ಸೋಮವಾರಪೇಟೆ,ಜ.1: ಮಂದಿರ, ಮಸೀದಿ, ಚರ್ಚ್ಗಳಿಂದ ಸಮಾಜದಲ್ಲಿ ಸಾಮಾಜಿಕ ಸಾಮರಸ್ಯ ವೃದ್ಧಿಸುತ್ತದೆ ಎಂದು ಮಂಗಳೂರಿನ ಕಿಲ್ಲೂರು ಮದ್ರಸಾದ ಧರ್ಮಗುರುಗಳಾದ ಅಸ್ಸಯ್ಯದ್ ಶಿಹಾಬುದ್ದೀನ್ ಅಲ್ ಹೈದ್ರೋಸಿ ಅಭಿಪ್ರಾಯಿಸಿದರು. ಸಮೀಪದ ಹೊಸತೋಟದಲ್ಲಿ ನೂತನವಾಗಿ ಪುನರ್ ನಿರ್ಮಾಣಗೊಂಡ ಹಿದಾಯತುಲ್ ಇಸ್ಲಾಂ ಮದರಸಾವನ್ನು ಉದ್ಘಾಟಿಸಿ ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿದ್ಯಾಕೇಂದ್ರಗಳು ಧಾರ್ಮಿಕ ತಿಳುವಳಿಕೆ ನೀಡುವ ಸಂಸ್ಥೆಗಳಾಗಿದ್ದು, ಮಕ್ಕಳಿಗೆ ಧಾರ್ಮಿಕ ಜ್ಞಾನದ ಅವಶ್ಯಕತೆ ಇದೆ. ಸಮಾಜದಲ್ಲಿ ಇತರ ಧರ್ಮದವರೊಂದಿಗೆ ಅನ್ಯೋನ್ಯವಾಗಿ ಬಾಳುವ ಮನೋಭಾವವನ್ನು ಮದರಸಾಗಳು ಮೂಡಿಸುತ್ತಿವೆ ಎಂದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಸ್ವೈಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಶೀದ್ ಝೈನಿ ಮಾತನಾಡಿ, ಪ್ರತಿ ಧರ್ಮವೂ ಸಾಮಾಜಿಕ ಶಾಂತಿಯನ್ನೇ ಬೋಧಿಸುತ್ತವೆ. ಮದರಸಾಗಳಲ್ಲಿ ನಡೆಯುವ ಪ್ರಾರ್ಥನೆಗಳೂ ಸಾಮಾಜಿಕ ನೆಮ್ಮದಿಯನ್ನು ಸಾರುವದೇ ಆಗಿದೆ. ಮದರಸಗಳಲ್ಲಿ ಕಲಿತವರು ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣ ತ್ಯಾಗವನ್ನೇ ಮಾಡಿದ್ದಾರೆ ಎಂದ ಅವರು, ನಮ್ಮೊಳಗಿನ ಎಲ್ಲಾ ಸಮಸ್ಯೆಗಳಿಗೂ ಮಾತುಕತೆಯೇ ಪರಿಹಾರ ಆಗಿದೆ ಎಂದರು.
ಸಭಾ ಕಾರ್ಯಕ್ರಮವನ್ನು ಮಾಜಿ ಶಾಸಕ ಕೆ.ಎಂ. ಇಬ್ರಾಹಿಂ ಉದ್ಘಾಟಿಸಿದರು. ವೇದಿಕೆಯಲ್ಲಿ ಜಮಾತ್ ಅಧ್ಯಕ್ಷ ಸೈದು ಹಾಜಿ, ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಕೆ.ಎ. ಯಾಕೂಬ್, ಪ್ರಮುಖರಾದ ರಾಜಾರಾವ್, ಸ್ವಾಗತ ಸಮಿತಿ ಅಧ್ಯಕ್ಷ ಓ.ಎಂ. ಕೋಯ,ಜಿ.ಪಂ. ಸದಸ್ಯ ಲತೀಫ್, ವಕ್ಫ್ ಬೋರ್ಡ್ ಮಾಜಿ ಅಧ್ಯಕ್ಷ ಎ.ಬಿ. ಉಮ್ಮರ್, ಹಿರಿಯ ನಾಗರಿಕರ ವೇದಿಕೆ ಅಧ್ಯಕ್ಷ ಎಂ.ಟಿ. ದಾಮೋದರ್, ಪ್ರಮುಖರಾದ ಹೆಚ್.ಸಿ. ಚಂಗಪ್ಪ, ಹೇಮಂತ್ಕುಮಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.