ಕುಶಾಲನಗರ, ಜ. 2: ಕುಶಾಲನಗರವನ್ನು ಕೇಂದ್ರವಾಗಿಸಿಕೊಂಡು ನೂತನ ತಾಲೂಕು ರಚನೆಗೆ ಆಗ್ರಹಿಸಿ ನಡೆಯುತ್ತಿರುವ ಅಮರಣಾಂತ ಉಪವಾಸ ಸತ್ಯಾಗ್ರಹ ಎರಡನೇ ದಿನಕ್ಕೆ ಕಾಲಿಟ್ಟಿದೆ. ಸೋಮವಾರ ಸತ್ಯಾಗ್ರಹ ಆರಂಭಿಸಿದ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್, ಕೆ.ಎಸ್.ರಾಜಶೇಖರ್ ಅವರೊಂದಿಗೆ ಸಮಿತಿಯ ಎಸ್.ಕೆ.ಸತೀಶ್ ಹಾಗೂ ಮುಸ್ತಾಫ ಸತ್ಯಾಗ್ರಹದಲ್ಲಿ ಕೈಜೋಡಿಸಿದ್ದಾರೆ. ಸತ್ಯಾಗ್ರಹ ನಿರತರು ಪಟ್ಟಣದ ಕಾರು ನಿಲ್ದಾಣದ ಗುಂಡೂರಾವ್ ವೇದಿಕೆಯಲ್ಲಿ ಸೋಮವಾರದಿಂದ ಅಹೋರಾತ್ರಿ ಉಪವಾಸ ಮುಂದುವರೆಸಿದ್ದಾರೆ.

ಕೇಂದ್ರ ಹಾಗೂ ಸ್ಥಾನೀಯ ಸಮಿತಿ ಪ್ರಮುಖರು ಪಾಲ್ಗೊಂಡು ತಾಲೂಕು ರಚನೆಗೆ ಆಗ್ರಹಿಸಿ ಘೋಷಣೆ ಕೂಗಿದರು. ಮಧ್ಯಾಹ್ನ ಕಾರ್ಯಕರ್ತರು ಕೆಲಕಾಲ ಮಾನವ ಸರಪಳಿ ರಚಿಸಿದರು. ಧರಣಿ ಸಂದರ್ಭ ಕುಶಾಲನಗರ ಪಟ್ಟಣ ಪಂಚಾಯ್ತಿ ಅಧ್ಯಕ್ಷೆ ರೇಣುಕಾ, ಸದಸ್ಯರಾದ ಎಂ.ಎಂ.ಚರಣ್, ಹೆಚ್.ಜೆ.ಕರಿಯಪ್ಪ, ಹೆಚ್.ಕೆ.ಪಾರ್ವತಿ, ಪ್ರಮೋದ್ ಮುತ್ತಪ್ಪ ಸಮಿತಿ ಪ್ರಮುಖರಾದ ಅಬ್ದುಲ್ ಖಾದರ್, ಎನ್.ಕೆ. ಮೋಹನ್‍ಕುಮಾರ್ ಮತ್ತಿತರರು ಇದ್ದರು.

ಶಾಸಕರ ಭೇಟಿ: ಕುಶಾಲನಗರ ವನ್ನು ಕೇಂದ್ರವಾಗಿಸಿಕೊಂಡು ನೂತನ ತಾಲೂಕು ರಚನೆಗೆ ಎಲ್ಲಾ ರೀತಿಯ ಮಾನದಂಡ ಹೊಂದಿದ್ದು, ಈ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವದು ಎಂದು ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಭರವಸೆ ನೀಡಿದ್ದಾರೆ. ಅವರು ಕುಶಾಲನಗರದಲ್ಲಿ ಸತ್ಯಾಗ್ರಹ ವೇದಿಕೆಗೆ ಭೇಟಿ ನೀಡಿ ಮಾತನಾಡಿ, ಜಿಲ್ಲೆಯ ಉಸ್ತುವಾರಿ ಈ ಬಗ್ಗೆ ಕಾಳಜಿ ವಹಿಸಬೇಕು. ಇಚ್ಚಾಶಕ್ತಿಯ ಕೊರತೆಯಿಂದ ಜಿಲ್ಲೆಯ ನೂತನ ತಾಲೂಕುಗಳ ರಚನೆಗೆ ಹಿನ್ನಡೆಯಾಗಿದೆ. ಅಧಿಕಾರಿಗಳು ಕೂಡ ವಿಷಯಕ್ಕೆ ಸಂಬಂಧಿಸಿದಂತೆ ಸಂಪೂರ್ಣ ನಿರ್ಲಕ್ಷ್ಯ ತಾಳಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಅಪ್ಪಚ್ಚುರಂಜನ್, ತಮ್ಮ ಸರಕಾರವಿದ್ದಲ್ಲಿ ಕೇವಲ ಅರ್ಧ ದಿನದಲ್ಲಿ ತಾಲೂಕು ರಚನೆಯ ನಿರ್ಧಾರ ತೆಗೆದು ಕೊಳ್ಳುತ್ತಿದ್ದೇವು ಎಂದರು.

ಈ ನಡುವೆ ಮಡಿಕೇರಿ ಉಪವಿಭಾಗಾಧಿಕಾರಿ ನಂಜುಂಡೇಗೌಡ ಅವರು ಸತ್ಯಾಗ್ರಹ ಮಾಡುತ್ತಿರುವ ಸ್ಥಳಕ್ಕೆ ಭೇಟಿ ನೀಡಿ ಮನವಿ ಸಲ್ಲಿಸಲು ಕೋರಿದ ಸಂದರ್ಭ ಪ್ರತಿಭಟನಾಕಾರರು ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಭೇಟಿ ನೀಡಬೇಕು ಎಂದು ಆಗ್ರಹಿಸಿದರು. ಈ ಹಿನ್ನಲೆಯಲ್ಲಿ ಉಪ ವಿಭಾಗಾಧಿಕಾರಿ ಗಳು ಬರಿಗೈಯಲ್ಲಿ ಹಿಂತಿರುಗ ಬೇಕಾಯಿತು.