ಮಡಿಕೇರಿ, ಜ. 2: ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು, ಅಧಿಕಾರಿಗಳ ಸಲಹೆ-ಸಹಕಾರದೊಂದಿಗೆ ಅಭಿವೃದ್ಧಿಗೆ ಪ್ರಯತ್ನಿಸಲಾಗುವದೆಂದು ಜಿಲ್ಲಾ ಪಂಚಾಯಿತಿ ನೂತನ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿರುವ ಪ್ರಶಾಂತ್ ಕುಮಾರ್ ಮಿಶ್ರ ಹೇಳಿದರು.ಕಚೇರಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 2014ನೇ ಬ್ಯಾಚ್‍ನಲ್ಲಿ ಐಎಎಸ್ ಮಾಡಿದ್ದು, ಹೈದರಾಬಾದ್ ಕರ್ನಾಟಕ ಹಾಗೂ ಹೊಸಪೇಟೆಯಲ್ಲಿ ಕೆಲಸ ನಿರ್ವಹಿಸಿರುವ ಅನುಭವವಿದೆ. ಜಿ.ಪಂ. ವ್ಯಾಪ್ತಿಯ ಎಲ್ಲ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡು, ಕೊಡಗಿನ ಬಗ್ಗೆ ತಿಳಿದುಕೊಂಡು ಹೊಂದಾಣಿಕೆಯೊಂದಿಗೆ ಕೆಲಸ ಮಾಡುತ್ತೇನೆ.

ಈ ಹಿಂದೆ ತರಬೇತಿ ಸಂದರ್ಭ ಮಡಿಕೇರಿಗೆ ಬಂದಿದ್ದಾಗಿ ಹೇಳಿದ ಅವರು, ಎಲ್ಲರೂ ಸಹಕಾರ ನೀಡುವಂತೆ ಕೋರಿದರು. ಮೂಲತಃ ಬಿಹಾರ್‍ನ ಪಾಟ್ನದ ನಿವಾಸಿಯಾಗಿರುವ ಪ್ರಶಾಂತ್ ಮಿಶ್ರ ವಿವಾಹಿತರಾಗಿದ್ದು, ಸದ್ಯದಲ್ಲೇ ಪತ್ನಿ ಕೂಡ ಮಡಿಕೇರಿಗೆ ಬಂದು ನೆಲೆಸಲಿದ್ದಾರೆ ಎಂದು ತಿಳಿಸಿದರು.