ಕುಶಾಲನಗರ, ಜ. 1: ಕೆಲವು ವರ್ಷಗಳ ಕಾಲ ಸೋಮವಾರಪೇಟೆ ಸುಬೇದಾರರ ಆಡಳಿತದೊಂದಿಗೆ ಕಳೆದ 6 ದಶಕಗಳ ಕಾಲ ಕುಶಾಲನಗರ ಪಟ್ಟಣದ ಬೆಳವಣಿಗೆಯಲ್ಲಿ ಪಾತ್ರ ವಹಿಸಿದ ಪಟ್ಟಣ ಪಂಚಾಯ್ತಿ ಕಛೇರಿ ಕಟ್ಟಡ ತೆರವುಗೊಳ್ಳುವ ದಿನಗಳು ಸಮೀಪಿಸುತ್ತಿದೆ. ಕುಶಾಲನಗರ ಪಟ್ಟಣ ಪಂಚಾಯ್ತಿ ಕಛೇರಿಯ ಹಳೆಯ ಕಟ್ಟಡ ಸಧ್ಯದಲ್ಲಿಯೇ ನೆಲಸಮಗೊಂಡು ಈ ಸ್ಥಳದಲ್ಲಿ ಬೃಹತ್ ವಾಣಿಜ್ಯ ಸಂಕೀರ್ಣವೊಂದು ತಲೆ ಎತ್ತುವ ಹಿನ್ನಲೆಯಲ್ಲಿ ಪಂಚಾಯಿತಿ ಕಛೇರಿ ಬೇರೆಡೆಗೆ ಸ್ಥಳಾಂತರಗೊಳ್ಳುವದ ರೊಂದಿಗೆ ಹಲವು ನೆನಪುಗಳನ್ನು ಹೊತ್ತಿರುವ ಈ ಕಟ್ಟಡ ಶೀಘ್ರದಲ್ಲೇ ನೆಲಸಮವಾಗಲಿದೆ.

57 ವರ್ಷಗಳ ಕಾಲ ಕುಶಾಲನಗರ ಪಟ್ಟಣವನ್ನು ಆಳಿದ ಸೋಮವಾರಪೇಟೆ ಸುಬೇದಾರರು ಕೊನೆಯ 7 ವರ್ಷಗಳ ಆಡಳಿತವನ್ನು ಇದೇ ಕಟ್ಟಡದಲ್ಲಿ ನಡೆಸಿದ ದಾಖಲೆ ಗಳನ್ನು ಕಾಣಬಹುದು. ರಾಜ್ಯದ ಮುಖ್ಯಮಂತ್ರಿಗಳಾಗಿ ಆಡಳಿತ ಮಾಡಿದ ಮುತ್ಸದ್ದಿ ರಾಜಕಾರಣಿ ಆರ್.ಗುಂಡೂರಾವ್ ಕೂಡ ಇದೇ ಕಟ್ಟಡದಲ್ಲಿ 9 ವರ್ಷಗಳ ಕಾಲ ಪುರಸಭೆಯ ಅಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸಿದ್ದಾರೆ. 1964 ರಲ್ಲಿ ಜನಪ್ರತಿನಿಧಿಗಳ ಆಡಳಿತದ ಚುಕ್ಕಾಣಿಗೆ ಹಸ್ತಾಂತರಗೊಂಡ ಕುಶಾಲನಗರ ಪಟ್ಟಣ ಕೆ.ಟಿ.ಸುಬ್ಬಯ್ಯ ಅವರ ಆಡಳಿತ ತೆಕ್ಕೆಗೆ ಬಂದಿದ್ದು ಇದೇ ಕಟ್ಟಡದಲ್ಲಿ. ತದನಂತರ ನಿರಂತರವಾಗಿ ಜನಪ್ರತಿನಿಧಿಗಳ ಆಳ್ವಿಕೆಗೆ ಕುಶಾಲನಗರ ಒಳಪಟ್ಟಿದ್ದರೂ ಕೆಲವು ವರ್ಷಗಳ ಕಾಲ ಅಧಿಕಾರಿಗಳ ಆಳ್ವಿಕೆಗೆ ಒಳಪಟ್ಟ ಮಾಹಿತಿಗಳೂ ಇಲ್ಲಿದೆ.

ಸುಮಾರು 8 ಅವಧಿಗಳ ಕಾಲದ ಆಡಳಿತದಲ್ಲಿ ಮಂಡಲ ಪಂಚಾಯ್ತಿ, ಪುರಸಭೆಯಾಗಿ ಪರಿವರ್ತನೆಗೊಂಡ ಕುಶಾಲನಗರ ಪಟ್ಟಣ 2002 ರ ಅಕ್ಟೋಬರ್‍ನಲ್ಲಿ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೆ ಏರಿತು. ತದನಂತರ ಇದುವರೆಗೆ 15 ವರ್ಷಗಳ ಅವಧಿಯಲ್ಲಿ 12 ಮುಖ್ಯಾ ಧಿಕಾರಿಗಳನ್ನು ಕಾಣುವದರೊಂದಿಗೆ ಇದೀಗ ಈ ಪಂಚಾಯ್ತಿಯ ಹಳೆಯ ಕಟ್ಟಡ ತಾ. 5 ರಂದು ತೆರವು ಗೊಳ್ಳಲಿದ್ದು, ಸದ್ಯ ತಾತ್ಕಾಲಿಕ ಕಟ್ಟಡವೊಂದಕ್ಕೆ ಕಚೇರಿಗಳು ಸ್ಥಳಾಂತರಗೊಳ್ಳಲಿವೆ.

ಪಟ್ಟಣದ ಹೃದಯ ಭಾಗದಲ್ಲಿ 1957 ರಲ್ಲಿ ನಿರ್ಮಾಣಗೊಂಡು ಹಲವು ಆರೋಪ-ಪ್ರತ್ಯಾರೋಪ ಹಾಗೂ ಹಗರಣಗಳೊಂದಿಗೆ ರಾಜಕೀಯ ಏರುಪೇರುಗಳಿಗೆ ಸಾಕ್ಷಿಯಾದ ಈ ಕಟ್ಟಡ ಕುಶಾಲನಗರದ ಅತಿ ವೇಗದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದರೆ ತಪ್ಪಾಗಲಾರದು. ಇದೀಗ ರೂ. 5 ಕೋಟಿ ವೆಚ್ಚದಲ್ಲಿ ಈ ಆವರಣದಲ್ಲಿ ಬೃಹತ್ ವಾಣಿಜ್ಯ ಸಂಕೀರ್ಣ ತಲೆ ಎತ್ತಲಿದ್ದು ಸರಕಾರ ಯೋಜನೆಗೆ ಅನು ಮೋದನೆ ನೀಡಿದೆ.

- ಚಂದ್ರಮೋಹನ್