ಸಿದ್ದಾಪುರ, ಜ. 1: ಕಳೆದ ಒಂದು ವಾರಗಳ ಹಿಂದೆ ವ್ಯಾಘ್ರನ ಧಾಳಿಗೆ ಸಿಲುಕಿ 5 ಜಾನುವಾರುಗಳು ಮೃತಪಟ್ಟಿರುವದನ್ನು ಪಶು ವೈದ್ಯಾಧಿಕಾರಿಗಳು ದೃಢಪಡಿಸಿದ್ದಾರೆ. ಒಂದು ವಾರಗಳ ಹಿಂದೆ ಸಿದ್ದಾಪುರ ಸಮೀಪದ ಬಾಡಗ ಬಾಣಂಗಾಲದ ಬಜೆಕೊಲ್ಲಿ ನಿವಾಸಿಯಾಗಿರುವ ಪಿ. ಮೊಹಮ್ಮದ್ ಎಂಬವರಿಗೆ ಸೇರಿದ ಹಾಲು ಕರೆಯುವ ಹಸು ಸೇರಿದಂತೆ 5 ಜಾನುವಾರುಗಳು ಮೇಯಲು ತೆರಳಿದ ಸಂದರ್ಭದಲ್ಲಿ ಬಜೆಕೊಲ್ಲಿ ಆಲೇತೋಪು ಕಾಫಿ ತೋಟದ ಒಳಗೆ ಹುಲಿ ಧಾಳಿ ನಡೆಸಿ ತಿಂದಿರುವ ಸ್ಥಳಕ್ಕೆ ಸಿದ್ದಾಪುರ ಪಶು ವೈದ್ಯಾಧಿಕಾರಿ ಡಾ. ಎ.ಬಿ. ತಮ್ಮಯ್ಯ ಭೇಟಿ ನೀಡಿ ಪರಿಶೀಲಿಸಿದರು.

ಜಾನುವಾರುಗಳನ್ನು ಸಾಯಿಸಿ ತಿಂದಿರುವ ಬಗ್ಗೆ ಅರಣ್ಯ ಇಲಾಖಾಧಿಕಾರಿಗಳು ಮಾಹಿತಿ ನೀಡುವಂತೆ ಆದೇಶ ನೀಡಿದ್ದರು.

ಜನವಸತಿ ಪ್ರದೇಶದಲ್ಲಿ ಕಾಣಿಸಿಕೊಳ್ಳುತ್ತಿರುವ ಹುಲಿಯನ್ನು ಅರಣ್ಯ ಇಲಾಖೆ ಕೂಡಲೇ ಸೆರೆಹಿಡಿಯಬೇಕೆಂದು ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಹಾಗೂ ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಪಿ.ವಿ. ಜಾನ್ಸನ್ ಅರಣ್ಯ ಇಲಾಖೆಯನ್ನು ಮನವಿ ಮಾಡಿದ್ದಾರೆ. ವರದಿ: ವಾಸು ಎ.ಎನ್.ಪಾರಾದ ವೈದ್ಯಾಧಿಕಾರಿ..!

ಜಾನುವಾರುಗಳನ್ನು ಹುಲಿಯು ಧಾಳಿ ನಡೆಸಿ ಸಾಯಿಸಿ ತಿಂದಿರುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲು ಪಶು ವೈದ್ಯಾಧಿಕಾರಿ ಡಾ. ಎ.ಬಿ. ತಮ್ಮಯ್ಯ, ಹಾಗೂ ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಪಿ.ವಿ. ಜಾನ್ಸನ್, ಜಾನುವಾರುಗಳ ಮಾಲೀಕರ ಮಗ ಮಹಮ್ಮದ್ ಹಾಗೂ ಅವರ ಸಂಬಂಧಿ ಸೇರಿ ನಾಲ್ವರು ಕಾಫಿ ತೋಟದ ಒಳಗೆ ಜಾನುವಾರುಗಳ ಮೂಳೆಗಳನ್ನು ಪರಿಶೀಲಿಸುತ್ತಿರುವ ಸಂದರ್ಭ ಕಾಫಿ ತೋಟದಿಂದ ಏಕಾಏಕಿ ಒಂಟಿ ಸಲಗವೊಂದು ದಿಢೀರನೆ ಪ್ರತ್ಯಕ್ಷಗೊಂಡು ಹುಲಿಯ ಅವಶೇಷಗಳನ್ನು ಪರಿಶೀಲನೆ ಮಾಡುತ್ತಿದ್ದ ನಾಲ್ವರನ್ನು ಅಟ್ಟಾಡಿಸಿಕೊಂಡು ಬಂದ ಕಾಡಾನೆಯು ಅಂದಾಜು ನೂರು ಮೀಟರ್ ದೂರದವರೆಗೆ ಓಡಿಸಿದೆ ಅಪಾಯವನ್ನು ಅರಿತ ನಾಲ್ವರು ಎದ್ದು ಬಿದ್ದು ಓಡಿ ಪ್ರಾಣಾಪಾಯದಿಂದ ಕೂದಲೆಳೆಯ ಅಂತರದಿಂದ ಪಾರಾಗಿದ್ದಾರೆ.