ಸೋಮವಾರಪೇಟೆ,ಜ.1: ಇದೊಂದು ವಿಶೇಷ ಕಾರ್ಯಕ್ರಮ, ವಿಶೇಷ ಹುಟ್ಟುಹಬ್ಬ.., ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳು, ಮುಮ್ಮಕ್ಕಳಿಂದ ಹುಟ್ಟುಹಬ್ಬದ ಶುಭಾಶಯ ಪಡೆದುಕೊಂಡ ಶತಾಯುಷಿಯ ಸಂಭ್ರಮ. ಐದು ತಲೆಮಾರು ಕಂಡಿರುವ ಹಿರಿಯ ಜೀವಕ್ಕೆ ಹರುಷ ತಂದ ಕಾರ್ಯಕ್ರಮವೊಂದು ಸಮೀಪದ ಹಾನಗಲ್ಲು ಶೆಟ್ಟಳ್ಳಿಯಲ್ಲಿ 2017ರ ಕೊನೆಯ ದಿನದಲ್ಲಿ ನಡೆಯಿತು.
ಹಾನಗಲ್ಲು ಶೆಟ್ಟಳ್ಳಿ ಗ್ರಾಮದ ಗಂಗಮ್ಮ ಅವರು 101ನೇ ವರ್ಷಕ್ಕೆ ಅಡಿಯಿಟ್ಟ ಡಿ.31ನ್ನು ಕುಟುಂಬಸ್ಥರು ವಿಶೇಷವಾಗಿ ಆಚರಿಸಿದರು. ಮನೆಯ ಮುಂಭಾಗ ಶಾಮಿಯಾನ ಹಾಕಿ, ಹಿರಿಯ ಜೀವಕ್ಕೆ ಹೊಸ ಸೀರೆ ಉಡಿಸಿ, ಶಾಲು ಹಾರ ಸಹಿತ ಸನ್ಮಾನಿಸಿ, ಕೇಕ್ ಕತ್ತರಿಸಿ
101ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ ಗಂಗಮ್ಮ ಅವರ ಹುಟ್ಟುಹಬ್ಬವನ್ನು ಕುಟುಂಬಸ್ಥರು ಸಾಮೂಹಿಕವಾಗಿ ಆಚರಿಸಿದರು. ಸುಮಾರು 70 ಮಂದಿ ತಮ್ಮದೇ ಬಳಗದ ಸದಸ್ಯರೊಂದಿಗೆ ಕಾಲ ಕಳೆದ ಹಿರಿಯ ಜೀವದ ಮುಖದಲ್ಲಿ ನೆಮ್ಮದಿಯ ಭಾವ ಕಂಡುಬಂತು.
ಹಾನಗಲ್ಲು ಶೆಟ್ಟಳ್ಳಿ ಗ್ರಾಮದ ದಿ. ಅಪ್ಪಯಾಚಾರ್ ಅವರ ಪತ್ನಿ ಗಂಗಮ್ಮ ಅವರು ಇಂದಿಗೂ ಪಾದರಸದಂತೆ ಓಡಾಡಿಕೊಂಡಿದ್ದು, ಆರೋಗ್ಯ ವಂತರಾಗಿದ್ದಾರೆ. ತಮ್ಮ 98ನೇ ವಯಸ್ಸಿನಲ್ಲಿ ಒಮ್ಮೆ ಮಾತ್ರ ಆಸ್ಪತ್ರೆಗೆ ತೆರಳಿ ಚುಚ್ಚುಮದ್ದು ಪಡೆದಿದ್ದನ್ನು ಹೊರತುಪಡಿಸಿದರೆ ಮತ್ತೆಂದೂ ಅವರು ಆಸ್ಪತ್ರೆಯ ಬಾಗಿಲು ಹತ್ತಿದವರಲ್ಲ. ‘ಶಕ್ತಿ’ಯೊಂದಿಗೆ ತಮ್ಮ ಆರೋಗ್ಯದ ಗುಟ್ಟನ್ನು ಗಂಗಮ್ಮ ಅವರು ರಟ್ಟು ಮಾಡಿದರು!
ತಮ್ಮ 15ನೇ ವಯಸ್ಸಿನವರೆಗೂ ತಣ್ಣೀರು ಕುಡಿಯುತ್ತಿದ್ದ ಅವರು ನಂತರ ಬಿಸಿ ನೀರು ಕುಡಿಯಲು ಪ್ರಾರಂಭಿಸಿದರು. ಇಂದಿಗೂ ತಣ್ಣೀರು ಅವರಿಗೆ ನಿಷಿದ್ಧ. ಹಿಂದೆ ಗೆಡ್ಡೆ, ಗೆಣಸು, ಎಲಗ ಹಿಟ್ಟು, ಇಬ್ಬನಿ ಹಿಟ್ಟು, ಮನೆಯಲ್ಲಿಯೇ ಬೆಳೆದ ತರಕಾರಿಗಳನ್ನು ಸೇವಿಸುತ್ತಿದ್ದರು. ಇತ್ತೀಚಿನ ಕೆಲ ವರ್ಷಗಳಿಂದ ಆಧುನಿಕ ಊಟೋಪಚಾರಕ್ಕೆ ಒಳಗಾದರೂ ಸಹ ಮಧ್ಯಾಹ್ನದ ಊಟ ಮಾಡುವದಿಲ್ಲ.
ತಮ್ಮ 98ನೇ ವರ್ಷದಲ್ಲಿ ಮನೆಯ ಅಂಗಳದಲ್ಲಿ ಬಿದ್ದ ಗಂಗಮ್ಮ ಅವರ ತಲೆಗೆ ಅಲ್ಪ ಪೆಟ್ಟಾಗಿತ್ತು. ಆ ಸಂದರ್ಭ ಮಾತ್ರ ಆಸ್ಪತ್ರೆಗೆ ತೆರಳಿ ಚುಚ್ಚುಮದ್ದು ಪಡೆದುಕೊಂಡಿದ್ದನ್ನು ಹೊರತುಪಡಿಸಿದರೆ ಮತ್ತೆಂದೂ ಅವರು ಅನಾರೋಗ್ಯವೆಂದು ಹೇಳಿಕೊಂಡು ಆಸ್ಪತ್ರೆಗೆ ಎಡತಾಕಿದವರಲ್ಲ.
ಇಂದಿಗೂ ಗ್ರಾಮದ ಸುತ್ತಮುತ್ತಲು ಗಂಗಮ್ಮ ಅವರ ಹೆಸರು ಜನಜನಿತ. ಇದುವರೆಗೂ 200ಕ್ಕೂ ಅಧಿಕ ಗರ್ಭಿಣಿಯರಿಗೆ ಹೆರಿಗೆ ಮಾಡಿಸಿರುವ ಗಂಗಮ್ಮ ಅವರು ಕೆಲವೊಂದು ಖಾಯಿಲೆಗಳಿಗೆ ನಾಟಿ ಮದ್ದು ನೀಡುತ್ತಾರೆ. ಜನ-ಜಾನುವಾರುಗಳಿಗೆ ರೋಗಗಳು ತಗುಲಿದರೆ ಗಂಗಮ್ಮ ಅವರ ಬಳಿ ಪರಿಹಾರವಿರುತ್ತದೆ ಎಂದು ಗ್ರಾಮಸ್ಥರು ತಿಳಿಸುತ್ತಾರೆ.
ಅಡುಗೆ ಕೆಲಸ, ಮನೆ ಕೆಲಸವನ್ನು ತಾವೇ ಮಾಡಿಕೊಳ್ಳುತ್ತಾರೆ. ಕಣ್ಣಿನ ದೃಷ್ಟಿಯೂ ಸೂಕ್ಷ್ಮವಾಗಿದ್ದು, ಸೂಜಿಗೆ ದಾರ ಪೋಣಿಸುವಷ್ಟು ನಿಖರವಾಗಿದೆ. ಶತಾಯುಷಿ ಗಂಗಮ್ಮ ಅವರ ಆಯಸ್ಸು-ಆರೋಗ್ಯ ಇನ್ನಷ್ಟು ವೃದ್ಧಿಸಲಿ ಎಂದು ಎಲ್ಲರೂ ಶುಭಹಾರೈಸೋಣ.
- ವಿಜಯ್ ಹಾನಗಲ್