ಕೂಡಿಗೆ, ಜ. 2: ಮುಳ್ಳುಸೋಗೆ ಗ್ರಾಮ ಪಂಚಾಯಿತಿಯ ಮಾಸಿಕ ಸಭೆಯು ಗ್ರಾ.ಪಂ. ಅಧ್ಯಕ್ಷೆ ಭವ್ಯ ಅಧ್ಯಕ್ಷತೆಯಲ್ಲಿ ನಡೆಯಿತು. ಮುಳ್ಳುಸೋಗೆ ಪಂಚಾಯಿತಿ ಹೆಸರಲ್ಲಿ ಕೆಲವು ಪ್ರದೇಶಗಳಲ್ಲಿ ವಸೂಲಿ ನಡೆಯುತ್ತಿದೆ ಎಂದು ಮುಳ್ಳುಸೋಗೆ ಪಂಚಾಯಿತಿ ಉಪಾಧ್ಯಕ್ಷ ತಾರಾನಾಥ್ ಆರೋಪಿಸಿದರು.
ಗ್ರಾ.ಪಂ. ಸಾಮಾನ್ಯ ಸಭೆಯಲ್ಲಿ ಈ ವಿಚಾರ ಪ್ರಸ್ತಾಪಿಸುತ್ತಾ ಕಳೆದ 6 ತಿಂಗಳಿಂದ ಪ್ರದೀಪ್ ಎಂಬಾತ ಬಸವೇಶ್ವರ ಬಡಾವಣೆಯಲ್ಲಿ ಮುಳ್ಳುಸೋಗೆ ಪಂಚಾಯಿತಿಗೆ ಸೇರಿದ ನೀರು ಸರಬರಾಜು ಕಾರ್ಯದಲ್ಲಿ ತನ್ನಷ್ಟಕ್ಕೆ ತಾನೇ ಜವಬ್ದಾರಿಯ ವ್ಯಕ್ತಿಯಂತೆ ಅಲ್ಲಿನ ನಿವಾಸಿಗಳಿಗೆ ಬೇಕಾಬಿಟ್ಟಿ ನೀರು ಬಿಡುವ ನೀರುಗಂಟಿ ಕೆಲಸವನ್ನು ಮಾಡುವ ಮೂಲಕ ಪಂಚಾಯಿತಿಯ ನಿಯಮಗಳನ್ನು ಮೀರಿ ಅಧಿಕಾರ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದ್ದಾನೆ. ತನಗೆ ಬೇಕಾದವರಿಗೆ ನೀರು ಒದಗಿಸುತ್ತಾ ಅವರುಗಳಿಂದ ಹಣ ವಸೂಲಿಯನ್ನು ಮಾಡುತ್ತಿದ್ದಾನೆ ಎಂದು ವಿವರಿಸುತ್ತಿದ್ದಂತೆ ಬಹುತೇಕ ಸದಸ್ಯರು ಧನಿಗೂಡಿಸಿ ಸಂಬಂಧಪಟ್ಟ ವ್ಯಕ್ತಿಯ ಮೇಲೆ ಕ್ರಮ ಜರುಗಿಸಬೇಕೆಂದು ಅಧ್ಯಕ್ಷರನ್ನು ಒತ್ತಾಯಿಸಿದರು.
ಅಧ್ಯಕ್ಷೆ ಭವ್ಯ ಮಾತನಾಡಿ, ಸದಸ್ಯರುಗಳ ಅಭಿಪ್ರಾಯಗಳನ್ನು ಸಂಗ್ರಹಿಸಲಾಗಿದೆ ಅದಕ್ಕನುಗುಣವಾಗಿ ಕ್ರಮ ಕೈಗೊಳ್ಳುವದಾಗಿ ಭರವಸೆ ನೀಡಿದರು. ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ರಾಜಶೇಖರ್ ಮಾತನಾಡಿ, ಪಂಚಾಯಿತಿಯ ಆಸ್ತಿಯನ್ನು ಖಾಸಗಿ ವ್ಯಕ್ತಿಗಳು ದುರುಪಯೋಗಪಡಿಸಿಕೊಳ್ಳದಂತೆ ಜವಾಬ್ದಾರಿಯುತವಾದ ಪಂಚಾಯಿತಿಯ ನೌಕರರೊಬ್ಬರನ್ನು ನೇಮಿಸುವ ಭರವಸೆ ನೀಡಿದರು.
ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಕಾಮಗಾರಿ ಬಿಲ್ಲುಗಳನ್ನು ಸಾಮಾನ್ಯ ಸಭೆಗಳಲ್ಲಿಟ್ಟು ಚರ್ಚಿಸದೇ ತಮಗೆ ಬೇಕಾದ ರೀತಿಯಲ್ಲಿ ಬಿಲ್ಲುಗಳನ್ನು ವಿಲೇವಾರಿ ಮಾಡುತ್ತಿರುವ ಬಗ್ಗೆ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.
ಸಭೆಯಲ್ಲಿ ಕುಮಾರಸ್ವಾಮಿ, ಸುರೇಶ್ ದೊಡ್ಡಣ್ಣ, ಗಣೇಶ್, ವಿಶ್ವನಾಥ್, ಸುಚಿತ್ರ, ರುದ್ರಾಂಭೆ, ವೇದಾವತಿ, ಜ್ಯೊತಿ, ಜಯಲಕ್ಷ್ಮಿ, ಸರಸ್ವತಿ, ಜುಬೇದ ಅರುಣ ಚಂದ್ರ, ಪಾರ್ವತಿ ಇದ್ದರು.