ಕರಿಕೆ, ಡಿ. 30: ಕನ್ನಡ ನೆಲದಲ್ಲಿ ಕನ್ನಡ ಭಾಷೆ ಮಾತನಾಡುವವರ ಸಂಖ್ಯೆ ವಿರಳವಾಗುತ್ತಿದ್ದು, ಮೊದಲು ಕನ್ನಡ ಭಾಷೆಗೆ ಆದ್ಯತೆ ನೀಡಬೇಕೆಂದು ಶಾಸಕ ಕೆ.ಜಿ. ಬೋಪಯ್ಯ ವಿಷಾದ ವ್ಯಕ್ತಪಡಿಸಿದರು.ಗಡಿ ಗ್ರಾಮ ಕರಿಕೆ ಎಳ್ಳುಕೊಚ್ಚಿಯ ಬೇಕಲ್ ಮೈದಾನದ ಪಂಜೆ ಮಂಗೇಶರಾಯ ವೇದಿಕೆಯಲ್ಲಿ ನಡೆದ ಮಡಿಕೇರಿ ತಾಲೂಕು 9ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.
ನಮ್ಮ ಸಂಸ್ಕøತಿ, ಆಚಾರ- ವಿಚಾರಗಳಿಗೆ ಆದ್ಯತೆ ನೀಡಿ ಅನೇಕತೆಯಲ್ಲಿ ಏಕತೆಯನ್ನು ಕಾಣಬೇಕು. ಕನ್ನಡ ಭಾಷೆಗಾಗಿ ಹೋರಾಟ ಮಾಡುತ್ತಿರುವವರ ಮಕ್ಕಳು ಕನ್ನಡ ಭಾಷೆ ಬಿಟ್ಟು ಇತರ ಭಾಷೆಯ ಮಾಧ್ಯಮಗಳಲ್ಲಿ ಓದುತ್ತಿರುವದು ದುರದೃಷ್ಟವೆಂದರು.
ಕನ್ನಡಿಗ ಕೆಂಪೇಗೌಡ ಕಟ್ಟಿದ ಕನ್ನಡ ನಾಡಿನಲ್ಲಿ ಕನ್ನಡ ಭಾಷೆ ಕಣ್ಮರೆ ಯಾಗುತ್ತಿರುವದು ವಿಷಾದನೀಯ. ಇಲ್ಲಿನ ಸಂಸ್ಕøತಿ, ಆಚಾರ- ವಿಚಾರ, ನಾಡು - ನುಡಿಗೆ ಹೊಂದಿಕೊಂಡು ಬೇರೆಯವರಿಗೆ ಮಾರ್ಗದರ್ಶನ ಮಾಡುತ್ತಿರುವ ಕರಿಕೆ ಗ್ರಾಮದ ಕನ್ನಡ ಭಾಷಿಕರು ಹಾಗೂ ಇತರ ಭಾಷಿಕರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಮುಖ್ಯ ಭಾಷಣ ಮಾಡಿದ ಹಂಪಿ ಕನ್ನಡ ವಿ.ವಿ. ಡೀನ್, ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಎ.ವಿ. ನಾವಡ ಮಾತನಾಡಿ ದೂರದ ಬೆಂಗಳೂರು, ಮಂಡ್ಯ, ಹಾಸನ, ಇತರೆಡೆಗಳಲ್ಲಿ ಕನ್ನಡ ಪರ ಕೆಲಸ ಮಾಡಲು ಸುಲಭ ಸಾಧ್ಯವಾಗಿದೆ. ಆದರೆ ಗಡಿಭಾಗಗಳಲ್ಲಿ ಕನ್ನಡ ಪರ ಕೆಲಸ ಮಾಡಲು ಅನೇಕ ಸವಾಲುಗಳನ್ನು ಎದುರಿಸಬೇಕಾಗಿದೆ. ಕೊಡಗಿನ ಸಾಹಿತಿಗಳು ಕನ್ನಡಕ್ಕೆ ನೀಡಿದ ಕೊಡುಗೆ ಅಪಾರವಾಗಿದೆ. ಗಡಿಭಾಗದಲ್ಲಿ
(ಮೊದಲ ಪುಟದಿಂದ) ಕನ್ನಡ ಶಾಲೆ ಕಾರ್ಯಾಚರಿಸಬೇಕಾದರೆ ಗಡಿಭಾಗದ ಗ್ರಾಮಸ್ಥರ ಅಭಿನಂದನೆ ಸಲ್ಲಿಸಲೇಬೇಕಾಗಿದೆ. ಸರ್ಕಾರ ಕನ್ನಡ ಶಾಲೆಗಳನ್ನು ಮುಚ್ಚುವ ಆದೇಶ ಹೊರಡಿಸುವ ಬದಲು ಶಾಲೆಗಳು ಕಾರ್ಯಾರಂಭ ಮಾಡಲು ಸಹಕಾರ ನೀಡಬೇಕು ಎಂದರು.
ಕೊಡಗು ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ. ಅನಂತಶಯನ ಮಾತನಾಡಿ ಮೂಲ ಸಂಸ್ಕøತಿಗೆ ಧಕ್ಕೆಯಾಗದ ರೀತಿಯಲ್ಲಿ ಗಡಿಗ್ರಾಮದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸುತ್ತಿರುವದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಜಾನಪದ ಗೀತೆ ಹಾಡಿ ಜನರನ್ನು ರಂಜಿಸಿದರು.
ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷ ಬಿ.ಎ. ಷಂಶುದ್ದೀನ್ ಮಾತನಾಡಿ, ಕನ್ನಡ ನಾಡಿನ ಭಾಷೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಪ್ರಯತ್ನಿಸಿ ವಿಶ್ವ ಮಾನವರಾಗುವಂತೆ ಕರೆ ನೀಡಿದರು.
ಕೇರಳ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್.ವಿ. ಭಟ್ ಮಾತನಾಡಿ ಗಡಿಪ್ರದೇಶ ಕಾಸರಗೋಡಿನಲ್ಲಿ ಕನ್ನಡ ಭಾಷೆ ನಶಿಸಿ ಹೋಗುತ್ತಿದ್ದು, ಅಲ್ಲಿನ ಸರ್ಕಾರ ಕನ್ನಡಿಗರನ್ನು ಕಡೆಗಣಿಸುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಈ ಸಂದರ್ಭ ಜಿ.ಪಂ. ಸದಸ್ಯೆ ಕವಿತಾ ಪ್ರಭಾಕರ್, ತಾ.ಪಂ. ಸದಸ್ಯೆ ಸಂಧ್ಯಾ, ಕರಿಕೆ ಗ್ರಾ.ಪಂ. ಅಧ್ಯಕ್ಷ ಬಾಲಚಂದ್ರ ನಾಯರ್, ಕೊಡಗು ಜಿಲ್ಲಾ ಲೇಖಕರ ಮತ್ತು ಕಲಾವಿದರ ಬಳಗದ ಅಧ್ಯಕ್ಷ ಎಂ.ಪಿ. ಕೇಶವ ಕಾಮತ್, ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ರಾಜ್ಯ ಸಮಿತಿ ನಿರ್ದೇಶಕ ಅನುಕಾರ್ಯಪ್ಪ, ಜಿಲ್ಲೆಯ ಕಸಾಪದ ವಿವಿಧ ಘಟಕಗಳ ಅಧ್ಯಕ್ಷರಾದ ಕುಡೆಕಲ್ ಸಂತೋಷ್, ಎಸ್.ಡಿ. ವಿಜೇತ್, ಮಧೋಶ್ ಪೂವಯ್ಯ, ಎ.ಎಸ್. ಶ್ರೀಧರ್, ಪಿ.ಪಿ. ಸುಕುಮಾರ್, ಕೆ.ಕೆ. ನಾಗರಾಜಶೆಟ್ಟಿ, ಬೇಕಲ್ ಜಯರಾಮ ಗೌಡ, ಮಾಜಿ ಗ್ರಾ.ಪಂ. ಅಧ್ಯಕ್ಷ ಕೋಡಿ ಪೊನ್ನಪ್ಪ ಹಾಗೂ ಇತರರು ಇದ್ದರು.
ಕರಿಕೆ ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳು ನಾಡಗೀತೆ ಹಾಗೂ ರೈತಗೀತೆ ಹಾಡಿದರೆ, ಗ್ರಾ.ಪಂ. ಸದಸ್ಯ ಬಿ.ಎಸ್. ರಮಾನಾಥ್ ಸ್ವಾಗತಿಸಿ, ಕರಿಕೆ ಸರ್ಕಾರಿ ಪ್ರೌಢಶಾಲಾ ಶಿಕ್ಷಕ ನಿಂಗಪ್ಪ ಹನುಮಣ್ಣನವರ್ ಹಾಗೂ ಕಸಾಪ ನಿರ್ದೇಶಕಿ ಚೋಕಿರ ಅನಿತಾ ದೇವಯ್ಯ ಕಾರ್ಯಕ್ರಮ ನಿರೂಪಿಸಿ ಪತ್ರಿಕಾ ವರದಿಗಾರ ಹೊದ್ದೆಟ್ಟಿ ಸುಧೀರ್ ಕುಮಾರ್ ಮಂಡಿಸಿದರು.