ಮಡಿಕೇರಿ, ಡಿ. 29: ಕೊಡಗು ಜಿಲ್ಲೆಯಲ್ಲಿ ಹೊಸ ವರ್ಷಾಚರಣೆ ಸಂದರ್ಭದಲ್ಲಿ ಕಾನೂನು - ಸುವ್ಯವಸ್ಥೆಗೆ ಯಾವದೇ ಧಕ್ಕೆಯಾಗದಂತೆ ಮುನ್ನೆಚ್ಚರಿಕೆ ವಹಿಸಲು ಜಿಲ್ಲಾ ಪೊಲೀಸ್ ಇಲಾಖೆ ಹಲವು ನಿಯಮಗಳನ್ನು ವಿಧಿಸಿ ಆದೇಶ ಹೊರಡಿಸಿದೆ. ಈ ಕುರಿತು ಮಾಧ್ಯಮಕ್ಕೆ ಮಾಹಿತಿ ನೀಡಿರುವ ಎಸ್ಪಿ ರಾಜೇಂದ್ರ ಪ್ರಸಾದ್ ಅವರು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚನೆ ನೀಡಿದ್ದಾರೆ.ಪಾಲಿಸಬೇಕಾದ ಕ್ರಮ*ತಾ. 31ರ ರಾತ್ರಿ ಆರಂಭವಾಗುವ ಹೊಸ ವರ್ಷಾಚರಣೆಯನ್ನು ಕೊಡಗು ಜಿಲ್ಲೆಯ ಹೊಟೇಲ್, ರೆಸ್ಟೋರೆಂಟ್, ಕ್ಲಬ್, ರೆಸಾರ್ಟ್‍ಗಳಲ್ಲು ಆಚರಿಸುವ ವೇಳೆ ಮದ್ಯ ಸರಬರಾಜು ಮಾಡುವ ನಿಗದಿತ ಸಮಯದೊಳಗೆ ಮಾತ್ರ ಮದ್ಯ ಸರಬರಾಜು ಮಾಡುವದು. ಮಧ್ಯರಾತ್ರಿ 12.30 ಗಂಟೆಯ ಒಳಗಾಗಿ ಎಲ್ಲಾ ಕಾರ್ಯಕ್ರಮಗಳನ್ನು ಕಡ್ಡಾಯವಾಗಿ ಮುಕ್ತಾಯ ಮಾಡುವದು.

* ಹೋಂ ಸ್ಟೇಗಳಲ್ಲಿ ಯಾವದೇ ರೀತಿಯ ಮದ್ಯ ಸರಬರಾಜು ಮಾಡಬಾರದು.

*ಹೊಸ ವರ್ಷ ಆಚರಣೆ ಸಂಬಂಧ ವಿಶೇಷ ಕಾರ್ಯಕ್ರಮವನ್ನು ನಡೆಸುವ ಹೊಟೇಲ್, ರೆಸ್ಟೋರೆಂಟ್, ಕ್ಲಬ್, ರೆಸಾರ್ಟ್ ಮತ್ತು ಸಂಘ ಸಂಸ್ಥೆಗಳು ಪೊಲೀಸ್ ಅಧೀಕ್ಷಕರ ಕಚೇರಿಯಿಂದ ಕಡ್ಡಾಯವಾಗಿ ಕಾರ್ಯಕ್ರಮ ನಡೆಸಲು ಅನುಮತಿಯನ್ನು ಪಡೆದುಕೊಳ್ಳುವದು.

*ಹೊಸ ವರ್ಷದ ಆಚರಣೆಯ ಸಂಬಂಧ ಧ್ವನಿವರ್ಧಕವನ್ನು ಅಳವಡಿಸುವ ವೇಳೆ ತಮ್ಮ ಪ್ರದೇಶಕ್ಕೆ ಮಾತ್ರ ಸೀಮಿತವಾಗಿರುವಂತೆ ಸರ್ವೋಚ್ಚ ನ್ಯಾಯಾಲಯವು ನೀಡಿದ ಮಾರ್ಗಸೂಚಿಯನ್ನು ತಪ್ಪದೇ ಪಾಲಿಸುವದು.

*ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವದು ರಸ್ತೆಯಲ್ಲಿ ಅತೀವೇಗವಾಗಿ ಮತ್ತು ನಿರ್ಲಕ್ಷ್ಯತೆಯಿಂದ ವಾಹನ ಚಾಲನೆ ಮಾಡುವದು ವೀಲಿಂಗ್ ಮತ್ತು ರೇಸಿಂಗ್ ಮಾಡುವದು ಹಾಗೂ ಕಾರುಗಳಲ್ಲಿ ಅತಿಯಾಗಿ ಮ್ಯೂಸಿಕ್ ಹಾಕಿಕೊಂಡು ಹೋಗುವದನ್ನು ಗಂಭೀರವಾಗಿ ಪರಿಗಣಿಸಿ ಅಂತಹವರ ಮೇಲೆ ಕಾನೂನಿನ ರೀತ್ಯಾ ಕ್ರಮ ಜರುಗಿಸಲಾಗುವದು.

*ಹೊಸ ವರ್ಷವನ್ನು ಆಚರಿಸುವವರು ರಾತ್ರಿ ಹೊಸ ವರ್ಷ ಆಚರಣೆ ನೆಪದಲ್ಲಿ ರಸ್ತೆಯಲ್ಲಿ ಓಡಾಡುವ ಸಾರ್ವಜನಿಕರನ್ನು, ಮಹಿಳೆಯರನ್ನು ಬಲವಂತವಾಗಿ ನಿಲ್ಲಿಸಿ ಅವರ ಇಚ್ಚೆಗೆ ವಿರುದ್ಧವಾಗಿ ಶುಭ ಕೋರಿ ತೊಂದರೆ ಮಾಡಬಾರದು. ಅಂತಹವರ ವಿರುದ್ಧ ಕ್ರಮ ಜರುಗಿಸಲಾಗುವದು.

(ಮೊದಲ ಪುಟದಿಂದ) *ಹೊಸ ವರ್ಷಾಚಣೆಯ ಹಿನ್ನೆಲೆಯಲ್ಲಿ ಸಾರ್ವಜನಿಕರ ನೆಮ್ಮದಿಗೆ ಭಂಗ ತರುವ ರೀತಿಯಲ್ಲಿ ಪಟಾಕಿಗಳನ್ನು ಸಿಡಿಸುವದನ್ನು ನಿಷೇಧಿಸಲಾಗಿದೆ.

*ಮದ್ಯಪಾನ ಮಾಡಿ ವಾಹನ ಚಲಾಯಿಸುವದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ.

*ಕೊಡಗು ಜಿಲ್ಲಾಧ್ಯಂತ ಚೆಕ್‍ಪೋಸ್ಟ್‍ಗಳನ್ನು ತೆರೆದು ವಾಹನ ತಪಾಸಣೆ ಮಾಡುವದಿದ್ದು ಹಾಗೂ ಠಾಣಾ ಸರಹದ್ದಿನಲ್ಲಿ ಸಹ ವಾಹನ ತಪಾಸಣೆ ಮಾಡಲಿದ್ದು, ಮದ್ಯಪಾನ ಮಾಡಿ ವಾಹನ ಚಲಾಯಿಸುವವರನ್ನು ಕಂಡುಬಂದಲ್ಲಿ ಅವರುಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವದು. ಹಾಗೂ ಸದರಿ ಚಾಲಕರ ಚಾಲನಾ ಪರವಾನಗಿಯನ್ನು ರದ್ದುಪಡಿಸಲು ಸಂಬಂಧಪಟ್ಟ ಪ್ರಾಧಿಕಾರಿಯವರಿಗೆ ವರದಿ ಸಲ್ಲಿಸಲಾಗುವದು.

*ಪ್ರವಾಸಿ ಸ್ಥಳಗಳಲ್ಲಿ, ರಸ್ತೆ ಬದಲಿಗಳಲ್ಲಿ ಮತ್ತು ವಾಹನಗಳ ಒಳಗಡೆ ಕುಳಿತು ಮದ್ಯಪಾನ ಮಾಡುವದನ್ನು ನಿಷೇಧಿಸಲಾಗಿರುತ್ತದೆ.

*ಹೊಸ ವರ್ಷಾಚರಣೆ ಕಾರ್ಯಕ್ರಮಗಳನ್ನು ಆಯೋಜಿಸುವ ಹೊಟೇಲ್, ರೆಸ್ಟೋರೆಂಟ್ ಹಾಗೂ ಕ್ಲಬ್‍ಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ಸೂಕ್ತ ಖಾಸಗಿ ಭದ್ರತಾ ಸಿಬ್ಬಂದಿ ನಿಯೋಜಿಸಿಕೊಳ್ಳುವದು.

*ತಾ.31ರ ರಾತ್ರಿ ಕೊಡಗು ಜಿಲ್ಲಾಧ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿರುತ್ತದೆ ಹಾಗೂ ಸಂಚಾರ ಮತ್ತು ಕಾನೂನು ವಿಭಾಗ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳು ಮತ್ತು ಪೊಲೀಸ್ ಗಸ್ತು ವಾಹನಗಳು ಎಲ್ಲಾ ಕಡೆ ಕಾರ್ಯಪ್ರವೃತ್ತರಾಗಿರುತ್ತವೆ.

*ಸಾರ್ವಜನಿಕರಿಗೆ ಹೊಸ ವರ್ಷಾಚರಣೆಯ ಸಮಯದಲ್ಲಿ ಯಾರಿಂದಲಾದರೂ ತೊಂದರೆಗಳು ಆದಲ್ಲಿ ಮಡಿಕೇರಿಯಲ್ಲಿನ ಜಿಲ್ಲಾ ಪೊಲೀಸ್ ನಿಯಂತ್ರಣ ಕೊಠಡಿ ದೂರವಾಣಿ ಸಂಖ್ಯೆ 08272-228330, 100 ಅಥವಾ ಸ್ಥಳೀಯ ಪೊಲೀಸ್ ಠಾಣೆಗೆ ಸಂಪರ್ಕಿಸಬಹುದಾಗಿದೆ.