ಶ್ರೀಮಂಗಲ, ಜ. 1: ಸಿದ್ದಾಪುರ ಸಮೀಪದ ಬಾಡಗ ಬಾಣಂಗಾಲದ ಬಜೆಕೊಲ್ಲಿಯಲ್ಲಿ 5 ಜಾನುವಾರು ಗಳನ್ನು ಹುಲಿ ಧಾಳಿ ನಡೆಸಿ ಸಾಯಿಸಿ ತಿಂದಿರುವ ಘಟನೆ ಮಾಸುವ ಮುನ್ನವೇ ಮತ್ತೆರಡು ಕರುಗಳನ್ನು ಹುಲಿಧಾಳಿ ಮಾಡಿ ತಿಂದು ಹಾಕಿರುವ ಘಟನೆ ಇಲ್ಲಿಗೆ ಸಮೀಪದ ಕುಮಟೂರು-ಪೇರ್ಮಾಡು ಗ್ರಾಮದಲ್ಲಿ ನಡೆದಿದೆ.ಡಿ. 31ರ ರಾತ್ರಿ ಗ್ರಾಮದ ಪ್ರಗತಿಪರ ರೈತ ಪೆಮ್ಮಣಮಾಡ ರಮೇಶ್ ಮನೆ ಸಮೀಪ ಕಟ್ಟಿದ್ದ ಒಂದೂವರೆ ವರ್ಷದ ಕರುವಿನ ಮೇಲೆ ಹುಲಿ ಧಾಳಿ ನಡೆಸಿದ್ದು, ಕರುವನ್ನು ಎಳೆದೊಯ್ದು ಭಾಗಶಃ ತಿಂದು ಹಾಕಿದೆ. ಇದೇ ಗ್ರಾಮದಲ್ಲಿ ಮತ್ತೊಂದು ಪ್ರಕರಣ ನಡೆದಿದ್ದು, ಸುಮಾರು 2 ವರ್ಷದ ಕರುವನ್ನು ಹುಲಿ ಧಾಳಿ ನಡೆಸಿ, ರಸ್ತೆಯಲ್ಲಿಯೇ ಅರ್ಧಭಾಗ ತಿಂದಿರುವದು ಗೋಚರಿಸಿದೆ. ಆದರೆ ಈ ಕರುವಿನ ವಾರಸುದಾರರು ಯಾರೆಂದು ತಿಳಿದು ಬಂದಿಲ್ಲ. ಈ ರಸ್ತೆಯಲ್ಲಿ ಕೇರಳಕ್ಕೆ ಜಾನುವಾರುಗಳನ್ನು ಅಕ್ರಮವಾಗಿ ಸಾಗಿಸುವಾಗ ತಪ್ಪಿ ಹೋದ ಕರು ಇದಾಗಿರಬಹುದೆಂದು ಗ್ರಾಮಸ್ಥರು ಸಂಶಯ ವ್ಯಕ್ತಪಡಿಸಿದ್ದಾರೆ.
ಪೆಮ್ಮಣಮಾಡ ರಮೇಶ್ ಅವರ ಕರು ಕಾಣದೆ ಇರುವಾಗ ತಾ. 1 ರಂದು ಬೆಳಿಗ್ಗೆ ಹುಡುಕುತ್ತಿದ್ದಾಗ ಹುಲಿ ಧಾಳಿಗೆ ತುತ್ತಾಗಿರುವದು ಗೋಚರಿಸಿದೆ.
ಹುಲಿಯು ಕರುವನ್ನು ತಿಂದು ಉಳಿದ ಭಾಗ ಇಟ್ಟುಕೊಂಡು ಮನೆಯ ಸಮೀಪದ ಅಡಿಕೆ ತೋಟದಲ್ಲಿಯೇ ಇದ್ದದ್ದನ್ನು ಕಾರ್ಮಿಕರು ಕಂಡು ಭಯಭೀತರಾಗಿದ್ದು, ಸ್ಥಳಕ್ಕೆ ಶ್ರೀಮಂಗಲ ಅರಣ್ಯ ಇಲಾಖೆಯ ಆರ್‍ಎಫ್‍ಓ ವೀರೇಂದ್ರ ಮತ್ತು ಸಿಬ್ಬಂದಿಗಳು ಮಹಜರು ನಡೆಸಿದರು.