆಸುತ್ತಿದ್ದು, ಇದು ಕೊಡವರ ಹಕ್ಕನ್ನು ಹತ್ತಿಕ್ಕಿದ ಸಂಭ್ರಮಾಚರಣೆಯ ಸಾಧನಾ ಸಮಾವೇಶವೆ ಎಂದು ಮುಖ್ಯಮಂತ್ರಿ ಗಳು ಸ್ಪಷ್ಟಪಡಿಸಬೇಕೆಂದು ನಾಚಪ್ಪ ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಪುಲ್ಲೇರ ಕಾಳಪ್ಪ, ಮಂದಪಂಡ ಮನೋಜ್, ಕೂಪದಿರ ಸಾಬು ಹಾಗೂ ಚೆಂಬಾಂಡ ಜನತ್ ಕುಮಾರ್ ಉಪಸ್ಥಿತರಿದ್ದರು.