ಸೋಮವಾರಪೇಟೆ, ಡಿ. 30: ಅಕ್ರಮ ಸಕ್ರಮ ಯೋಜನೆಯಡಿ ಅರ್ಜಿ ಸಲ್ಲಿಸಿರುವ ಫಲಾನುಭವಿಗಳಿಗೆ ಶೀಘ್ರವಾಗಿ ಹಕ್ಕುಪತ್ರ ವಿತರಿಸುವ ಸಂಬಂಧ ವಾರಕ್ಕೊಮ್ಮೆ ಸಭೆ ನಡೆಸಲಾಗುತ್ತಿದ್ದು, ವಾರದಲ್ಲಿ 50 ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಹೇಳಿದರು.

ಇಲ್ಲಿನ ತಾಲೂಕು ಕಚೇರಿಯಲ್ಲಿ ನಡೆದ ಅಕ್ರಮ ಸಕ್ರಮ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ, ನಂತರ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಿ ಅವರು ಮಾತನಾಡಿದರು.

ಕಳೆದ ಅನೇಕ ದಶಕಗಳಿಂದ ಜಾಗಕ್ಕೆ ಸೂಕ್ತ ದಾಖಲೆಯಿಲ್ಲದೇ ಸಾವಿರಾರು ಕೃಷಿಕರು ತೊಂದರೆ ಅನುಭವಿಸುತ್ತಿದ್ದರು. ಈ ಬಗ್ಗೆ ಸರ್ಕಾರದ ಗಮನ ಸೆಳೆದು ಆಡಳಿತಾತ್ಮಕ ತೊಡಕುಗಳು ನಿವಾರಣೆಯಾದ ನಂತರ ಇದೀಗ ಹಕ್ಕುಪತ್ರ ವಿತರಿಸಲಾಗುತ್ತಿದೆ. ಫಲಾನುಭವಿಗಳಿಗೆ ಶೀಘ್ರವಾಗಿ ದಾಖಲೆಗಳು ದೊರೆಯುವಂತಾಗಲು ವಾರಕ್ಕೊಮ್ಮೆ ಸಭೆ ನಡೆಸಿ ಅರ್ಜಿ ವಿಲೇವಾರಿ ಮಾಡಲಾಗುತ್ತಿದೆ ಎಂದು ರಂಜನ್ ಹೇಳಿದರು.

ಜಾಗಕ್ಕೆ ಹಕ್ಕುಪತ್ರ ಪಡೆದ ಫಲಾನುಭವಿಗಳು ಯಾರೂ ಸಹ ತಮ್ಮ ಜಾಗವನ್ನು ಮಾರಾಟ ಮಾಡಬಾರದು. ಕೃಷಿ ಕಾರ್ಯಕೈಗೊಂಡು ಆರ್ಥಿಕ ಸಬಲತೆ ಕಾಣಬೇಕು. ಸರ್ಕಾರಿ ಜಾಗದಲ್ಲಿ ಮನೆ ನಿರ್ಮಿಸಿಕೊಂಡಿರುವ ಮಂದಿಗೂ ದಾಖಲೆ ಪತ್ರ ನೀಡಲಾಗುತ್ತಿದ್ದು, ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.

ಈ ಸಂದರ್ಭ ಅಕ್ರಮ ಸಕ್ರಮ ಸಮಿತಿ ಸದಸ್ಯ ಹೆಚ್.ಸಿ. ನಾಗೇಶ್, ತಾಲೂಕು ತಹಶೀಲ್ದಾರ್ ಮಹೇಶ್, ಶಾಸಕರ ಆಪ್ತ ಸಹಾಯಕ ಆರ್.ಡಿ. ರವಿ ಸೇರಿದಂತೆ ಇತರರು ಉಪಸ್ಥಿತರಿದ್ದರು.