ಸುಂಟಿಕೊಪ್ಪ, ಜ. 1: ಆಡಳಿತಶಾಹಿ ವ್ಯವಸ್ಥೆಯಲ್ಲಿ ನಡೆಯುತಿರುವ ಭ್ರಷ್ಟಾಚಾರವನ್ನು ತೊಲಗಿಸಿ ಬಡ ವರ್ಗದವರಿಗೆ ನ್ಯಾಯಯುತವಾಗಿ ಸಲ್ಲಿಸಬೇಕಾದ ಮೂಲಭೂತ ಸೌಲಭ್ಯ ಸಿಗುವಂತಾಗಬೇಕು ಎಂದು ಮಾಜಿ ಸಚಿವರೂ ಜೆಡಿಎಸ್ ಮುಖಂಡರಾದ ಬಿ.ಎ.ಜೀವಿಜಯ ಪ್ರತಿಪಾದಿಸಿದರು. ಮಾದಾಪುರದ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಬ್ಯಾಂಕ್‍ನ ಸಭಾಂಗಣದಲ್ಲಿ ಹೋಬಳಿ ಮಟ್ಟದ ಜಾತ್ಯಾತೀತ ಜನತಾದಳ ಪಕ್ಷದ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕೊಡಗು ಜೆಡಿಎಸ್ ಅಧ್ಯಕ್ಷ ಸಂಕೇತ ಪೂವಯ್ಯ ಮಾತನಾಡಿ, ಮತದಾರರು ಜೀವಿಜಯ ಅವರ ಗೆಲುವಿಗೆ ಹಾತೊರೆಯುತ್ತಿದ್ದಾರೆ. ಪಕ್ಷದ ಸಂಘಟನೆಗೆ ತೊಡಗಿಸಿಕೊಳ್ಳಬೇಕು ಎಂದರು. ರಾಜ್ಯ ಜೆಡಿಎಸ್‍ನ ಪರಿಶಿಷ್ಟ ಪಂಗಡದ ಉಪಾಧ್ಯಕ್ಷ ರಾಜಾರಾವ್ ಮಾತನಾಡಿ ಬಿಜೆಪಿ ಕಾಂಗ್ರೆಸ್ ಸರಕಾರದಿಂದ ಜನರು ಬೇಸತ್ತಿದ್ದು ಕುಮಾರಸ್ವಾಮಿ ನೇತೃತ್ವದ ಸರಕಾರ ಬರಬೇಕಾಗಿದೆ ಎಂದರು.

ವೇದಿಕೆಯಲ್ಲಿ ಜಿಲ್ಲಾ ಜೆಡಿಎಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಇಸಾಕ್‍ಖಾನ್, ಮಡಿಕೇರಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಕಾರ್ಯದರ್ಶಿ ಡಿ.ಎಸ್.ಚಂಗಪ್ಪ, ಜಿಲ್ಲಾ ಯುವ ಜನತಾದಳದ ಅಧ್ಯಕ್ಷ ಸಿ.ಎಲ್.ವಿಶ್ವ, ರಾಜ್ಯ ಜೆಡಿಎಸ್ ಉಪಾಧ್ಯಕ್ಷ ಕೊಡಗು ಜೆಡಿಎಸ್ ಉಸ್ತುವಾರಿ ಮನೋಜ್ ಬೋಪಯ್ಯ, ಮಾದಾಪುರ ಗ್ರಾ.ಪಂ.ಸದಸ್ಯರುಗಳಾದ ಎಂ.ಎಂ.ಬೆಳ್ಯಪ್ಪ, ಪ್ರಸನ್ನ ಕುಮಾರ, ಮಾದಾಪುರ ಜೆಡಿಎಸ್ ಅಧ್ಯಕ್ಷ ಮುಸ್ತಾಫ, ರಹಿಂ, ಲಿಂಗೇರಿ ಚಂದ್ರ, ಹಿಂದುಳಿದ ವರ್ಗದ ಜಿಲ್ಲಾಧ್ಯಕ್ಷ ಶಿವದಾಸ್ ಉಪಸ್ಥಿತರಿದ್ದರು.