ಮಡಿಕೇರಿ, ಡಿ. 30: ಹೌದು ಮುಂಜಾವಿನ ಕತ್ತಲೆಯ ನಡುವೆ ಮನೆಬಾಗಿಲು ತೆರೆಯುವಾಗ ಎದುರಾಗುವ ಕಾಡಾನೆ, ದಾರಿಯಲ್ಲಿ ತೆರಳುವಾಗ ಜವರಾಯನಂತೆ ಬೆನ್ನೇರುವ ಲಾರಿ, ಕಾಡಂಚಿನಲ್ಲಿ ಆಕಸ್ಮಿಕ ಬಿದ್ದ ಬೆಂಕಿ ಆರಿಸುವಾಗ ಒಮ್ಮೆಲೇ ಚಾಚುವ ಆ ಕೆನ್ನಾಲಿಗೆ ದೃಶ್ಯ... ಹೀಗೆ ಒಂದರ ಹಿಂದೆ ಒಂದರಂತೆ ನಮ್ಮ ನಿತ್ಯ ಜೀವನದಲ್ಲಿ ಕಣ್ಣೆದುರು ಗೋಚರಿಸಲಿರುವ ಅನೇಕ ಕ್ಷಣಗಳನ್ನು ಇನ್ನೊಬ್ಬರಿಂದ ಕೇಳುವದಕ್ಕಿಂತಲೂ ಸ್ವತಃ ಅನುಭವಿಸಿದರೆ ಮಾತ್ರ ನೈಜತೆ ಅರಿವಾದೀತು.
ನಾಲ್ಕು ದಿನಗಳ ಹಿಂದೆ ಪ್ರವಾಸಿ ತಾಣ ರಾಜಾಸೀಟ್ ಕೆಳಭಾಗದಲ್ಲಿ ಮಧ್ಯಾಹ್ನದ ಉರಿ ಬಿಸಿಲು ನಡುವೆ ಕಾಡ್ಗಿಚ್ಚು ಕಾಣಿಸಿಕೊಂಡಿತ್ತು. ಬೆಟ್ಟ ಸಾಲಿನಲ್ಲಿ ಶರವೇಗದಿಂದ ಬೆಂಕಿಯ ಜ್ವಾಲೆ ಗಾಳಿಯೊಂದಿಗೆ ತೀವ್ರಗೊಂಡಾಗ, ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಸಹಿತ ಸಿಬ್ಬಂದಿ, ಅಲ್ಲಿಗೆ ಯಾವ ಮಾರ್ಗದಲ್ಲೂ ವಾಹನ (ನೀರಿನ ಟ್ಯಾಂಕರ್) ತೆರಳಲು ಸಾಧ್ಯವಾಗದೆ ಅನಿವಾರ್ಯವೆಂಬಂತೆ ಕೈಗೆ ಸಿಕ್ಕ ಮರದ ಕೊಂಬೆಗಳನ್ನು ಮುರಿದುಕೊಂಡು ಬೆಂಕಿ ನಂದಿಸುತ್ತಿದ್ದರು.
ಇನ್ನೊಂದೆಡೆ ರಾಜಾಸೀಟಿಗೆ ಪ್ರಕೃತಿ ಸೊಬಗು ಸವಿಯಲು ಬಂದಿದ್ದ ಭಾರೀ ಸಂಖ್ಯೆಯ ಪ್ರವಾಸಿಗರು ಈ ಕಾರ್ಯ ನೋಡಿ ಕೇಕೇ ಹಾಕುತ್ತಿದ್ದ ದೃಶ್ಯ ಎದುರಾಯಿತು. ಬೆಂಕಿಯ ತೀವ್ರತೆ ಹೆಚ್ಚಾದಂತೆ ಹಸಿರೆಲೆಯ ಗಿಡಮರಗಳಲ್ಲಿ ಚಟಪಟ ಶಬ್ದದೊಂದಿಗೆ ಬೆಂಕಿ ಭಾನು - ಭುವಿಯನ್ನು ಒಗ್ಗೂಡಿಸಿದಂತೆ ಕಾರ್ಮೋಡ ಆವರಿಸುತ್ತಿತ್ತು. ಕಿಡಿಗಳು ಚದುರಿದ ಎಲ್ಲೆಡೆ ಆ ಬೆಂಕಿ ಆವರಿಸಿಕೊಂಡಿತ್ತು. ಅಲ್ಲಿ ಕಾರ್ಯಾಚರಿಸುತ್ತಿದ್ದವರ ಮೈಮೇಲೆ ಬಿದ್ದ ಕಿಡಿಗಳು ಬಟ್ಟೆಯನ್ನು ಸುಡುತ್ತಿದ್ದರೆ, ಕಾಲಿಗೆ ಧರಿಸಿದ್ದ ರಬ್ಬರ್ ಬೂಟುಗಳು ಬಿಸಿಯಿಂದ ಕರಗುತ್ತಿತ್ತು. ಈ ಸನ್ನಿವೇಶದಲ್ಲೂ ಕರ್ತವ್ಯನಿರತರಿಗೆ ಕಷ್ಟದ ಅನುಭವ ಹೊರತು ನೋಡುಗರಿಗೆ ಗೊತ್ತಾಗಲೇ ಇಲ್ಲ!
ಆ ಬೆನ್ನಲ್ಲೇ ಮಡಿಕೇರಿ ಇತಿಹಾಸದಲ್ಲಿ ಮೊದಲ ಬಾರಿ ಪಟ್ಟಣದೊಳಗೆ ನುಗ್ಗಿ ಬಂದಿದ್ದ ಕಾಡಾನೆಯೊಂದು ಬೆಳ್ಳಂಬೆಳಗ್ಗೆ ಮನೆಬಾಗಿಲು ತೆರೆಯುವಾಗ ಹಟ್ಟಿಯಲ್ಲಿ ಕಂಡಿದ್ದನ್ನು ಸ್ವತಃ ಅನುಭವಿಸಿದವರಿಗೆ ಭಯವೇನು ಎಂಬದು ಗೊತ್ತಾಗಬಹುದು ಹೊರತು ಇತರರಿಂದ ಕೇಳಿದರೆ ಅರ್ಥವಾಗಲಾರದು. ಇಂತಹ ಕ್ಷಣಗಳು ಜೀವನದಲ್ಲಿ ಕೂಡ ಆಕಸ್ಮಿಕ ಅಥವಾ ಒಮ್ಮೊಮ್ಮೆ ಎದುರಾದೀತು ಅಷ್ಟೆ.
ಇನ್ನು ನಮ್ಮ ಪಾಡಿಗೆ ನಾವು ಅತ್ಯಂತ ಜಾಗರೂಕರಾಗಿ ನಮ್ಮ ವಾಹನಗಳಲ್ಲಿ ಅಥವಾ ಇತರರೊಂದಿಗೆ ತೆರಳುತ್ತಿರುತ್ತೇವೆ. ಯಾವದೇ ಅಪಾಯ ಎದುರಾಗದು ಎಂದು ಊಹಿಸುತ್ತಿರುತ್ತೇವೆ. ಬದಲಾಗಿ ಎದುರಿನಿಂದ, ಹಿಂದಿನಿಂದ, ಆ ಮಾರ್ಗದ ಎಡ- ಬಲದಿಂದ ಯಾವಾಗ, ಯಾರು, ಹೇಗೆ ನುಗ್ಗಿ ಬಂದುಬಿಡುತ್ತಾರೆ ಎಂದು ಯೋಚಿಸುವದಿಲ್ಲ. ಅಂತಹ ಸನ್ನಿವೇಶಗಳಿಂದ ಪಾರಾದವರಿಗೆ ಮಾತ್ರ ಅದು ಅನುಭವವಾಗಲಿದೆ.
ದ್ವಿಚಕ್ರ ವಾಹನದಲ್ಲಿ ಹೆದ್ದಾರಿ ಬದಿಯಲ್ಲೇ ಸ್ನೇಹಿತರಿಬ್ಬರು ಕರ್ತವ್ಯ ನಿಮಿತ್ತ ಹೊರಟಿದ್ದರು. ರಸ್ತೆಯೂ ವಿಶಾಲವಿತ್ತು. ಇಂತಹ ಸನ್ನಿವೇಶದಲ್ಲಿ ಹಾಡಹಗಲೇ ಲಾರಿಯೊಂದು ಹಿಂದಿನಿಂದ ತೀವ್ರಗತಿಯಲ್ಲಿ ಭಾರೀ ಶಬ್ದದೊಂದಿಗೆ ಬರುತ್ತಿರುವದು ಆ ಬೈಕ್ ಸವಾರರಿಗೆ ಅರಿವಾಯಿತು. ಸಾಧ್ಯವಿರುವಷ್ಟು ತಮ್ಮ ಬೈಕ್ ವೇಗವನ್ನು ಹೆಚ್ಚಿಸುತ್ತಾರೆ. ಅಷ್ಟರಲ್ಲಿ ಇನ್ನೇನು ಲಾರಿ ಬೈಕ್‍ಗೆ ಅಪ್ಪಳಿಸೀತು ಎನಿಸಲಿದೆ.
ಬೇರೆ ದಾರಿಯಿಲ್ಲದೆ, ದಿಕ್ಕೇ ತೋಚದಂತಾಗಿ... ಎಲ್ಲವೂ ಕತ್ತಲೆಯ ಅನುಭವ... ಭಯದ ನಡುವೆ ಸಾವನ್ನು ಅಪ್ಪಿಕೊಳ್ಳುವ ಮುನ್ನ ಒಮ್ಮೆ ಆ ಬೈಕ್‍ನಲ್ಲಿದ್ದ ಹಿಂಬದಿ ಸವಾರ ತನ್ನ ಶಕ್ತಿ ಮೀರಿ ಹಿಂದೆ ಅಪ್ಪಳಿಸಲಿದ್ದ ಲಾರಿ ಚಾಲಕನತ್ತ ಕೈಯೆತ್ತಿ ಕಿರುಚಿಕೊಳ್ಳುತ್ತಾನೆ...!? ಮರುಕ್ಷಣ ಲಾರಿ ದಿಕ್ಕು ಬದಲಾಯಿಸಿ ನಿಂತುಹೋಗಲಿದೆ. ಬೈಕ್‍ನಲ್ಲಿದ್ದ ಸ್ನೇಹಿತರು ಬದುಕಿದಕ್ಕಾಗಿ ಭಗವಂತನಲ್ಲಿ ಕೃತಜ್ಞತೆ ಸಲ್ಲಿಸುತ್ತಾರೆ. ಆ ಕ್ಷಣಕ್ಕೆ ಏನೂ ಬೇಡವೆನಿಸಿದರೂ ಮುಂದಿನ ಕರ್ತವ್ಯದೊಂದಿಗೆ ಮಡದಿ, ಮಕ್ಕಳು ನೆನಪಾಗುತ್ತಾರೆ.
ಹೀಗೆ ನಿತ್ಯ ಜೀವನದಲ್ಲಿ ಪ್ರತಿಯೊಬ್ಬರಿಗೂ ಒಂದಿಲ್ಲೊಂದು ಆಕಸ್ಮಿಕಗಳು ಎದುರಾಗುತ್ತಲೇ ಇರುತ್ತವೆ. ಅವು ಭಯ, ಆಘಾತ, ಅಚ್ಚರಿ, ಆತಂಕ, ದುಗುಡವನ್ನು ಹೆಚ್ಚಿಸುತ್ತಲೇ ಹೋಗಲಿವೆ. ಅದುವೇ ನಮ್ಮ ಬದುಕಿಗೆ ಅನುಭವವನ್ನು ಕಲಿಸಲಿವೆ. ನನಗಾಗಿ ಎನ್ನುವದನ್ನು ಮರೆಯುವಂತೆ ಮಾಡಲಿವೆ. ನಮಗಾಗಿ ಬದುಕುವ ಪಾಠದೊಂದಿಗೆ ಸಮಾಜದೆಡೆಗೆ ನಮ್ಮನ್ನು ಹೊರಳಿಸಲಿವೆ. ಅಲ್ಲಿಗೆ ನಮ್ಮೊಳಗಿನ ಅಹಂಕಾರ ಕಳಚಿಕೊಂಡು ಅಂತಃರಂಗದೊಳಗೆ ಜಾಗೃತ ಚಿಂತನೆಯ ಹೊಸತನವನ್ನು ಹುಡುಕುವ ಅವಕಾಶ ನೀಡಲಿವೆ. ಆ ಮಾತ್ರದಿಂದಲೇ ನಮ್ಮ ಹಿರಿಯರು ‘ಪರಿವರ್ತನೆ ಜಗದ ನಿಯಮ’ ಎಂದಿರಬೇಕು. -ಶ್ರೀಸುತ.