ಶ್ರೀಮಂಗಲ, ಜ. 2: ಪೊನ್ನಂಪೇಟೆ ತಾಲೂಕು ರಚನೆಗೆ ಆಗ್ರಹಿಸಿ 63ನೇ ದಿನಕ್ಕೆ ಕಾಲಿಟ್ಟ ಧರಣಿ ಸತ್ಯಾಗ್ರಹದಲ್ಲಿ ಪೊನ್ನಂಪೇಟೆಯ ಹಿರಿಯ ನಾಗರಿಕ ವೇದಿಕೆಯ ಅಧ್ಯಕ್ಷರು ಹಾಗೂ ಸದಸ್ಯರು ಪಾಲ್ಗೊಂಡು ಬೆಂಬಲ ವ್ಯಕ್ತಪಡಿಸಿದರು.
ಈ ಸಂದರ್ಭ ಮಾತನಾಡಿದ ತಾಲೂಕು ಹೋರಾಟ ಸಮಿತಿಯ ಕಾರ್ಯಧ್ಯಕ್ಷ ಅರುಣ್ ಮಾಚಯ್ಯ ಅವರು, ತಾ. 4ಕ್ಕೆ ಹಾಸನ ಜಿಲ್ಲೆಯ ಅರಕಲಗೋಡಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಗಮಿಸುತ್ತಿದ್ದು, ತಾಲೂಕು ಪುನರ್ ರಚನಾ ಸಮಿತಿ, ಹಿರಿಯ ನಾಗರಿಕ ವೇದಿಕೆ ಮತ್ತು ಸ್ಥಳೀಯರೊಂದಿಗೆ ಸಿ.ಎಂ. ಅವರಿಗೆ ತಾಲೂಕು ರಚನೆಯ ಬಗ್ಗೆ ಮನವಿ ಸಲ್ಲಿಸಲಾಗುವದು. ತಾ. 9ಕ್ಕೆ ಜಿಲ್ಲೆಗೆ ಸಿ.ಎಂ. ಆಗಮಿಸುತ್ತಿದ್ದು, ತಾಲೂಕು ಘೋಷಣೆ ಮಾಡುವ ಭರವಸೆ ಇದೆ. ಜಿಲ್ಲೆಯ ಕುಶಾಲನಗರ ತಾಲೂಕು ರಚನೆಗೆ ಹೋರಾಟ ನಡೆಸುತ್ತಿರುವವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಒಂದು ವೇಳೆ ತಾಲೂಕು ಘೋಷಣೆ ಮಾಡದಿದ್ದರೆ ಕುಶಾಲನಗರ ಹಾಗೂ ಪೊನ್ನಂಪೇಟೆ ತಾಲೂಕು ಹೋರಾಟಗಾರರು ಜಂಟಿಯಾಗಿ ಉಗ್ರ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.
ಹಿರಿಯ ನಾಗರಿಕ ವೇದಿಕೆಯ ಪ್ರಮುಖರಾದ ಜಿ.ಪಂ. ಮಾಜಿ ಸದಸ್ಯ ಮೂಕಳೇರ ಕುಶಾಲಪ್ಪ ಅವರು ಮಾತನಾಡಿ, ಈ ಹೋರಾಟವನ್ನು ಸರಕಾರ, ಜನಪ್ರತಿನಿಧಿಗಳು ಗಂಭೀರವಾಗಿ ಪರಿಗಣಿಸಿ ತಾಲೂಕು ರಚನೆ ಮಾಡಬೇಕೆಂದು ಒತ್ತಾಯಿಸಿದರು.
ಹಿರಿಯ ನಾಗರಿಕ ವೇದಿಕೆಯ ಉಪಾಧ್ಯಕ್ಷ ಚೆಪ್ಪುಡಿರ ಸೋಮಯ್ಯ ಮಾತನಾಡಿ, ಕಳೆದ 17 ವರ್ಷದಿಂದ ತಾಲೂಕು ರಚನೆಯ ಹೋರಾಟ ನಡೆಯುತ್ತಿದ್ದು, ಈ ಭಾಗದ ಜನಪ್ರತಿನಿಧಿಗಳು ಸರಕಾರದ ಮೇಲೆ ಒತ್ತಡ ಹೇರದ ಹಿನ್ನಲೆಯಲ್ಲಿ ಕಳೆದ ಬಜೆಟ್‍ನಲ್ಲಿ ಹೊಸ 50 ತಾಲೂಕು ಘೋಷಣೆ ಪಟ್ಟಿಯಲ್ಲಿ ಪೊನ್ನಂಪೇಟೆ ತಾಲೂಕು ಸೇರ್ಪಡೆಗೊಳ್ಳಲಿಲ್ಲ. ಅತ್ಯಂತ ಅರ್ಹತೆ ಹಾಗೂ ಎಲ್ಲಾ ಮಾನದಂಡಗಳನ್ನು ಹೊಂದಿರುವ ಪೊನ್ನಂಪೇಟೆ ತಾಲೂಕು ರಚನೆಗೆ ಸರಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ನಿವೃತ್ತ ಎಸ್.ಪಿ. ಮುಕ್ಕಾಟಿರ ಚೋಟು ಅಪ್ಪಯ್ಯ,ಹಿರಿಯ ನಾಗರಿಕ ವೇದಿಕೆಯ ಅಧ್ಯಕ್ಷ ಪೊಕ್ಕಳಿಚಂಡ ಪೂಣಚ್ಚ, ಚೆಪ್ಪುಡಿರ ಪೊನ್ನಪ್ಪ, ಆಲೀರ ಎರ್ಮು ಹಾಜಿ, ಕಾಳಿಮಾಡ ಮೋಟಯ್ಯ, ಅಡ್ಡಂಡ ಕಾರ್ಯಪ್ಪ, ಅನಿತಾ ಕಾರ್ಯಪ್ಪ, ಚೆಟ್ರುಮಾಡ ಶಂಕರು ಚಂಗಪ್ಪ, ಮತ್ರಂಡ ಅಪ್ಪಚ್ಚು, ಕೋಟ್ರಂಗಡ ಬೋಪಯ್ಯ, ಬಾಚಮಾಡ ಜನಾರ್ಧನ್, ಕಾಟಿಮಾಡ ಜಿಮ್ಮಿ ಅಣ್ಣಯ್ಯ, ಕಲ್ಲೇಂಗಡ ಶಂಭು ಗಣಪತಿ, ಪುಚ್ಚಿಮಾಡ ಹರೀಶ್ ದೇವಯ್ಯ, ಮದ್ರೀರ ಮುತ್ತಪ್ಪ, ಪೆಮ್ಮಂಡ ಪ್ರಸಾದ್, ಮನೆಯಪಂಡ ಪೂವಯ್ಯ, ಚಕ್ಕೇರ ಸುಬ್ಬಯ್ಯ, ಕಾಟಿಮಾಡ ನಂಜಪ್ಪ, ಚಿರಿಯಪಂಡ ಹ್ಯಾರಿ ದೇವಯ್ಯ, ಸೋಮಯ್ಯ ಮತ್ತಿತರರು ಭಾಗವಹಿಸಿದ್ದರು.