ಸುಂಟಿಕೊಪ್ಪ, ಜ.2: ತಾಳಿಕಟ್ಟಿದ ಪತಿಯ ಕಿರುಕುಳದಿಂದ ಬೇಸತ್ತ ಗೃಹಿಣಿಯೋರ್ವರು ತನ್ನ ಪುಟ್ಟ ಮಗುವಿನೊಂದಿಗೆ ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾದ ಹೃದಯ ವಿದ್ರಾಯಕ ಘಟನೆ ನಡೆದಿದೆ.ಕೊಡಗರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೌಡಿಕಾಡು ತೋಟದ ಕಾರ್ಮಿಕಳಾದ ದೊಡ್ಡಮ್ಮ (37) ಅವರೇ ತನ್ನ ಪುಟ್ಟ 5 ವರ್ಷದ ಕಂದ ಪ್ರಿಯಾಳನ್ನು ಅಪ್ಪಿಕೊಂಡು ಕೆರೆಗೆ ಹಾರಿ ಇಹಲೋಕ ತ್ಯಜಿಸಿದ ದುರ್ದೈವಿಯಾಗಿದ್ದಾರೆ.ಮೂಲತಃ ಚಾಮರಾಜನಗರ ಜಿಲ್ಲೆಯ ಅವರೆ ಹೋಬಳಿಯ ಸಾಗಡದ ಮಹದೇವ ಎಂಬಾತ 19 ವರ್ಷದ ಹಿಂದೆ ಚಾಮರಾಜನಗರದಿಂದ ಕೊಡಗರಹಳ್ಳಿ ಸ್ಕೂಲ್ ಬಾಣೆಯಲ್ಲಿ ಬಂದು ನೆಲೆಸಿದ
(ಮೊದಲ ಪುಟದಿಂದ) ನಿಂಗಶೆಟ್ಟಿ ಎಂಬವರ ಮಗಳಾದ ದೊಡ್ಡಮ್ಮರನ್ನು ವಿವಾಹವಾಗಿದ್ದ. ಈ ಕುಟುಂಬವು ಕೊಡಗರಹಳ್ಳಿಯ ಚೌಡಿಕಾಡು ತೋಟಕ್ಕೆ ಕಳೆದ 1 ವಾರಗಳ ಹಿಂದೆ ಆಗಮಿಸಿ ತೋಟದಲ್ಲಿ ಕೂಲಿ ಕೆಲಸ ನಿರ್ವಹಿಸುತ್ತಿತ್ತು ಎನ್ನಲಾಗಿದೆ.
ಈತನ್ಮಧ್ಯೆ ಈ ದಂಪತಿಗಳಿಗೆ 4 ಹೆಣ್ಣು ಮಕ್ಕಳು ಜನಿಸಿದ್ದು, ಮಹದೇವ ಆಗಿಂದಾಗ್ಗೆ ಪತ್ನಿಗೆ ಮಾನಸಿಕವಾಗಿ ದೈಹಿಕವಾಗಿ ಹಿಂಸೆ ನೀಡುತ್ತಿದ್ದ ಎನ್ನಲಾಗಿದೆ. ಹಿರಿಯ ಮಗಳು ರಾಣಿಗೆ 15 ವರ್ಷವಾಗಿದ್ದು, ನಂತರ ಜನಸಿದ ಐಶ್ವರ್ಯ ಹಾಗೂ ಸೌಂದರ್ಯ ಅವಳಿಯಾಗಿದ್ದಾರೆ ಅವರಿಗೆ 10 ವರ್ಷ ಪ್ರಾಯವಾಗಿದೆ. ಕೊನೆಯ ಮಗಳು ಪ್ರಿಯ.
ದೊಡ್ಡಮ್ಮ ತನ್ನ ಸಣ್ಣ ಮಗುವಿನೊಂದಿಗೆ ಕೊಡಗರಹಳ್ಳಿಯ ತನ್ನ ತಂದೆ ಮನೆಗೆ ಆರೋಗ್ಯ ಸರಿಯಿಲ್ಲದ ಕಾರಣ ತೆರಳಿದ್ದಾರೆ. ಗಂಡ ಮಹದೇವನ ಕಿರುಕುಳದಿಂದ ಮಾನಸಿಕವಾಗಿ ಜರ್ಜರಿತಳಾದ ದೊಡ್ಡಮ್ಮ ಇಹಲೋಕ ತ್ಯಜಿಸಲು ಬೆಳಿಗ್ಗೆ ಅಂದಾಜು 5.30 ರಿಂದ 6 ಗಂಟೆಯ ಸಮಯದಲ್ಲಿ ಚೌಡಿಕಾಡು ತೋಟದ ಸಮೀಪವಿರುವ ಜೋಡಿಕೆರೆಗೆ ತೆರಳಿ ಮಗುವಿನೊಂದಿಗೆ ಹಾರಿ ಆತ್ಮ್ಯಹತ್ಯೆ ಮಾಡಿಕೊಂಡಿದ್ದಾಳೆ.
ಕುಶಾಲನಗರ ವೃತ್ತನಿರೀಕ್ಷ ಕ್ಯಾತೇಗೌಡ, ಸುಂಟಿಕೊಪ್ಪ ಎ.ಎಸ್.ಐ. ಪಾರ್ಥ ಹಾಗೂ ಸಿಬ್ಬಂದಿ ಸ್ಥಳಕ್ಕೆ ತೆರಳಿ ಮಹಜರು ನಡೆಸಿ ಮೃತ ದೇಹಗಳನ್ನು ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮರಣೋತ್ತರ ಪರೀಕ್ಷೆಯನ್ನು ನಡೆಸಿ ಕುಟುಂಬಸ್ಥರಿಗೆ ನೀಡಲಾಯಿತು. ದೊಡ್ಡಮ್ಮ ಅವರ ತಂದೆ ನೀಡಿದ ದೂರಿನನ್ವಯ ಪೊಲೀಸರು ಮಹಾದೇವನನ್ನು ಬಂಧಿಸಿದ್ದಾರೆ.