ಸಿದ್ದಾಪುರ, ಜ. 2: ಬಜೆಗೊಲ್ಲಿ ಪೈಸಾರಿಯ ರಸ್ತೆ ಅಗಲೀಕರಣಗೊಳಿಸಿ ಅಭಿವೃದ್ಧಿಪಡಿಸದಿದ್ದಲ್ಲಿ ಮುಂಬರುವ ಚುನಾವಣೆಯನ್ನು ಬಹಿಷ್ಕರಿಸಲು ನಿರ್ಧರಿಸಿ ನಿರ್ಣಯ ಕೈಗೊಳ್ಳಲಾಗಿದೆ.

ಮಾಲ್ದಾರೆ ಗ್ರಾ.ಪಂ ವ್ಯಾಪ್ತಿಯ ಬಾಡಗ ಬಾಣಂಗಾಲ ಗ್ರಾಮದ ಬಜೆಗೊಲ್ಲಿ ಪೈಸಾರಿಗೆ ತೆರಳುವ ರಸ್ತೆಯು ಕಾಲುದಾರಿಯಾಗಿದ್ದು, ಸುಮಾರು ಅರ್ಧ ಕಿಲೋಮೀಟರ್‍ನಷ್ಟು ನಡೆದುಕೊಂಡೇ ಹೋಗಬೇಕಾಗಿದೆ. ಬಜೆಗೊಲ್ಲಿ ಪೈಸಾರಿ ಭಾಗದಲ್ಲಿ ಸುಮಾರು 40ಕ್ಕೂ ಹೆಚ್ಚು ಮನೆಗಳಿದ್ದು, ಮನೆಗೆ ಬೇಕಾದ ಸಾಮಗ್ರಿಗಳನ್ನು ತಲೆಯಲ್ಲಿಯೇ ಹೊತ್ತುಕೊಂಡು ಹೋಗಬೇಕಾದ ಪರಿಸ್ಥತಿ ಇದೆ. ಕಳೆದ 30 ವರ್ಷಗಳಿಂದಲೂ ಈ ರಸ್ತೆಯನ್ನು ಅಗಲೀಕರಣಗೊಳಿಸುತ್ತೇವೆಂದು ಭರವಸೆ ನೀಡುವ ಜನಪ್ರತಿನಿಧಿಗಳು, ಚುನಾವಣೆಯ ಬಳಿಕ ಇತ್ತ ತಿರುಗಿ ನೋಡುತ್ತಿಲ್ಲ ಎಂದು ಗ್ರಾಮಸ್ಥರ ಸಭೆಯಲ್ಲಿ ಆಕ್ರೋಶ ವ್ಯಕ್ತವಾಯಿತ್ತು.

ಪ್ರತಿ ಚುಣಾವಣೆಯ ಸಂದರ್ಭದಲ್ಲೂ ರಾಜಕಾರಣಿಗಳು ರಸ್ತೆಯನ್ನು ಅಗಲೀಕರಣ ಮಾಡಿಕೊಡುವ ಬಗ್ಗೆ ಭರವಸೆಗಳನ್ನು ನೀಡುತ್ತಿದ್ದು, ರಸ್ತೆ ಅಗಲೀಕರಣ ಮಾಡಬೇಕೆಂದು ಜಿಲ್ಲಾಧಿಕಾರಿಗಳು, ತಹಶೀಲ್ದಾರರು ಸೇರಿದಂತೆ ಮುಖ್ಯಮಂತ್ರಿಗಳಿಗೂ ಕೂಡ ಪತ್ರ ಬರೆಯಲಾಗಿದ್ದರೂ ಯಾವದೇ ಪ್ರಯೋಜನವಾಗಲಿಲ್ಲ. ಹಾಗಾಗಿ ಈ ಭಾರಿಯ ಚುನಾವಣೆಯನ್ನು ಬಷ್ಕರಿಸಬೇಕೆಂದು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತ್ತು.

ಗ್ರಾಮಸ್ಥ ಪೈಸಲ್ ಮಾತನಾಡಿ, ಕಳೆದ 45 ವರ್ಷಗಳಿಂದ ಈ ಬಾಗದ ನಿವಾಸಿಗಳು ರಸ್ತೆ ಇಲ್ಲದೆ ಕಷ್ಟಪಡುತ್ತಿದ್ದಾರೆ. ಕೇವಲ ನಾಲ್ಕು ಅಡಿಯ ರಸ್ತೆಯಲ್ಲಿಯೇ ಗ್ರಾಮಸ್ಥರು ಸಂಚರಿಸಬೇಕಾಗಿದೆ. ಹೆರಿಗೆ, ತುರ್ತುಚಿಕಿತ್ಸೆಗೆ ಸುಮಾರು ಅರ್ಧ ಕಿ.ಮೀ. ಕೈಯಲ್ಲಿಯೇ ಎತ್ತಿಕೊಂಡು ಬರಬೇಕಾಗಿದೆ. ಹಲವಾರು ಭಾರಿ ಅಧಿಕಾರಿಗಳಿಗೂ ಜನಪ್ರತಿನಿಧಿಗಳಿಗೂ ಮನವಿ ಸಲ್ಲಿಸಿದ್ದರೂ ಈವರೆಗೂ ಯಾವದೇ ಪ್ರಯೋಜನವಾಗಲಿಲ್ಲ. ಹಾಗಾಗಿ ಚುನಾವಣೆ ಬಹಿಷ್ಕರಿಸಲು ತೀರ್ಮಾನಿಸಿದ್ದೇವೆ ಎಂದರಲ್ಲದೇ ಯಾವದೇ ರಾಜಕಾರಣಿಗಳು ಮತ ಕೇಳಿಕೊಂಡು ಬರಬಾರದೆಂದು ಬ್ಯಾನರ್ ಅಳವಡಿಸಲಾಗುವದು ಎಂದರು.

ಕೂಲಿ ಕಾರ್ಮಿಕೆ ಸ್ಥಳೀಯ ನಿವಾಸಿ ವೆನಿಲಾ ಮಾತನಾಡಿ, ಬಜೆಗೊಲ್ಲಿ ಪೈಸಾರಿಯಲ್ಲಿ ಬಹುತೇಕ ಕೂಲಿ ಕಾರ್ಮಿಕರು ವಾಸವಾಗಿದ್ದು, ವಾಹನ ತೆರಳುವ ರಸ್ತೆ ಇಲ್ಲದೆ ಕಾರ್ಮಿಕರಿಗೂ, ವಿದ್ಯಾರ್ಥಿಗಳಿಗೂ ತೊಂದರೆಯುಂಟಾಗಿದೆ. ಕಾಡಾನೆ ಹಾವಳಿಯೊಂದಿಗೆ ಹುಲಿಯ ಉಪಟಳವೂ ಕೂಡ ಹೆಚ್ಚಾಗಿದ್ದು, ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರು ಭಯದಿಂದಲೇ ಮನೆಗೆ ತೆರಳಬೇಕಾಗಿದೆ. ತನಗೆ ಇತ್ತೀಚೆಗೆ ಕೆಲಸ ಮಾಡುವ ಸಂದರ್ಭ ಹಾವೊಂದು ಕಚ್ಚಿದ ಸಂದರ್ಭ ಮನೆಯ ಸಮೀಪದ ಮಹಿಳೆಯರು ತನ್ನನ್ನು ಎತ್ತಿಕೊಂಡು ಮುಖ್ಯ ರಸ್ತೆಯವರೆಗೆ ತಲುಪಿಸಿ ಬಳಿಕ ಚಿಕಿತ್ಸೆ ನೀಡಲಾಗಿತ್ತು ಎಂದು ತಮ್ಮ ಅಳಲನ್ನು ತೋಡಿಕೊಂಡರು.

ಹಕ್ಕುಪತ್ರವೂ ಕೊಡುತ್ತಿಲ್ಲ ಸರಕಾರ..!!

ಮಾಲ್ದಾರೆ ಭಾಗದ ಬಜೆಗೊಲ್ಲಿ ಪೈಸಾರಿಯಲ್ಲಿ ಸುಮಾರು 40 ಕ್ಕೂ ಹೆಚ್ಚು ಕುಟುಂಬಸ್ಥರು ವಾಸವಾಗಿದ್ದು, ಕೆಲವೇ ಮನೆಗಳಿಗೆ ಹಕ್ಕುಪತ್ರ ವಿತರಿಸಲಾಗಿದೆ. ಈಗಾಗಲೇ ತಾಹಶೀಲ್ದಾರರಿಗೆ ಹಕ್ಕುಪತ್ರ ನೀಡಬೇಕೆಂದು ಮನವಿ ಸಲ್ಲಿಸಲಾಗಿದ್ದರೂ, ಬಡ ಕೂಲಿ ಕೆಲಸದವರಿಗೆ ಹಕ್ಕುಪತ್ರ ದೊರಕಿಲ್ಲ ಎಂದು ಗ್ರಾಮಸ್ಥರು ಅಳಲನ್ನು ತೋಡಿಕೊಂಡರು. -ಎನ್ ವಾಸು