ಮಡಿಕೇರಿ, ಜ. 3: ವಿಜಯಪುರ ಜಿಲ್ಲೆಯಲ್ಲಿ ನಡೆದ ಬಾಲಕಿ ದಾನಮ್ಮ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿಗಳನ್ನು ಬಂಧಿಸಿ ಅವರಿಗೆ ಕೂಡಲೇ ಮರಣ ದಂಡನೆ ವಿಧಿಸಬೇಕು. ಮಹಿಳೆಯರ ಮೇಲಿನ ದೌರ್ಜನ್ಯ ತಡೆಗಟ್ಟಲು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ವಿಫಲವಾಗಿದೆ ಎಂದು ಆರೋಪಿಸಿ ಕೊಡಗು ಜಿಲ್ಲಾ ಜೆಡಿಎಸ್ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಯಿತು.

ನಗರದ ಗಾಂಧಿ ಮೈದಾನದಿಂದ ಆರಂಭವಾದ ಪ್ರತಿಭಟನೆ ಜಿಲ್ಲಾಧಿಕಾರಿ ಗಳ ಕಚೇರಿ ಮುಂಭಾಗ ಸಮಾವೇಶ ಗೊಂಡಿತು. ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಪಕ್ಷದ ಕಾರ್ಯಕರ್ತರು ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ದಿಕ್ಕಾರ ಕೂಗಿದರು. ನಂತರ ಜಿಲ್ಲಾಧಿಕಾರಿ ಶ್ರೀವಿದ್ಯಾ ಅವರ ಮೂಲಕ ಸರ್ಕಾರಕ್ಕೆ ಮನವಿ ಪತ್ರವನ್ನು ಸಲ್ಲಿಸಿದರು.

ಪ್ರತಿಭಟನೆಯ ಸಂದರ್ಭ ಮಾಜಿ ಸಚಿವ ಜೀವಿಜಯ ಮಾತನಾಡಿ, ವಿಜಯಪುರದಲ್ಲಿ ಬಾಲಕಿಯ ಮೇಲೆ ಅತ್ಯಾಚಾರ ಮಾಡಿ ಹತ್ಯೆ ಮಾಡಲಾಗಿರುವದು ಅಮಾನವೀಯ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದು ಹೋಗಿದೆ. ರಾಜ್ಯದಲ್ಲಿ ಮಾತ್ರವಲ್ಲದೆ ರಾಷ್ಟ್ರದ ನಾನಾ ಭಾಗಗಳಲ್ಲಿ ದಲಿತರ ಮೇಲೆ ದೌರ್ಜನ್ಯ, ಮಹಿಳೆಯರ ಮೇಲೆ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಆಡಳಿತ ನಡೆಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದರು.

ಕೇಂದ್ರ ಸಚಿವ ಅನಂತಕುಮಾರ್ ಅವರು ಸಂವಿಧಾನದ ಕುರಿತು ಹೇಳಿಕೆ ನೀಡಿರುವದು ಖಂಡನೀಯ. ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಅವಹೇಳನ ಮಾಡಲಾಗಿದೆ. ಈ ಬಗ್ಗೆ ಪ್ರಧಾನಿ ಮಂತ್ರಿ ಅವರು ಯಾವದೇ ಪ್ರತಿಕ್ರಿಯೆ ನೀಡದಿರುವದು ವಿಪರ್ಯಾಸ ಎಂದರು.

ಜೆಡಿಎಸ್ ಜಿಲ್ಲಾಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ ಮಾತನಾಡಿ, ಕನ್ನಡ ನಾಡಿನ ಜನತೆಗೆ ರಾಜ್ಯ ಸರ್ಕಾರ ದ್ರೋಹ ಮಾಡಿದೆ. ರಾಜ್ಯದಲ್ಲಿ ಸುಮಾರು ಮೂರು ಸಾವಿರ ರೈತರ ಆತ್ಮಹತ್ಯೆ ಪ್ರಕರಣ ನಡೆದಿದೆ. ಆದರೂ ಸರ್ಕಾರ ರೈತರ ಮೇಲೆ ಯಾವದೇ ಕಾಳಜಿ ವಹಿಸಿಲ್ಲ. ಕಾಂಗ್ರೆಸ್ ಸರ್ಕಾರ ನಾಲ್ಕು ವರ್ಷ ಎಂಟು ತಿಂಗಳು ಆಡಳಿತ ನಡೆಸಿದ್ದು, ಬಡವರ, ರೈತರ ವಿರೋಧಿಯಾಗಿದೆ ಎಂದು ದೂರಿದರು. ಪರಿಶಿಷ್ಟ ಘಟಕದ ರಾಜ್ಯ ಉಪಾಧ್ಯಕ್ಷ ರಾಜಾರಾವ್ ಮಾತನಾಡಿ, ವಿಜಯಪುರದಲ್ಲಿ ಬಾಲಕಿ ದಾನಮ್ಮ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿರುವದು ಖಂಡನೀಯ ಎಂದರು.

ಪ್ರತಿಭಟನೆಯ ಸಂದರ್ಭ ರಾಜ್ಯ ಉಪಾಧ್ಯಕ್ಷ ಮನೋಜ್ ಬೋಪಯ್ಯ, ಎಂ.ಎಂ. ಶರೀಫ್, ಯುವ ಘಟಕದ ಅಧ್ಯಕ್ಷ ವಿಶ್ವ, ಜಿಲ್ಲಾ ವಕ್ತಾರ ಎಂ.ಎ. ಆದೀಲ್ ಪಾಷ, ಪ್ರಮುಖರಾದ ಹೆಚ್.ಆರ್. ಸುರೇಶ್, ಶಿವುದಾಸ್, ಪರಮೇಶ, ಪಿ.ವಿ. ರೆನ್ನಿ, ಕೆ.ಎಂ. ಗಣೇಶ್, ಕಡ್ಡಿ ಸುಂದರ, ಸೋಮವಾರಪೇಟೆ ತಾ.ಪಂ. ಅಧ್ಯಕ್ಷ ಪುಷ್ಪಾ ರಾಜೇಶ್ ಮತ್ತಿತರರು ಪಾಲ್ಗೊಂಡಿದ್ದರು.