ಶ್ರೀಮಂಗಲ, ಜ. 1: ಕೊಡವ ಸಮಾಜಗಳು ಕೊಡವರ ಏಳಿಗೆ, ಸಮಾಜಿಕ, ಆರ್ಥಿಕ, ರಾಜಕೀಯ, ಸಾಂಸ್ಕøತಿಕ, ಹಿತಾಸಕ್ತಿ ಮತ್ತು ಅಸ್ಥಿತ್ವದ ಬಗ್ಗೆ ಗಂಭೀರವಾಗಿ ಚಿಂತಿಸುವ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ವೀರಾಜಪೇಟೆ ವಿಧಾನ ಸಭಾ ಕ್ಷೇತ್ರದಿಂದ ಎಲ್ಲಾ ರಾಜಕೀಯ ಪಕ್ಷಗಳು ಕೊಡವ ಅಭ್ಯರ್ಥಿಗಳಿಗೆ ಟಿಕೆಟ್ ನೀಡುವಂತೆ ಪೊನ್ನಂಪೇಟೆ ಕೊಡವ ಸಮಾಜದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ನೀಡಿರುವ ಹೇಳಿಕೆ ಸ್ವಾಗತಾರ್ಹವಾಗಿದೆ ಎಂದು ಪೊನ್ನಂಪೇಟೆಯಲ್ಲಿ ನಡೆದ ಸಭೆಯಲ್ಲಿ ಪ್ರಮುಖರು ಅಭಿಪ್ರಾಯ ಪಟ್ಟಿದ್ದಾರೆ.
ಈ ಬಗ್ಗೆ ಎಫ್‍ಕೆಸಿಸಿಐನ ಪ್ರವಾಸೋದ್ಯಮ ವಿಭಾಗದ ಉಪಾಧ್ಯಕ್ಷ ಕಾಡ್ಯಮಾಡ ಬಿ.ಗಿರೀಶ್ ಗಣಪತಿಯವರು ನೀಡಿರುವ ಹೇಳಿಕೆಗೆ ತಿರುಗೇಟು ನೀಡಿದ ಪ್ರಮುಖರು, ಕೊಡವ ಸಮಾಜಗಳು ಕಲ್ಯಾಣ ಮಂಟಪಕ್ಕೆ ಸೀಮಿತವಲ್ಲ. ಕಳೆದ 60 ವರ್ಷದಿಂದ ವೀರಾಜಪೇಟೆ ವಿಧಾನ ಸಭಾ ಕ್ಷೇತ್ರದಿಂದ ಕೊಡವರಿಗೆ ಪ್ರಾತಿನಿಧ್ಯ ದೊರೆಯದೆ ವಂಚಿತರಾಗಿದ್ದು, ಕೊಡವರಿಗೆ ಪ್ರಾತಿನಿಧ್ಯ ನೀಡಬೇಕು ಎಂದು ಕೇಳುವ ಹಕ್ಕು ಕೊಡವ ಸಮಾಜಕ್ಕೆ ಇದೆ ಎಂದು ಸಮರ್ಥಿಸಿದರು.
ಇತ್ತೀಚಿನ ಹಲವು ವರ್ಷಗಳಲ್ಲಿ ಕೊಡವರ ವಿರುದ್ಧ ನೇರ ಸುಳ್ಳು ಆರೋಪಗಳು, ಬಾಲಿಷವಾದ ಹೇಳಿಕೆಗಳ ಮೂಲಕ ಭಾವನೆಗೆ ಧಕ್ಕೆ ಉಂಟುಮಾಡುವ ಸಂದರ್ಭದಲ್ಲಿ ಇಂತಹ ಸಮಾಜ ಸುಧಾರಕರು ಎನಿಸಿಕೊಂಡವರು ಎಲ್ಲಿದ್ದರು ಎಂದು ಪ್ರಶ್ನಿಸಬೇಕಾಗುತ್ತದೆ; ಹಾಗೆಯೇ ಕೊಡಗು ನಾನಾ ಸಮಸ್ಯೆಗಳನ್ನು ಎದುರಿಸುತ್ತಿದ್ದಾಗ ಹಾಗೂ ಅದರ ವಿರುದ್ಧ ಕೊಡಗಿನ ಜನತೆ ಧ್ವನಿ ಎತ್ತಿ ಪ್ರತಿಭಟಿಸಿದಾಗ ಕೊಡಗಿನ ಬಗೆಗಿನ ಕಾಳಜಿ ಎಲ್ಲಿ ಹುದುಗಿಕೊಂಡಿತ್ತು ಎಂಬದನ್ನು ತಿಳಿಸಲಿ ಎಂದು ಕಿಡಿಕಾರಿದರು.
ಪ್ರವಾಸೋದ್ಯಮದಿಂದ ಕೊಡಗು ಕಸದ ಕೊಂಪೆಯಾಗುತ್ತಿದ್ದು ಹಾಗೂ ಕೊಡಗಿನ ಪ್ರಶಾಂತ ವಾತಾವರಣ, ಪರಿಸರ ಕಲುಷಿತವಾಗುತ್ತಿದ್ದು ಈ ಬಗ್ಗೆ ಗಮನ ಹರಿಸುವದನ್ನು ಬಿಟ್ಟು ಇವರಿಗೆ ಇವರ ಸ್ವಾರ್ಥ ಸಾಧನೆಗಾಗಿ ತಮ್ಮ ರಾಜಕೀಯ ಮುಖಂಡನನ್ನು ಓಲೈಕೆ ಮಾಡುತ್ತಾ ಕೊಡವ ಜನಾಂಗದ ಹಿತಾಸಕ್ತಿಯನ್ನು ಬಲಿಕೊಡುವದು ಬೇಡ ಎಂದು ಎಚ್ಚರಿಸಿದರು.
ಈ ಸಂದರ್ಭ ವೇದಿಕೆಯಲ್ಲಿ ಗೋಣಿಕೊಪ್ಪದ ವಾಣಿಜ್ಯೋದ್ಯಮಿ ಚೊಟ್ಟೆಯಂಡಮಾಡ ಡಿ.ಮಾದಪ್ಪ, ಬಾಳೆಲೆಯ ಬೆಳೆಗಾರರಾದ ಆದೇಂಗಡ ಶೇಖರ್, ನಾಲ್ಕೇರಿಯ ಬೆಳೆಗಾರ ಮುಕ್ಕಾಟಿರ ಪ್ರವೀಣ್ ಭೀಮಯ್ಯ, ಪೊನ್ನಂಪೇಟೆಯ ಬೆಳೆಗಾರ ಕಳ್ಳಚಂಡ ರಾಬಿನ್ ಸುಬ್ಬಯ್ಯ ಉಪಸ್ಥಿತರಿದ್ದು ಮಾತನಾಡಿದರು.